ಪುತ್ತೂರು ಜಾತ್ರೆ-ವೈಭವದ ಬ್ರಹ್ಮರಥೋತ್ಸವ

0

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಽ ಜಾತ್ರೋತ್ಸವದಲ್ಲಿ ಏ.17ರಂದು ತಡರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.


ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು.ಬ್ರಹ್ಮರಥೋತ್ಸವದ ಮೊದಲು ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನ ‘ಪುತ್ತೂರು ಬೆಡಿ’ ಅದ್ದೂರಿಯಾಗಿ ನಡೆಯಿತು.ಈ ಬಾರಿಯೂ ಭಕ್ತರ ಸೇವೆಯಿಂದಲೇ ವಿಶೇಷ ಸಿಡಿಮದ್ದು ಪ್ರದರ್ಶನ ನಡೆದಿರುವುದು ವಿಶೇಷವಾಗಿತ್ತು.ಕಾರ್ಕಳದ ಗುರ್ಜಿ ನಾಗರಾಜ್ ಕಿಣಿ ಫಯರ್ ವರ್ಕ್ಸ್ ಸಂಸ್ಥೆಯವರ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.


ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.ಸಂಜೆ ದೇವರು ಒಳಾಂಗಣದಿಂದ ಹೊರಾಂಗಣಕ್ಕೆ ಪ್ರವೇಶವಾಗುವ ಮೊದಲು ಶ್ರೀ ಗಣಪತಿ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.ಬಳಿಕ ಶ್ರೀ ದೇವರು ಸರಿಯಾಗಿ 8 ಗಂಟೆಗೆ ರಾಜಾಂಗಣಕ್ಕೆ ಪ್ರವೇಶ ಮಾಡಿದರು.ಉತ್ಸವದ ಬಳಿಕ ಗಂಟೆ 8.40ಕ್ಕೆ ಕಂಡನಾಯಕ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು.ಬಳಿಕ ಶ್ರೀ ದೇವರಿಗೆ ವಾದ್ಯ, ಬ್ಯಾಂಡ್ ಸೇವೆ ನಡೆಯಿತು.ಅದಾದ ಬಳಿಕ ರಾತ್ರಿ ಗಂಟೆ 9.23ಕ್ಕೆ ಈಶಾನ್ಯ ದಿಕ್ಕಿನ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯುತ್ತಿದ್ದಂತೆ ಸರಿ ಸುಮಾರು 9.30 ಗಂಟೆಗೆ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಹೊರಾಂಗಣ ಪ್ರವೇಶವಾಯಿತು.ಈ ಸಂದರ್ಭ ಶ್ರೀ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು.9.39 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವರು ಕಟ್ಟೆಯಿಂದ ಇಳಿದು 9.55 ಗಂಟೆಗೆ ರಾಜಾಂಗಣದಿಂದ ಶ್ರೀ ದೇವರು ಉಳ್ಳಾಲ್ತಿ ದೈವಗಳ ಭಂಡಾರದ ಜೊತೆ ಅಲಂಕೃತಗೊಂಡ ಬ್ರಹ್ಮರಥದ ಬಳಿ ತೆರಳಿದರು.ಅಲ್ಲಿ ಬ್ರಹ್ಮರಥಕ್ಕೆ ಶ್ರೀ ದೇವರು ಬ್ರಹ್ಮರಥಕ್ಕೆ ಒಂದು ಸುತ್ತು ಬಂದ ಬಳಿಕ ಕಾಜುಕುಜುಂಬ ದೈವದ ನುಡಿಗಟ್ಟು ನಡೆಯಿತು.ಶಶಾಂಕ್ ನೆಲ್ಲಿತ್ತಾಯ ಮಧ್ಯಸ್ಥರಾಗಿ ಸಂಪ್ರದಾಯದ ನುಡಿಯನ್ನಾಡಿದರು.ಬಳಿಕ ಶ್ರೀ ದೇವರು ಬ್ರಹ್ಮರಥದ ಎದುರು ಭಕ್ತರಿಗೆ ದರುಶನ ಕುರುಣಿಸಿ ಗಂಟೆ 10.25ಕ್ಕೆ ರಥಾರೂಢರಾದರು.
ಇದೇ ಸಂದರ್ಭದಲ್ಲಿ ಬ್ರಹ್ಮರಥ ಪೂಜೆ ಸೇವೆ ಮಾಡಿಸಿದವರಿಗೆ ಕ್ಷೇತ್ರದ ತಂತ್ರಿಗಳು ಪೂಜಾ ಪ್ರಸಾದ ವಿತರಣೆ ಮಾಡಿದರು.ಬಳಿಕ ಪುತ್ತೂರು ಬೆಡಿ ಆರಂಭವಾಯಿತು.


