






ಕಡಬ: ಕಳೆದ 19 ವರ್ಷಗಳಿಂದ ಪತ್ನಿ ಹಾಗೂ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಲ್ಲದೆ, ಜೀವ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಕಳಾರ ಹೌಸ್ ನಿವಾಸಿ ಮಿರ್ಷಾದ್ (38) ಆರೋಪಿಯಾಗಿದ್ದು, ಈತನ ಪತ್ನಿ ಝರೀನಾ (39) ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 2007ರಲ್ಲಿ ಇವರ ವಿವಾಹವಾಗಿದ್ದು, ನಾಲ್ವರು ಹೆಣ್ಣು ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದರು.



ದೂರಿನ ಪ್ರಕಾರ, ಕಳೆದ ಮೂರು ವರ್ಷಗಳಿಂದ ಮಿರ್ಷಾದ್ ತನ್ನ ಪತ್ನಿ ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದನು. ಮದುವೆಯ ಸಂದರ್ಭದಲ್ಲಿ ನೀಡಿದ್ದ 15 ಪವನ್ ಚಿನ್ನ ಹಾಗೂ 1.5 ಲಕ್ಷ ರೂ. ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದು, ಪತ್ನಿಯ ಹೆಸರಿನಲ್ಲಿದ್ದ ಮನೆಯನ್ನು ಆಕೆಯ ಅಕ್ಷರಜ್ಞಾನದ ಕೊರತೆಯನ್ನು ಬಳಸಿಕೊಂಡು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಪತ್ನಿಯ ತಾಯಿ ಮನೆಯಿಂದ ನೀಡುತ್ತಿದ್ದ ಹಣವನ್ನು ಕಿತ್ತುಕೊಂಡು ಅಮಲು ಪದಾರ್ಥಗಳಿಗೆ ವ್ಯಯಿಸುತ್ತಿದ್ದನು. ಈ ವಿಚಾರಗಳನ್ನು ಪ್ರಶ್ನಿಸಿದಾಗ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನೆಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 5, 2026 ರಂದು ರಾತ್ರಿ 7 ಗಂಟೆ ಸುಮಾರಿಗೆ ಮಿರ್ಷಾದ್ ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಝರೀನಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಘಟನೆ ಪಕ್ಕದವರಿಗೆ ತಿಳಿಯಬಾರದೆಂಬ ಉದ್ದೇಶದಿಂದ ಅವರನ್ನು ಸಂತ್ರಸ್ತೆಯ ತಂಗಿಯ ಮನೆಗೆ ಬಿಟ್ಟು ಬಂದಿದ್ದನು. ಭಯದ ಹಿನ್ನೆಲೆಯಲ್ಲಿ ತಕ್ಷಣ ದೂರು ನೀಡಲು ಸಾಧ್ಯವಾಗದಿದ್ದರೂ, ನಂತರ ತಾಯಿ ಮನೆಯವರೊಂದಿಗೆ ಚರ್ಚಿಸಿ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 85, 115(2), 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.









