






ಸಮುದಾಯ ಭವನ ಉದ್ಘಾಟನೆ-ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರದ ಭರವಸೆ
ಜನಾರ್ದನ ರೆಡ್ಡಿ ಅವರು ನಂಬಿಕೆಯಂತೆ ನಡೆದುಕೊಂಡಿದ್ದಾರೆ- ನಳಿನ್ ಕುಮಾರ್


ಪುತ್ತೂರು:ಸವಣೂರು ಗ್ರಾಮದ ಆರೇಲ್ತಡಿ ಇರ್ವೆರು ಉಳ್ಳಾಕ್ಲು,ಕೆಡೆಂಜೋಡಿತ್ತಾಯ ದೈವದ ಮಹಿಮೆ ಅಪಾರವಾದುದಾಗಿದ್ದು, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.




ಏ.22ರಂದು ಸವಣೂರು ಆರೇಲ್ತಡಿ ಇರ್ವೆರು ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆದ ತಮ್ಮ ಹರಕೆಯ ನೇಮೋತ್ಸವದಲ್ಲಿ ಭಾಗವಹಿಸಿ, ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಜನಾರ್ದನ ರೆಡ್ಡಿಯವರು,2008ರಲ್ಲಿ ನಾನು ಬಿಜೆಪಿ ಸರಕಾರವನ್ನು ರಚನೆ ಮಾಡಿ ಬಿ.ಎಸ್.ಯಡಿಯುರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಪ್ರತಿಕಾರವಾಗಿ ಕಾಂಗ್ರೆಸ್ನವರು ವಿನಾಕಾರಣ ನನ್ನನ್ನು ತೊಂದರೆಗೆ ಸಿಲುಕಿಸಿ ಜೈಲಿನಲ್ಲಿ ಇರುವಂತೆ ಮಾಡಿದರು.ಆದರೂ ನಾನು ದೇವರ ಕೃಪೆಯಿಂದ ಹೊರ ಬಂದೆ.ಕಳೆದ ವರ್ಷ 2025ರ ಮೇ 15ಕ್ಕೆ ಮತ್ತೆ ವಿನಾಕಾರಣ ತೊಂದರೆ ಅನುಭವಿಸಿದಾಗ ಇಲ್ಲಿನ ಭಕ್ತರು ಆರೇಲ್ತಡಿ ದೈವದ ಮುಂದೆ ಪ್ರಾರ್ಥನೆ ಮಾಡಿದ್ದರ ಫಲವಾಗಿ ನಾನು ಕೇವಲ 27 ದಿನಗಳಲ್ಲಿ ಕಾನೂನು ತೊಡಕಿನಿಂದ ಹೊರ ಬಂದೆ.ಆ ಬಳಿಕ ನಾನು ಇಲ್ಲಿಗೆ ಬಂದು, ಇಲ್ಲಿನ ಸಮುದಾಯ ಭವನದ ಶಿಲಾನ್ಯಾಸವನ್ನು ನೇರವೇರಿಸಿದ್ದೆ.ಇದೀಗ ನನ್ನ ಹರಕೆಯ ನೇಮೋತ್ಸವಕ್ಕೆ ಕುಟುಂಬ ಸಮೇತ ಬಂದಿದ್ದೇನೆ.ಮುಂದೆಯೂ ಈ ದೈವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಜನಾರ್ದನ ರೆಡ್ಡಿ ಅವರು ನಂಬಿಕೆಯಂತೆ ನಡೆದುಕೊಂಡಿದ್ದಾರೆ- ನಳಿನ್ ಕುಮಾರ್:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಜನಾರ್ದನ ರೆಡ್ಡಿ ಅವರು ಇಲ್ಲಿನ ದೈವದ ಅನುಗ್ರಹದಿಂದ ಸಂಕಷ್ಟದಿಂದ ಪಾರಾಗಿದ್ದು ಆ ನಂಬಿಕೆಯಂತೆ ನಡೆದುಕೊಂಡು ಬಂದಿದ್ದಾರೆ.ಆರೇಲ್ತಡಿ ದೈವದ ಅಭಯದಂತೆ ಜನಾರ್ದನ ರೆಡ್ಡಿ ಅವರು 27 ದಿವಸಗಳಲ್ಲಿ ಕಾನೂನಿನ ತೊಡಕಿನಿಂದ ಪಾರಾಗಿ ಹೊರ ಬಂದು, ಈ ದೈವಸ್ಥಾನಕ್ಕೆ ಆಗಮಿಸಿದರು. ಈ ವರ್ಷ ತಮ್ಮ ಹರಕೆಯ ನೇಮೋತ್ಸವವನ್ನು ಕೊಟ್ಟಿದ್ದಾರೆ.ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ ಎಂದು ಹೇಳಿದರು.ತುಳುನಾಡಲ್ಲಿ ದೈವಗಳ ಆರಾಧನೆ ಅತ್ಯಂತ ಶ್ರೇಷ್ಠವಾದದ್ದು, ಇಲ್ಲಿನ ಜನರು ಅನಾದಿ ಕಾಲದಿಂದಲ್ಲೂ ದೈವಗಳ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ.ತುಳುನಾಡಿನ ದೈವಗಳ ಶಕ್ತಿ ಅಪಾರವಾದದ್ದು, ಇಲ್ಲಿನ ನಾಗಾರಾಧನೆ, ನಾಗಮಂಡಲ ತುಳುನಾಡಿನ ಪರಂಪರೆಯಾಗಿ ಬಿಂಬಿತವಾಗಿದೆ ಎಂದು ಕಟೀಲ್ ಹೇಳಿದರು.

