ಕೆಮ್ಮಾಯಿ ಭರತಪುರ ಪಂಚಮುಖಿ ಹನುಮಾನ್ ಮಂದಿರದಲ್ಲಿ ದ್ವಿತೀಯ ಪ್ರತಿಷ್ಠಾವರ್ಧಂತಿ ಉತ್ಸವ, ಅಖಂಡ ಹನುಮಾನ್ ಚಾಲೀಸ್ ಪಠಣಯಜ್ಞ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿರುವ ಶ್ರೀಪಂಚಮುಖಿ ಹನುಮಾನ್ ಮಂದಿರದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ ಉತ್ಸವ, ಅಖಂಡ ಶ್ರೀಹನುಮಾನ್ ಚಾಲೀಸ್ ಪಠಣ ಯಜ್ಞ, ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ನೇಮೋತ್ಸವ ಏ.26ರಂದು ನೆರವೇರಿತು.


ಬೆಳಿಗ್ಗೆ 5 ಗಂಟೆಯಿಂದ ಗಣಹೋಮ, ಸೀಯಾಳಾಭಿಷೇಕ, ಕಲಶ ಪೂಜೆ ಹಾಗೂ ಕಲಶಾಭಿಷೇಕಗಳು ನಡೆದವು. ಬೆಳಿಗ್ಗೆ 6 ಗಂಟೆಗೆ ಶ್ರೀಹನುಮಾನ್ ಚಾಲೀಸ್ ಅಖಂಡ ಪಠಣ ಸಂಕಲ್ಪ ನಡೆಯಿತು. ನಂತರ ಅಖಂಡ ಶ್ರೀಹನುಮಾನ್ ಚಾಲೀಸ್ ಪಠಣ ಯಜ್ಞ ಆರಂಭಗೊಂಡು ಸೂರ್ಯಾಸ್ತದವರೆಗೆ ಮುಂದುವರಿಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.


ಸಂಜೆ 5 ಗಂಟೆಯಿಂದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ನೆರವೇರಿತು. ಸಂಜೆ 6:45ಕ್ಕೆ ಸಾಮೂಹಿಕ ಶ್ರೀಹನುಮಾನ್ ಅಷ್ಟೋತ್ತರ ಪಠಣ ನಡೆಯಿತು. ರಾತ್ರಿ 8 ಗಂಟೆಗೆ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಶ್ರೀಸತ್ಯದೇವತೆ ಕಲ್ಲುರ್ಟಿ ದೈವದ ನೇಮೋತ್ಸವ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ನೀಡಲಾಯಿತು.

ಅಶಕ್ತ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ:
ಅಶಕ್ತರು, ಬಡ ಕುಟುಂಬಗಳು ಹಾಗೂ ವಿಶೇಷ ಚೇತನರಿಗೆ ಸದಾ ನೆರವು ನೀಡುತ್ತಿರುವ “ಟೀಮ್ ಒಳಿತು ಮಾಡು ಮನುಷ” ವತಿಯಿಂದ 25 ಅಶಕ್ತ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಶಂಕರಪುರ ಏಕಜಾತಿ ಧರ್ಮ ಪೀಠಾಧೀಶ್ವರರಾದ ಶ್ರೀಸಾಯಿ ಈಶ್ವರ ಗುರೂಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್‌ನ ಧರ್ಮದರ್ಶಿ ಚೇತನ್ ಗುರೂಜಿ, ಶ್ರೀಪಂಚಮುಖಿ ಹನುಮಾನ್ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ನಾಕ್(ಕೇಬಲ್), ಗೌರವಾಧ್ಯಕ್ಷ ಚಿದಾನಂದ ರೈ ಕೊಪ್ಪಳ, ಕಾರ್ಯಾಧ್ಯಕ್ಷ ಮಂಜುನಾಥ ಎಂ. ಕೆಮ್ಮಾಯಿ ಹಾಗೂ ಪದಾಧಿಕಾರಿಗಳು, ಸದಸ್ಯರು, ಟೀಮ್ ಒಳಿತು ಮಾಡು ಮನುಷ ತಂಡದ ಅಧ್ಯಕ್ಷೆ ಶೋಭಾ ಮಡಿವಾಳ, ಕಾರ್ಯದರ್ಶಿ ಕಾವ್ಯ ಹೆಗ್ಡೆ, ಸದಸ್ಯರಾದ ವನಿತಾ, ಹರ್ಷಿತಾ, ವಸಂತಿ, ಆತ್ಮಿ, ರಾಧಿಕಾ, ಭುವನ, ಸುಗಂಧಿ, ದೀಕ್ಷಾ, ರಕ್ಷಾ, ಕಾವ್ಯ ಈಶ್ವರಮಂಗಲ, ಶಮನ ಆಚಾರ್ಯ, ಕೃಪಾ ಆಚಾರ್ಯ ಸೇರಿದಂತೆ ಹಲವು ಭಕ್ತಾದಿಗಳು ಉಪಸ್ಥಿತರಿದ್ದರು.

ಮೇ.25ರಂದು ಸಾಂತ್ವನ ಸೇವಾಶ್ರಮ ಲೋಕಾರ್ಪಣೆ
ಟೀಮ್ ಒಳಿತು ಮಾಡು ಮನುಷ ಇದರ 9ನೇ ವಾರ್ಷಿಕೋತ್ಸವ ಮೇ.25ರಂದು ನಡೆಯಲಿದೆ. ಇದೇ ದಿನ “ಒಳಿತು ಮಾಡು ಮನುಷ” ಸಾಂತ್ವನ ಸೇವಾಶ್ರಮ ಲೋಕಾರ್ಪಣೆಗೊಳ್ಳಲಿದೆ. ಹೆಣ್ಣುಮಕ್ಕಳಿಗೆ ಚಿನ್ನದ ಮೂಗುತಿ ವಿತರಣೆ, ಅಶಕ್ತ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ, ಆಶ್ರಮ ಸೇವಾ ಸಂಸ್ಥೆಗಳು ಹಾಗೂ ದಾನಿಗಳಿಗೆ ಸನ್ಮಾನ, ಸಾಧಕರಿಗೆ ಗೌರವ ಅರ್ಪಣೆ ನಡೆಯಲಿದೆ ಎಂದು ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್‌ನ ಧರ್ಮದರ್ಶಿ ಚೇತನ್ ಗುರೂಜಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here