ರಾತ್ರಿ 10.30ರ ಸುಮಾರಿಗೆ ಸಿಡಿಮದ್ದು ಪ್ರದರ್ಶನ ಆರಂಭಗೊಂಡಿತು.ಸುಡುಮದ್ದು ಪ್ರದರ್ಶನ ಬಳಿಕ ಬ್ರಹ್ಮರಥದ ಮುಂದೆ ಶಾಸಕ ಅಶೋಕ್ ಕುಮಾರ್ ರೈ ದಂಪತಿ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ.,ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ,ಈಶ್ವರ ಬೆಡೇಕರ್, ವಿನಯ ಸುವರ್ಣ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್,ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ,ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಸದಸ್ಯರಾದ ಎನ್.ಕರುಣಾಕರ ರೈ ದೇರ್ಲ, ಯು.ಪಿ.ರಾಮಕೃಷ್ಣ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆದರು.ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಽಕಾರಿ ದೇವಪ್ಪ ಪಿ.ಆರ್, ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಗೌಡ ಒಳಗುಡ್ಡೆ, ಬಲ್ನಾಡು ದೈವಸ್ಥಾನದ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ,ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಗ್ಯಾರಂಟಿ ಯೋಜನೆಗಳ ಅನುಷ್ಟಾನದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಹೈಕೋರ್ಟ್ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಮುರಳೀಧರ ರೈ ಮಠಂತಬೆಟ್ಟು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.‌


ರಾತ್ರಿ 12.07ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಬ್ರಹ್ಮರಥ ರಥಬೀದಿಯಲ್ಲಿ ಸಾಗಿ ಮಧ್ಯೆ ತಂತ್ರಿಗಳು ರಥದಿಂದ ಇಳಿದು ಮೂಲ ನಾಗನ ಕಟ್ಟೆಯಲ್ಲಿ ತಂತ್ರ ತೂಗಿ ಬಂದರು.ಬ್ರಹ್ಮರಥದಿಂದ ಇಳಿದ ಶ್ರೀ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಶ್ರೀ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯಾಗಿ ಕಟ್ಟೆಪೂಜೆ ನಡೆದು ಮುಂಜಾನೆ ದೇವಳದ ಒಳಗೆ ದೇವರ ಪ್ರವೇಶ, ಶಯನ ನಡೆಯಿತು.


ಹಿಂದು ಬಾಂಧವರ ಬಹುತೇಕ ಅಂಗಡಿಗಳು ಮಧ್ಯಾಹ್ನ ಬಂದ್:
ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಪೇಟೆಯಲ್ಲಿ ಹಿಂದೂ ಬಾಂಧವರ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಸಂಜೆ ವೇಳೆ ಬಂದ್ ಮಾಡಲಾಗಿತ್ತು.ಕೆಲವೊಂದು ಅಂಗಡಿಗಳಿಗೆ ಮಧ್ಯಾಹ್ನದ ಬಳಿಕ ರಜೆ ಸಾರಲಾಗಿತ್ತು.


