






ಪುತ್ತೂರು: ದಾರಿಗೆ ಬಿದ್ದ ಮಣ್ಣು ತೆರವು ಮಾಡುವ ವಿಚಾರದಲ್ಲಿ ಜಮೀನು ಮಾಲಕರ ಕೆಲಸದಾಳು ಮತ್ತು ಸ್ಥಳೀಯ ಜಮೀನಿನಲ್ಲಿ ವಾಸ್ತವ್ಯ ಇರುವವರ ಮಧ್ಯೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದು, ಘಟನೆಗೆ ಸಂಬಂಧಿಸಿ ಇತ್ತಂಡದವರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಪ್ಪಳಿಗೆ ಅರ್ಬಿ ಎಂಬಲ್ಲಿನ ಅಪರ್ಣ ಎಂಬವರ ಜಮೀನಿನಲ್ಲಿ ಕೆಲಸಮಾಡಿಕೊಂಡಿರುವ ಚಿಕ್ಕಮಗಳೂರು ಮೂಲದ ಲತಾ(40ದ)ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಾನು ಅಪರ್ಣ ಎಂಬವರ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದು,ಈ ಜಮೀನಿನ ಮಧ್ಯ ಭಾಗದಲ್ಲಿ ಮಹೇಶ್, ಹೊನ್ನಪ್ಪ ಗೌಡ, ಕೊರಗಪ್ಪ ಹೇಮಾರವರಿಗೆ ಸೇರಿದ ಜಮೀನು ಮತ್ತು ಮನೆ ಇದೆ. ಅವರಿಗೆ ಹೋಗಲು ಅಪರ್ಣ ಅವರ ಜಮೀನಿನ ಮೂಲಕ ದಾರಿ ಮಾಡಿ ಕೊಟ್ಟಿದ್ದು,ಕಳೆದ ಎರಡು ದಿನಗಳಿಂದ ಮಳೆ ಬಂದ ಕಾರಣ ಮಳೆ ನೀರು ಬಂದು ದಾರಿಗೆ ಮಣ್ಣು ಬಂದಿದೆ.ಈ ಮಣ್ಣನ್ನು ತೆರವು ಮಾಡುವಂತೆ ನಾಲ್ಕು ಮನೆಯವರು ಮೇ 10ರಂದು ನನ್ನಲ್ಲಿ ತಿಳಿಸಿದಾಗ ನಾನು ಈ ಕುರಿತು ಜಮೀನಿನ ಮಾಲಕಿ ಅಪರ್ಣ ಅವರಲ್ಲಿ ಕೇಳಿ ಹೇಳುತ್ತೇನೆ ಎಂದಿದ್ದೆ.ಈ ಸಂದರ್ಭ ಮಹೇಶ್, ಛಾಯಾ, ಹೊನ್ನಪ್ಪ ಗೌಡ, ಶಾಲಿನಿ, ಕೊರಗಪ್ಪ, ಜಯಾ, ಹೇಮಾ ಲತೀಶ್, ಶೇಖರ್ರವರು ಸೇರಿ ನನ್ನನ್ನು ನಿಂದಿಸಿದಲ್ಲದೆ ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.



ಇದೇ ಘಟನೆಗೆ ಸಂಬಂಧಿಸಿ ಅರ್ಬಿ ನಿವಾಸಿ ಹೊನ್ನಪ್ಪ ಗೌಡರ ಪತ್ನಿ ಶಾಲಿನಿ(42ವ) ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಮ್ಮ ಜಾಗಕ್ಕೆ ಅಪರ್ಣ ಎಂಬವರ ಜಾಗದಿಂದ ಮಳೆ ನೀರು ಬಂದಿದ್ದು,ಈ ಕುರಿತು ಅಪರ್ಣ ಅವರ ಜಾಗ ನೋಡಿಕೊಳ್ಳುವ ಲತಾ ಮತ್ತು ಚಂದ್ರಶೇಖರ ಅವರೊಂದಿಗೆ ಹೇಳಿದಾಗ ಅವರು ನಮಗೇನೂ ಗೊತ್ತಿಲ್ಲ. ಮಣ್ಣು ನಾವು ನಿಮ್ಮ ಜಾಗಕ್ಕೆ ಹಾಕಿಲ್ಲ ಎಂದು ಹೇಳಿದ್ದರು.ಮೇ 10ರಂದು ನಾವು ಮತ್ತು ನೆರೆಯುವರು ಸೇರಿ ಮಣ್ಣು ತೆಗೆಯುತ್ತಿದ್ದ ಸಮಯ ಲತಾ ಮತ್ತು ಚಂದ್ರಶೇಖರ ಅವರು ಕತ್ತಿ ಹಿಡಿದುಕೊಂಡು ಬಂದು ನಮ್ಮನ್ನು ನಿಂದಿಸಿದ್ದಲ್ಲದೆ ಚಂದ್ರಶೇಖರ್ ಅವರು ಕತ್ತಿಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ದೂರು ದಾಖಲಾಗಿದೆ.ಈ ನಡುವೆ, ‘ನನಗೆ ಲತಾ ಮತ್ತು ಚಂದ್ರಶೇಖರ್ ಎಂಬದರು ಜಾತಿ ನಿಂದನೆ ಮಾಡಿದ್ದಾರೆ” ಎಂದು ಆರೋಪಿಸಿ ಶೇಖರ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










