ಕಡೇಶಿವಾಲಯ ಲಕ್ಷ್ಮೀ ನರಸಿಂಹ ದೇವಸ್ಥಾನ-ಅಜಿಲಮೊಗರು ಮಸೀದಿ ನಡುವಿನ ಸಂಪರ್ಕ ಕೊಂಡಿ ಸೌಹಾರ್ದ ಸೇತುವೆ ಸಜ್ಜು: ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಕೆಲ ಪ್ರದೇಶಕ್ಕೆ ಅನುಕೂಲ

0

ಬೆಳ್ತಂಗಡಿ: ಎರಡು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕಡೇಶಿವಾಲಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ಅಜಿಲಮೊಗರು ಮಸೀದಿ ಸಂಪರ್ಕಿಸಲು ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತಿರುವ ಸೌಹಾರ್ದ ಸೇತುವೆ ಕಾಮಗಾರಿ ಮತ್ತೆ ಆರಂಭಗೊಂಡು ಭರದಿಂದ ಸಾಗುತ್ತಿದ್ದು ಶೀಘ್ರವೇ ಈ ಭಾಗದ ಜನತೆಯ ಕನಸು ನನಸಾಗುವ ಹಂತ ತಲುಪಿದೆ.

ಕಡೇಶಿವಾಲಯ ಭಾಗದಲ್ಲಿ ಉಳಿದು ಹೋಗಿದ್ದ ಎರಡು ಫೌಂಡೇಶನ್ ಸಹಿತ ಪಿಲ್ಲರ್ ಕಾಮಗಾರಿ ಈಗ ಸಂಪೂರ್ಣಗೊಂಡು ಸೇತುವೆ ನಿರ್ಮಾಣ ನಡೆಯುತ್ತಿದ್ದು ಕಾಮಗಾರಿ ಅಂತಿಮ ಹಂತ ತಲುಪಿದೆ. ಸೇತುವೆ ಮೇಲಿನ ಗರ್ಡರ್‌ಗಳನ್ನೂ ಅಳವಡಿಸಲಾಗಿದ್ದು ಮಳೆಗಾಲಕ್ಕೆ ಮೊದಲು ಸೇತುವೆಯನ್ನು ಲೋಕಾರ್ಪಣೆಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಈ ಸೌಹಾರ್ದ ಸೇತುವೆ ಎರಡು ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ನೇತ್ರಾವತಿ ನದಿಗೆ ಸೇತುವೆ ಮತ್ತು ಸಂಪರ್ಕ ರಸ್ತೆಯ ಯೋಜನೆಗೆ ನೀಲನಕಾಶೆ ಸಿದ್ದಗೊಂಡು 2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯಾಗಿತ್ತು. ಆಗ ಸಚಿವರಾಗಿದ್ದ ಬಿ. ರಮಾನಾಥ ರೈ ಅವರ ಪರಿಕಲ್ಪನೆಯಲ್ಲಿ ಎರಡು ಧಾರ್ಮಿಕ ಕ್ಷೇತ್ರ ಸಂಪರ್ಕಿಸುವ ನಿಟ್ಟಿನಲ್ಲಿ ಸೌಹಾರ್ದ ಸೇತುವೆ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 19.84 ಕೋಟಿ ರೂಪಾಯಿ ಅನುದಾನ ಮಂಜೂರುಗೊಂಡಿತ್ತು


ಕಾಡಿತ್ತು ಕೋವಿಡ್:
ಅಜಿಲ ಮೊಗರಿನಿಂದ ಕಡೇಶ್ವಾಲ್ಯಕ್ಕೆ ಒಟ್ಟು 312 ಮೀಟರ್ ಉದ್ದ ಮತ್ತು 10.50 ಮೀಟರ್ ಅಗಲದ ಸೇತುವೆ ಜತೆಗೆ ಒಟ್ಟು 378 ಮೀಟರ್ ಉದ್ದದ ಸಂಪರ್ಕ ರಸ್ತೆ ಕಾಮಗಾರಿಯನ್ನು ಚೆನ್ನೈನ ಎಸ್‌ಪಿಎಲ್ ಕಂಪನಿ ಗುತ್ತಿಗೆ ವಹಿಸಲಾಗಿತ್ತು. ಎಸ್‌ಪಿಎಲ್ ಸಂಸ್ಥೆಗೆ 2019ರಲ್ಲೇ ಟೆಂಡರ್ ಆಗಿದ್ದು 24 ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳಿಸುವುದಾಗಿ ಸಂಸ್ಥೆ ಮಾತು ಕೊಟ್ಟಿತ್ತು. 2021ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಒಪ್ಪಂದ ಆಗಿತ್ತಾದರೂ ಕೋವಿಡ್ ಸಂದರ್ಭ ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆ ಸಂಸ್ಥೆ ಭರವಸೆ ನೀಡಿತ್ತಾದರೂ ಆಗಿರಲಿಲ್ಲ. ಅಜಿಲಮೊಗರು ಮಸೀದಿಗೆ ಬಂಟ್ವಾಳ- ಮಣಿಹಳ್ಳ-ಸರಪಾಡಿ-ಅಲ್ಲಿಪಾದೆ ರಸ್ತೆ ಮೂಲಕ ಸಾಗಬೇಕು. ಕಡೇಶಿವಾಲಯ ಕ್ಷೇತ್ರಕ್ಕೆ ಬಿ.ಸಿ.ರೋಡ್-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಗಡಿಯಾರ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾಗುತ್ತದೆ. ಸೇತುವೆ ನಿರ್ಮಾಣವಾದರೆ ಬಳಿಕ ಬಂಟ್ವಾಳ ತಾಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶ್ವಾಲ್ವ, ಬುಡೋಳಿ, ಬರಿಮಾರು ಹಾಗೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲವಾಗಲಿದೆ.


ಕಾಮಗಾರಿ ವೇಗಕ್ಕಾಗಿ ಸ್ಥಳೀಯರು ಒತ್ತಡ ಹೇರಿದ್ದರು:
ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅವರ ಸೂಚನೆಯಂತೆ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಅವರು ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರೂ ಫಲಕಾರಿಯಾಗಿರಲಿಲ್ಲ. ಮುಲ್ಲೈ ಮುಹಿಲನ್ ಅವರು ವರ್ಗಾವಣೆಯಾದ ಬಳಿಕ ಇತ್ತ ಸೌಹಾರ್ದ ಸೇತುವೆಯ ಕಾಮಗಾರಿಯೂ ಸ್ಥಗಿತಗೊಂಡಿತ್ತು.
ಸ್ಥಳೀಯ ರೈತರು, ಗ್ರಾಮಸ್ಥರು ಸೇತುವೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನಿರಂತರ ಒತ್ತಡ ಹೇರಿದ ಪರಿಣಾಮವಾಗಿ ಸೇತುವೆ ಕಾಮಗಾರಿ ಮರು ಆರಂಭಗೊಂಡು ಅಂತಿಮ ಹಂತ ತಲುಪಿದೆ.

LEAVE A REPLY

Please enter your comment!
Please enter your name here