ಬಿಗಿ ಪೊಲೀಸ್ ಬಂದೋಬಸ್ತ್,ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಕೆ:
ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಜಾತ್ರಾ ಗದ್ದೆಯಲ್ಲಿ ಬ್ರಹ್ಮರಥದ ಬಳಿಯಲ್ಲೇ 10 ಅಡಿ ಎತ್ತರದಲ್ಲಿ ಪೊಲೀಸ್ ಚೌಕಿ ಮತ್ತು ಅಯ್ಯಪ್ಪ ಗುಡಿಯ ಬಳಿ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ದೇವಳದ ವತಿಯಿಂದಲೇ ದೇವಳದ ರಾಜಗೋಪುರದ ಸೋಪಾನ ಮಂಟಪದಲ್ಲಿನ ಮಾಹಿತಿ ಕೇಂದ್ರದಲ್ಲಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಉಪನ್ಯಾಸಕಿ ಹರಿಣಿ ಪುತ್ತೂರಾಯ, ಡಾ| ರಾಜೇಶ್ ಬೆಜ್ಜಂಗಳ ಉದ್ಘೋಷಕರಾಗಿ ಭಕ್ತಾದಿಗಳಿಗೆ ವಿವಿಧ ಮಾಹಿತಿಯನ್ನು ಕ್ಷಣಕ್ಷಣಕ್ಕೂ ನೀಡುತ್ತಿದ್ದರು.ಪೊಲೀಸ್ ಇಲಾಖೆ ವತಿಯಿಂದ ಗದ್ದೆಯ ವಿವಿಧ ಕಡೆಗಳಲ್ಲಿ ಸಹಿತ ಪುತ್ತೂರು ಪೇಟೆಯಾದ್ಯಂತ ಹೆಚ್ಚುವರಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು.ಮಾತ್ರವಲ್ಲದೆ ದೇವಳದ ಸುತ್ತಮುತ್ತ, ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.ಜಾತ್ರಾ ಗದ್ದೆಯಲ್ಲಿಯೇ ಪೊಲೀಸ್ ಹೊರ ಠಾಣೆಯನ್ನು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು.ಮಪ್ತಿನಲ್ಲೂ ಪೊಲೀಸರು ಇದ್ದರು.ಜತೆಗೆ ಅಗ್ನಿ ಶಾಮಕ, ಆರೋಗ್ಯ ಇಲಾಖೆ ಮತ್ತು, ಮೆಸ್ಕಾಂ ಇಲಾಖೆ, ನಗರಸಭೆಯ ತಾತ್ಕಾಲಿಕ ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು.


ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್:
ಜಾತ್ರಾ ಗದ್ದೆ ಮತ್ತು ಪೇಟೆ ಸಹಿತ ಒಟ್ಟು 100ಕ್ಕೂ ಮಿಕ್ಕಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯವರು ಮೊಬೈಲ್ ಕಂಟ್ರೋಲ್ ರೂಮ್‌ನಲ್ಲಿ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಿಕೊಂಡಿದ್ದರು.ದೇವಳದ ಬ್ರಹ್ಮರಥ ಮಂದಿರದ ಬಳಿ ವಾಹನವೊಂದರಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳ ಕಂಟ್ರೋಲ್ ರೂಮ್ ಮಾಡಲಾಗಿತ್ತು.


ಹೆಚ್ಚುವರಿ ವಾಹನ ವ್ಯವಸ್ಥೆ:
ತಾಲೂಕಿನ ವಿವಿಧ ಪ್ರದೇಶಗಳಿಂದ ಬ್ರಹ್ಮರಥೋತ್ಸವ ಕಾರ‍್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ ಬಸ್ಸುಗಳ ಓಡಾಟ ವ್ಯವಸ್ಥೆ ಮಾಡಿತ್ತು.ಖಾಸಗಿ ಬಸ್‌ಗಳ ಸಹಿತ ಇತರ ಟೂರಿಸ್ಟ್ ವಾಹನಗಳೂ ಹೆಚ್ಚುವರಿ ಓಡಾಟ ನಡೆಸಿದವು.