ದೈವದ ಮೇಲೆ ನಮ್ಮ ನಂಬಿಕೆ ನಿಜವಾಗಿದೆ-ಲಕ್ಷ್ಮೀ ಜನಾರ್ದನ ರೆಡ್ಡಿ:
ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಜನಾರ್ದನ ರೆಡ್ಡಿ ಅವರು ಮಾತನಾಡಿ ಅರೇಲ್ತಡಿ ದೈವದ ಅಭಯದಂತೆ, ನನ್ನ ಪತಿಗೆ ಬಂದ ತೊಂದರೆ ತಿಂಗಳ ಒಳಗೆ ಪರಿಹಾರವಾಗಿದೆ.ಈ ದೈವದ ಮೇಲೆ ನಮ್ಮ ನಂಬಿಕೆ ನಿಜವಾಗಿದೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಜನಾರ್ದನ ರೆಡ್ಡಿ ಅವರು ಇಲ್ಲಿನ ಅಭಿವೃದ್ಧಿಗೆ ಮತ್ತಷ್ಟು ಸಹಕಾರವನ್ನು ನೀಡುವಂತೆ ವಿನಂತಿಸಿದರು.ಧಾರ್ಮಿಕ ಮುಂದಾಳು ಕಿರಣ್ಚಂದ್ರ ಪುಷ್ಪಗಿರಿ ಅವರು ಮಾತನಾಡಿ ದೈವ-ದೇವರುಗಳ ನೆಲೆನಾಡಾಗಿರುವ ತುಳುನಾಡಿನಲ್ಲಿ ಜನರ ನಂಬಿಕೆಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಬೇಕು ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ, ಆರೇಲ್ತಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷೆ ಸುಮನ ಮುರಳಿಮೋಹನ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಜೇಂದ್ರ ರೈ ಮಿಜಾರುಗುತ್ತು,ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸಂಚಾಲಕ ಪ್ರಶಾಂತ್ ಕೆಡೆಂಜಿ ಉಪಸ್ಥಿತರಿದ್ದರು.

