ಪಡೀಲ್ : ಡಿವೈಡರ್‌ ಗೆ ಡಿಕ್ಕಿಯಾದ ಬೈಕ್‌- ಸ್ಥಳದಲ್ಲೇ ಸವಾರ ಮೃತ್ಯು

0

ಪುತ್ತೂರು:ಬೈಕೊಂದು ಡಿವೈಡರ್ ಏರಿ ವಿದ್ಯುತ್ ಕಂಬದ ಅಡಿಪಾಯಕ್ಕೆ ಡಿಕ್ಕಿಯಾಗಿ ಇನ್ನೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಪಡೀಲ್‌ನಲ್ಲಿ ಏ.18ರಂದು ನಡೆದಿದೆ. ಇನ್ನೊಂದು ಬೈಕ್‌ನ ಸವಾರರು ಗಾಯಗೊಂಡಿದ್ದಾರೆ.


ಬೆಳ್ಳಿಪ್ಪಾಡಿ ಕೊಡಿಮರ ವಿಶ್ವನಾಥ ಪೂಜಾರಿ ಎಂಬವರ ಪುತ್ರ ಬೈಕ್ ಸವಾರ ಧನ್‌ರಾಜ್(21ವ.)ರವರು ಮೃತಪಟ್ಟವರು.ಡಿಪ್ಲೊಮಾ ಮುಗಿಸಿ ಬೆಂಗಳೂರುನಲ್ಲಿ ಉದ್ಯೋಗದಲ್ಲಿದ್ದ ಅವರು ಪುತ್ತೂರು ಜಾತ್ರೆಗೆಂದು ಊರಿಗೆ ಬಂದಿದ್ದರು.ಸಹೋದರ, ಸ್ನೇಹಿತರ ಒಡಗೂಡಿ ಜಾತ್ರಾ ಗದ್ದೆಯಲ್ಲಿ ಅವರು ಬೊಂಡ ಜ್ಯೂಸ್ ಅಂಗಡಿ ಆರಂಭಿಸಿ ವ್ಯವಹಾರ ನಿರತರಾಗಿದ್ದರು.ಏ,17ರಂದು ನಡೆದ ಬ್ರಹ್ಮರಥೋತ್ಸವ ದಿನ ಪೂರ್ತಿ ಸಹೋದರ ಹಾಗು ಸ್ನೇಹಿತರೊಂದಿಗೆ ಜಾತ್ರೆ ಗದ್ದೆಯ ಸ್ಟಾಲ್‌ನಲ್ಲಿದ್ದರು.ಬೆಳಿಗ್ಗೆ ಧನ್‌ರಾಜ್ ಅವರು ಬೈಕ್‌ನಲ್ಲಿ ಮನೆ ಕಡೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಪಡೀಲ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಅವರ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ,ಡಿವೈಡರ್‌ನಲ್ಲಿದ್ದ ದಾರಿ ದೀಪದ ಕಂಬದ ಅಡಿಭಾಗಕ್ಕೆ ಡಿಕ್ಕಿಯಾಗಿ ಇನ್ನೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಧನ್‌ರಾಜ್ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್‌ನಲ್ಲಿದ್ದ ಕವನ್ ಮತ್ತು ಪ್ರತೀಕ್ ಎಂಬವರು ಗಾಯಗೊಂಡಿದ್ದು,ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳು ಪ್ರತೀಕ್ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ಧನ್‌ರಾಜ್ ಅವರು ತಂದೆ ವಿಶ್ವನಾಥ, ತಾಯಿ ಗೀತಾ, ಸಹೋದರ ಪೃಥ್ವಿರಾಜ್ ಅವರನ್ನು ಅಗಲಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here