ಮಜ್ಜಿಗೆ, ಪಾನಕ ವಿತರಣೆ:
ಜಾತ್ರೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗಾಗಿ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಉಚಿತ ಮಜ್ಜಿಗೆ ನೀರಿನ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.ವಕೀಲರ ಸಂಘ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮತ್ತು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಶುದ್ಧ ಕುಡಿಯುವ ನೀರಿನ ಉಚಿತ ವಿತರಣೆ ವ್ಯವಸ್ಥೆ ಜತೆಗೆ ದೇವಳದ ವತಿಯಿಂದಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಹಾಲಿಂಗೇಶ್ವರ ಲೈಮ್ ಸೋಡಾ ಪುತ್ತೂರು ಇವರಿಂದ ಬೆಳಗ್ಗೆ ಬಿರಿಂಡಾ ಜ್ಯೂಸ್ ವಿತರಣೆ ಸಹಿತ ಕೆಲವೊಂದು ಸಂಘಟನೆಗಳಿಂದ ಬಿರಿಂಡಾ, ಲಿಂಬೆ ಶರಬತ್ತು ಪಾನಕ ವಿತರಣೆ ಮಾಡಲಾಗಿತ್ತು.


ಸಾವಿರಕ್ಕೂ ಮಿಕ್ಕಿ ಸ್ವಯಂ ಸೇವಕರು:
ದೇವಳದ ನಿತ್ಯ ಕರಸೇವಕರಲ್ಲದೆ ಸ್ವಯಂ ಪ್ರೇರಿತರಾಗಿ ನೂರಕ್ಕೂ ಅಽಕ ಸ್ವಯಂ ಸೇವಕರು ವಾಹನ ಸಂಚಾರ ನಿಯಂತ್ರಣ, ಭಕ್ತಾದಿಗಳಿಗೆ ಮಾರ್ಗದರ್ಶನ, ಭಕ್ತರ ಸಂಖ್ಯೆಯನ್ನು ಉತ್ಸವದ ಸಂದರ್ಭ ನಿಯಂತ್ರಿಸಲು ಮತ್ತು ಅನ್ನಪ್ರಸಾದ ಬಡಿಸುವ ವ್ಯವಸ್ಥೆಯಲ್ಲೂ ಸಹಕರಿಸಿದರು.ವಿವಿಧ ಸಂಘ ಸಂಸ್ಥೆಗಳು ಅನ್ನಪ್ರಸಾದ ವಿತರಣೆಯಲ್ಲಿ ಸಹಕರಿಸಿದರು.ನಿತ್ಯ ಕರಸೇವಕರು ವಿವಿಧ ಜವಾಬ್ದಾರಿಯುತ ಕೆಲಸ ನಿರ್ವಹಿಸಿದರು.ಹಲವಾರು ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.ರಾತ್ರಿ 10 ಗಂಟೆಯ ತನಕ ಅನ್ನಪ್ರಸಾದ ವಿತರಣೆ ನಡೆಯುತ್ತಿತ್ತು.


ನಿರಂತರ ಅನ್ನದಾನ:
ವರ್ಷಾವಧಿ ಜಾತ್ರೋತ್ಸವ ಆರಂಭಗೊಂಡ ದಿನದಿಂದಲೇ ಆಗಮಿಸಿದ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ನಡೆದಿದ್ದು ಲಕ್ಷಾಂತರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.ಮಧ್ಯಾಹ್ನ ಊಟದ ವ್ಯವಸ್ಥೆ ಆರಂಭವಾಗಿ ರಾತ್ರಿ ಗಂಟೆ 10ರ ತನಕವೂ ನಿರಂತರ ನಡೆದಿತ್ತು.ಭಕ್ತಾದಿಗಳಿಗೆ ಅನ್ನಪ್ರಸಾದ ಸ್ವೀಕರಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.


