






ನೆಲ್ಯಾಡಿ: ಪಟ್ಟೆದಮೂಲೆ ಶ್ರೀದೇವಿ ನಿಲಯ ನೆಲ್ಯಾಡಿ ಇಲ್ಲಿ ಹರಕೆಯ ಒತ್ತೆಕೋಲ ಹಾಗೂ ಕಲ್ಲುರ್ಟಿ, ಧರ್ಮದೈವ ವರ್ಣಾರ ಪಂಜುರ್ಲಿ, ಚಾಮುಂಡಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಏ.21 ಹಾಗೂ 22ರಂದು ವಿಜೃಂಭಣೆಯಿಂದ ನಡೆಯಿತು.



ಏ.21ರಂದು ಸಂಜೆ ಕಲ್ಲಪಣೆ ತರವಾಡು ಮನೆಯಿಂದ ಭಂಡಾರ ತಂದು ನೆಲ್ಯಾಡಿ ಪೇಟೆಯಿಂದ ಪಟ್ಟೆದಮೂಲೆ ಶ್ರೀದೇವಿ ನಿಲಯದ ತನಕ ಕುಣಿತ ಭಜನೆಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸಂಜೆ ಮೇಲೇರಿಗೆ ಬೆಂಕಿ ಕೊಡುವುದು, ರಾತ್ರಿ ಕಲ್ಲುರ್ಟಿ ದೈವದ ಕೋಲ, ಅನ್ನಸಂತರ್ಪಣೆ, ಕುಳಿಚ್ಚಾಟು ನಡೆಯಿತು.




ಏ.22ರಂದು ಬೆಳಗ್ಗೆ ಮೊಡ ಚಾಮುಂಡಿ ಮತ್ತು ಪಡಿಂಞರ್ ಚಾಮುಂಡಿ ದೈವಗಳ ಕೋಲ, ಚಾಮುಂಡಿ ಗುಳಿಗ ಮತ್ತು ಪರ್ದಾಳಿ ಗುಳಿಗ ದೈವಗಳ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಧರ್ಮದೈವ ವರ್ಣಾರ ಪಂಜುರ್ಲಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು. ಕಲ್ಲಪಣೆ ಕುಟುಂಬಸ್ಥರು, ಗ್ರಾಮಸ್ಥರು, ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ನೂರಾರು ಮಂದಿ ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧಪ್ರಸಾದ ಸ್ವೀಕರಿಸಿದರು.

ಪಟ್ಟೆದಮೂಲೆ ಶ್ರೀದೇವಿ ನಿಲಯದ ಕಾವೇರಿ ಅಮ್ಮ, ಶಿವಣ್ಣ ಪಿ.ಹೆಗ್ಡೆ, ಶ್ಯಾಮಲಾ ಹೆಗ್ಡೆ, ಶೈಲೇಶ್ ಹೆಗ್ಡೆ, ಕಲ್ಲಪಣೆ ಕುಟುಂಬದ ಯಜಮಾನರಾದ ಮೋನಪ್ಪ ಹೆಗ್ಡೆ ಸವಣೂರು ಹಾಗೂ ಕುಟುಂಬಸ್ಥರು ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಿದರು.











