






ಪುತ್ತೂರು: ಸ್ಥಳೀಯ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಬುರುಡೆ ಗ್ಯಾಂಗ್ ಪ್ರಹಸನಕ್ಕೆ ಸಂಬಂಧಿಸಿದಂತೆ ಯಕ್ಷಗಾನ ಕಲಾವಿದರಿಗೆ ಮತ್ತು ಅವರ ಮನೆಯ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮಕ್ಕೆ ಕಲಾವಿದರು ಒತ್ತಾಯಿಸಿದ್ದಾರೆ.


ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ ರೈ ಮಂದಾರ, “ಮಹೇಶ್ ಶೆಟ್ಟಿ ತಿಮರೋಡಿ ಅವರು ದೂರವಾಣಿ ಮೂಲಕ ಕಲಾವಿದರನ್ನು ಅತ್ಯಂತ ಕೀಳಾಗಿ ನಿಂದಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪುತ್ತೂರು ಗ್ರಾಮಾಂತರ ಮತ್ತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.” ಎಂದು ತಿಳಿಸಿದರು.



ಕಳೆದ ನವೆಂಬರ್‌ನಲ್ಲಿ ಪ್ರಸಾರವಾದ ಈ ಪ್ರಹಸನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ, ಏಪ್ರಿಲ್ 11ರಂದು ಕಲಾವಿದ ಪ್ರಜ್ವಲ್ ಕುಮಾರ್ ಅವರಿಗೆ ಕರೆ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಅವರು, ಕಲಾವಿದರ ತಾಯಿಯ ಬಗ್ಗೆಯೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್ ಕುಮಾರ್, “ಒಬ್ಬ ಹೆಣ್ಣಿನ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎನ್ನುವ ವ್ಯಕ್ತಿ, ಇನ್ನೊಬ್ಬರ ಮನೆಯ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ? ನಾವು ಮಾಡಿರುವ ಪ್ರಸಹನಕ್ಕೂ ಇಲ್ಲಿನ ಹೋರಾಟಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರು ಅದನ್ನು ತಮಗೆ ತಾವೇ ಜೋಡಿಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮಗೆ ಕಾನೂನಿನ ಮೇಲೆ ಗೌರವವಿದ್ದು, ನ್ಯಾಯ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಮತ್ತೋರ್ವ ಕಲಾವಿದ ದಿನೇಶ್ ಕೊಡಪದವು ಮಾತನಾಡಿ, “ಪ್ರಹಸನ ಪ್ರಸಾರವಾಗಿ ಆರು ತಿಂಗಳು ಕಳೆದರೂ ಬೆದರಿಕೆಗಳು ನಿಂತಿಲ್ಲ. ‘ಬುರುಡೆ ಗ್ಯಾಂಗ್’ ಎಂಬ ಹೆಸರನ್ನು ಯಾರೋ ತಮ್ಮ ಮೇಲೆ ಹಾಕಿಕೊಂಡು ವಿವಾದ ಮಾಡುತ್ತಿರುವುದು ವಿಪರ್ಯಾಸ” ಎಂದರು.
ಸುದ್ದಿಗೋಷ್ಠಿಯಲ್ಲಿ ಭಾಗವತ ಧೀರಜ್ ರೈ ಸಂಪಾಜೆ ಉಪಸ್ಥಿತರಿದ್ದರು.










