ಜಾತ್ರೆಯ ಪೂರ್ಣ ಫಲ ಪ್ರಾಪ್ತಿಗಾಗಿ ತೀರ್ಥ ಪ್ರೋಕ್ಷಣೆ, ಮಂತ್ರಾಕ್ಷತೆ ವಿತರಣೆಯಲ್ಲಿ ಪಾಲ್ಗೊಳ್ಳಿ – ಶಾಸಕ ಅಶೋಕ್ ಕುಮಾರ್ ರೈ, ಈಶ್ವರ ಭಟ್ ಪಂಜಿಗುಡ್ಡೆಯವರಿಂದ ಜಂಟಿ ಮನವಿ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ 10 ದಿವಸದ ಜಾತ್ರೆಯಲ್ಲಿ ಪೇಟೆಸವಾರಿ, ರಥೋತ್ಸವ ಸಹಿತ ಶ್ರೀ ದೇವರ ಪುಣ್ಯ ಸ್ನಾನದಲ್ಲಿ ಭಕ್ತರು ಭಾಗವಹಿಸಿದ್ದೀರಿ. ಇದೀಗ ಜಾತ್ರೆಯ ಪೂರ್ಣ ಫಲ ಸಿಗಬೇಕಾದರೆ ಎ.20ರಂದು ಸಂಜೆ ಗಂಟೆ 6.30ಕ್ಕೆ ನಡೆಯುವ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಗುಡ್ಡೆಯವರು ಜಂಟಿಯಾಗಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಸಂಬಂಧಿಸಿ ಎ.19ರಂದು ಧ್ವಜಾವರೋಹಣದ ಬಳಿಕ ದೇವಳದ ಅಡಳಿತ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಮಹಾಲಿಂಗೇಶ್ವರ ದೇವರ ಜಾತ್ರೆ ಅತ್ಯಂತ ವಿಜ್ರಂಭಣೆಯಿಂದ ನಡೆದಿದೆ. ಇದಕ್ಕೆ ಸಾಕ್ಷಿಯಾಗಿ ಪ್ರತಿ ದಿನ 30 ರಿಂದ 40 ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಿದ್ದೇವೆ. ಬ್ರಹ್ಮರಥೋತ್ಸವಕ್ಕೆ ಇತಿಹಾಸದಲ್ಲಿ ಕಂಡರಿಯದ ಜನಸಂದಣಿಯನ್ನು ಕಂಡಿದ್ದೇವೆ. ವೀರಮಂಗಲ ಕುಮಾರಧಾರ ಹೊಳೆಯಲ್ಲಿ ಶ್ರೀ ದೇವರು ಪುಣ್ಯ ಸ್ನಾನ ಮಾಡಿ ದೇವಳದ ಒಳಗೆ ಬರುವಾಗ ಸುಮಾರು 25 ರಿಂದ 30 ಸಾವಿರ ಮಂದಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ ದೇವರ ಜೊತೆಯಲ್ಲಿ ಪುಣ್ಯ ಸ್ನಾನ ಮಾಡಿ ಸೇರಿಕೊಂಡಿದ್ದಾರೆ. ಇದೀಗ ಎ.20ರಂದು ಸಂಜೆ ನಡೆಯುವ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆಯಲ್ಲೂ ಭಕ್ತರು ಪಾಲ್ಗೊಂಡು ಜಾತ್ರೆಯ ಪೂರ್ಣ ಫಲ ಪಡೆಯುವಂತೆ ಅವರು ವಿನಂತಿಸಿದ್ದಾರೆ.


ಮಂತ್ರಾಕ್ಷತೆಯೇ ಭಕ್ತರಿಗೆ ಫಲ:
ಜಾತ್ರೋತ್ಸವದಲ್ಲಿ ಇಷ್ಟೊಂದು ಕಷ್ಟ ಬಂದು ಭಕ್ತರು ದೇವರ ಸೇವೆ ಮಾಡಿದ್ದಾರೆ. ಅವರಿಗೆ ಜಾತ್ರೆಯ ಪೂರ್ಣ ಫಲ ಸಿಗಲು ಎ.20ರಂದು ಸಂಜೆ ಗಂಟೆ 7ಕ್ಕೆ ನಡೆಯುವ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆಯಲ್ಲಿ ಪಾಲ್ಗೊಳ್ಳಿ. ತಂತ್ರಿಯವರ್ಯರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವ ರ ಭಟ್ ಪಂಜಿಗುಡ್ಡೆ ವಿನಂತಿಸಿದ್ದಾರೆ.

ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಿಗೆ ಅಭಿನಂದನೆ
ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಈಶ್ವರ ಭಟ್ ಮತ್ತು ಎಲ್ಲಾ ಸದಸ್ಯರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವ್ಯವಸ್ಥಿತ ರೀತಿಯಲ್ಲಿ ಜಾತ್ರೆ ಮಾಡಿರುವ ಕುರಿತು ಪುತ್ತೂರಿನ ಜನರು ನನ್ನಲ್ಲಿ ಹಂಚಿಕೊಂಡಿದ್ದಾರೆ. ಮಹಾಲಿಂಗೇಶ್ವರ ದೇವರು ಸಂತುಷ್ಟರಾಗಿದ್ದಾರೆ ಎಂಬುದು ನನ್ನ ಅನಿಸಿಕೆ. ಹಾಗಾಗಿ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here