118 ಮಂದಿಯಿಂದ ಬ್ರಹ್ಮರಥ ಪೂಜೆ:
ಜಾತ್ರೋತ್ಸವದಲ್ಲಿ ನಿತ್ಯ ಕಟ್ಟೆ ಪೂಜೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಕಟ್ಟೆ ಪೂಜೆ ಸೇವೆ ಮಾಡಿಸುತ್ತಿದ್ದರು.ಏ.14ರಂದು ಸೌರಮಾನ ಯುಗಾದಿ(ವಿಷು) ಸಂದರ್ಭದಲ್ಲಿ 600ಕ್ಕೂ ಮಿಕ್ಕಿ ಕಟ್ಟೆ ಪೂಜೆ ಸೇವೆಯನ್ನು ಭಕ್ತರು ಮಾಡಿದ್ದರು.ಏ.17ರಂದು ರಾತ್ರಿ 80ಕ್ಕೂ ಅಧಿಕ ಕಟ್ಟೆಪೂಜೆ ಸೇವೆ ನಡೆಯಿತು.ಬಳಿಕ ಬ್ರಹ್ಮರಥದಲ್ಲಿ ಶ್ರೀ ದೇವರು ಆರೂಢರಾದ ಬಳಿಕ 118 ಮಂದಿ ಬ್ರಹ್ಮರಥ ಪೂಜೆ ಸೇವಾರ್ಥಿಗಳಿಗೆ ಸಂಕಲ್ಪ ನೆರವೇರಿಸಲಾಯಿತು.ರಥ ಸೇವಾರ್ಥಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ಗ್ಯಾಲೆರಿ ವ್ಯವಸ್ಥೆ ಮಾಡಲಾಗಿತ್ತು.ಸುಡು ಮದ್ದು ಪ್ರದರ್ಶನದ ಬಳಿಕ ರಥ ಸ್ವಸ್ಥಾನಕ್ಕೆ ಮರಳಿದ ಬಳಿಕ ಪ್ರಸಾದ ವಿತರಣೆ ನಡೆಯಿತು.ಬ್ರಹ್ಮರಥ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ರಥ ಬೀದಿಯ ಬಳಿ ನಿಲ್ಲಲು ಪ್ರತ್ಯೇಕ ಪ್ಲ್ಯಾಟ್‌ಪಾರ್ಮ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ರೂ.10 ಲಕ್ಷದ ಪುತ್ತೂರು ಬೆಡಿ
ಈ ಬಾರಿ ಸಿಡಿಮದ್ದು ಪ್ರದರ್ಶನವನ್ನು ಕಾರ್ಕಳದ ಗುರ್ಜಿ ನಾಗರಾಜ್ ಕಿಣಿ ಫಯರ್‌ವರ್ಕ್ಸ್ ಅವರು ನಡೆಸಿದರು.ಕಳೆದ ವರ್ಷದಂತೆ ಈ ಬಾರಿಯೂ ಭಕ್ತರಿಂದಲೇ ಸೇವೆಯ ರೂಪದಲ್ಲಿ ಸುಡುಮದ್ದು ಪ್ರದರ್ಶನ ನಡೆದಿದೆ.ಈ ಬಾರಿ ರೂ.10 ಲಕ್ಷದ ಸುಡುಮದ್ದು ಪ್ರದರ್ಶನಗೊಂಡಿದೆ.ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ವರ್ಣಮಯ ಸಿಡಿಮದ್ದು ಪ್ರದರ್ಶನ ನಡೆದಿದೆ.ಆರಂಭದಲ್ಲಿ 5 ಪ್ಯಾರಾಚ್ಯೂಟ್ ಬೆಳಕು ವಿಶೇಷವಾಗಿತ್ತು.ಪ್ಯಾರಾಚೂಟ್‌ನಲ್ಲಿ ‘ಓಂ ನಮ: ಶಿವಾಯ’, ‘ಮಹತೋಭಾರ ಮಹಾಲಿಂಗೇಶ್ವರ’ ಎಂದು ವರ್ಣಗಳಲ್ಲಿ ಬರೆದಿದ್ದುದು ಗಮನ ಸೆಳೆಯಿತು.


ಸುದ್ದಿಯಲ್ಲಿ ನಿರಂತರ ನೇರಪ್ರಸಾರ
ಏ.18ರಂದು ಬೆಳಿಗ್ಗೆ ನಡೆದ ದರ್ಶನ ಬಲಿ, ರಾತ್ರಿ ನಡೆದ ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ಸೇರಿದಂತೆ ಸಂಪೂರ್ಣ ಜಾತ್ರೋತ್ಸವ ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿತ್ತು.ಜಾತ್ರೋತ್ಸವದ ಧ್ವಜಾರೋಹಣ ನಡೆದ ದಿನದಿಂದ ಪೂರ್ತಿ ಜಾತ್ರೆಯ ಸಂಪೂರ್ಣ ಚಿತ್ರಣ ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here