ಆರೇಲ್ತಡಿ ಉಳ್ಳಾಕ್ಲು ಕೆಡೆಂಜೋಡಿತ್ತಾಯಿ ಸೇವಾ ಟ್ರಸ್ಟ್ನ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿ ಮಾತನಾಡಿ, 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ, ಇದರರಲ್ಲಿ 15 ಲಕ್ಷ ರೂಪಾಯಿ ಮೊತ್ತವನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ನೀಡಿದ್ದಾರೆ ಎಂದರು.ಲಕ್ಷ್ಮೀ ಜನಾರ್ದನ ರೆಡ್ಡಿ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ ವಂದಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.ಪ್ರಥಮ್ ಕಾಯರ್ಗ ಪ್ರಾರ್ಥನೆಗೈದರು.ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಳ್ಳಾಕ್ಲು ಕೆಡೆಂಜೋಡಿತ್ತಾಯಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ್ ಕುದ್ಮನಮಜಲು, ಸಂತೋಷ್ ಪಟ್ಟೆ, ದೈವಸ್ಥಾನದ ಕಾರ್ಯದರ್ಶಿ ಚಂದ್ರಶೇಖರ್ ಪಟ್ಟೆ,ಪುರುಷೋತ್ತಮ್ ಆರೇಲ್ತಡಿ, ಪುಷ್ಪರಾಜ್ ಆರೇಲ್ತಡಿ, ಕುಶಾಲಪ್ಪ ಗೌಡ ಇಡ್ಯಾಡಿ, ತೀರ್ಥರಾಮ್ ಕೆಡೆಂಜಿ, ಗಂಗಾಧರ್ ಪೆರಿಯಡ್ಕ, ರಾಜೇಂದ್ರ ಇಡ್ಯಾಡಿರವರುಗಳು ಅತಿಥಿಗಳನ್ನು ಗೌರವಿಸಿದರು.ಪ್ರಕಾಶ್ ಕುದ್ಮನಮಜಲು, ವಿನೋದ್ ಆರೇಲ್ತಡಿ ಹಾಗೂ ಪ್ರಶಾಂತ್ ಕೆಡೆಂಜಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಸಭಾ ಕಾರ್ಯಕ್ರಮದ ಬಳಿಕ ಜನಾರ್ದನ ರೆಡ್ಡಿ ಅವರ ಹರಕೆಯ ನೇಮೋತ್ಸವ ನಡೆಯಿತು.ಬಳಿಕ ಅನ್ನಸಂತರ್ಪಣೆ ನಡೆಯಿತು.ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

ಇಲ್ಲಿನ ಭಕ್ತರು ಆರೇಲ್ತಡಿ ದೈವದ ಮುಂದೆ ಪ್ರಾರ್ಥನೆ ಮಾಡಿದ್ದರ ಫಲವಾಗಿ ನಾನು ಕೇವಲ 27 ದಿನಗಳಲ್ಲಿ ಕಾನೂನು ತೊಡಕಿನಿಂದ ಹೊರ ಬಂದೆ.ನಮ್ಮ ಪಕ್ಷದ ಪ್ರಶಾಂತ್ ಕೆಡೆಂಜಿ ಅವರ ಮೂಲಕ ಈ ದೈವಸ್ಥಾನದ ಕಾರಣಿಕತೆ ಬಗ್ಗೆ ತಿಳಿಯಿತು.ನಾನು 12 ವರ್ಷ ರಾಜಕೀಯದಿಂದ ದೂರವಿದ್ದೆ.ಇದೀಗ ದೈವ-ದೇವರುಗಳ ಕೃಪೆಯಿಂದ ಗಂಗಾವತಿ ಕ್ಷೇತ್ರದ ಶಾಸಕನಾಗಿದ್ದೇನೆ.ಇಲ್ಲಿನ ದೈವದ ಅನುಗ್ರಹ ಸದಾ ನನಗೆ ಇರಲಿ
-ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ,ಗಂಗಾವತಿ ಶಾಸಕ

ಅಚ್ಚುಕಟ್ಟಾದ ಕಾರ್ಯಕ್ರಮ
ಆರೇಲ್ತಡಿ ದೈವಸ್ಥಾನದಲ್ಲಿ ಜನಾರ್ದನ ರೆಡ್ಡಿ ಅವರ ಹರಕೆ ನೇಮೋತ್ಸವ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.ಸಂಜೆ ಉಪಹಾರ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು.ಏ.23ರಂದು ಬೆಳಗ್ಗೆ ಉಳ್ಳಾಕ್ಲು ನೇಮ, ಕೆಡೆಂಜೋಡಿತ್ತಾಯಿ ನೇಮೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪರಿವಾರ ದೈವಗಳ ನೇಮ ಮತ್ತು ಗಂಧ ಪ್ರಸಾದ ನಡೆಯಲಿದೆ.










