






ಉಪ್ಪಿನಂಗಡಿ: ಕಳೆದೆರಡು ದಿನಗಳ ಹಿಂದೆ ಬೀಸಿದ ಭಾರೀ ಗಾಳಿ ಮಳೆಗೆ ಬಜತ್ತೂರು ಗ್ರಾಮದಲ್ಲಿ ವ್ಯಾಪಕ ಹಾನಿಯಾಗಿದ್ದು, ನಷ್ಟಕ್ಕೊಳಗಾದವರ ಕೃಷಿ ತೋಟಗಳಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದರು.



ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಪಂರ್ದಾಜೆ ಹಾಗೂ ನೆಕ್ಕರಾಜೆ ಪರಿಸರದಲ್ಲಿ ಅಡಿಕೆ, ತೆಂಗಿನ ಗಿಡಗಳ ಸಹಿತ ಮಿಂಚು ಬಂಧಕ ಸಾಧನವೂ ಹಾನಿಗೀಡಾಗಿದ್ದು, ಸುಮಾರು ಎರಡು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ. ಈ ಪೈಕಿ ಪಂರ್ದಾಜೆ ತಾರನಾಥ ಎಂಬವರು ವರ್ಷದ ಹಿಂದೆ ತಮ್ಮ ಸ್ವಂತ ಖರ್ಚಿನಲ್ಲಿ ಮಿಂಚು ಬಂಧಕವನ್ನು ಅಳವಡಿಸಿದ್ದು ಅದರ ಅಡಿಪಾಯ ಸಹಿತ ಮುರಿದು ಬಿದ್ದು ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಳಲು ತೋಡಿಕೊಂಡರು.




ಅಡಿಕೆ ಕೃಷಿಕರಾದ ಗಂಗಾಧರ, ಅಣ್ಣೀ ಗೌಡ, ರಾಧಾಕೃಷ್ಣ, ಜನಾರ್ದನ, ಭಾಸ್ಕರ ಸೇರಿದಂತೆ ಹಲವರ ಫಸಲು ತುಂಬಿದ ಒಟ್ಟು 5೦,೦೦೦ ಕ್ಕೂ ಅಡಿಕೆ ಗಿಡಗಳ ಸಹಿತ ತೆಂಗು, ಹಲಸು, ಸಾಗುವಾನಿ, ನೇರಳೆಕಾಯಿಯ ಬೃಹತ್ ಮರಗಳು ಸಹ ಉರುಳಿ ಬಿದ್ದಿವೆ. ಘಟನೆಯಿಂದ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವ್ಯಾಪಕ ನಷ್ಟ ಸಂಭವಿಸಿದೆ.
ಈ ಸಂದರ್ಭ ಮಾತನಾಡಿದ ಸಂಜೀವ ಮಠಂದೂರು, ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದೆ. ಹಾನಿಗೊಳಗಾದ ಪ್ರದೇಶಕ್ಕೆ ಖುದ್ದು ತಾಲೂಕು ತಹಶೀಲ್ದಾರ್ರವರು ಭೇಟಿ ನೀಡಿ ವರದಿ ತಯಾರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಸರಕಾರ ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಭೇಟಿಯ ಸಂದರ್ಭ ಉಪ್ಪಿನಂಗಡಿ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು, ಪ್ರಮುಖರಾದ ಮುಕುಂದ ಬಜತ್ತೂರು, ಸಂತೋಷ್ ಕುಮಾರ್ ಪಂರ್ದಾಜೆ, ಗಂಗಾಧರ ಗೌಡ ಮತ್ತಿತರರು ಉಪಸ್ಥಿತರಿದ್ದರು.










