ಬೆಟ್ಟಂಪಾಡಿ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0

ವ್ಯಕ್ತಿತ್ವ ವಿಕಸನದಿಂದ ಸಜ್ಜನ ವ್ಯಕ್ತಿ ನಿರ್ಮಾಣ – ವೆಂಕಟ್ರಮಣ ಭಟ್ ಮಂಜುಳಗಿರಿ

ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾ.ಪಂ. ಗ್ರಂಥಾಲಯದ 2026-27ನೇ ಸಾಲಿನ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮೇ.16 ರಂದು ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು. 

ಗ್ರಂಥಾಲಯ ಸಮಿತಿ ಸದಸ್ಯರೂ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯೂ ಆಗಿರುವ  ಉಮಾವತಿ  ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಸಮಿತಿ ಸದಸ್ಯರೂ, ನಿವೃತ್ತ ಮುಖ್ಯಗುರುಗಳೂ  ಆದ ವೆಂಕಟ್ರಮಣ ಭಟ್ ಮಂಜುಳಗಿರಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ‘ಉತ್ತಮ ವ್ಯಕ್ತಿತ್ವ ವಿಕಸನದಿಂದ ಸಜ್ಜನ ವ್ಯಕ್ತಿಯ ನಿರ್ಮಾಣ ಸಾಧ್ಯ. ಪ್ರತಿಯೊಂದು ಮಗುವಿನಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ಅವರಲ್ಲಿ ವ್ಯಕ್ತಿತ್ವ ವಿಕಸನಗೊಳಿಸಿದಾಗ ಅವರು ನಾಳೆಯ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಕೊಡುಗೆಯಾಗಿ ಸಿಗಬಲ್ಲರು. ಆ ನಿಟ್ಟಿನಲ್ಲಿ ಪೇಟೆ ಪಟ್ಟಣದ ಮಕ್ಕಳಂತೆ ಗ್ರಾಮೀಣ ಭಾಗದ ಮಕ್ಕಳಿಗೂ ಬೇಸಿಗೆ ಶಿಬಿರ ಅತ್ಯಂತ ಅವಶ್ಯಕ ಮತ್ತು ಉತ್ರಮ ಕಾರ್ಯಕ್ರಮವಾಗಿದೆ’ ಎಂದರು.

ಪ್ರಧಾನ ಅಭ್ಯಾಗತರಾಗಿ ಗ್ರಂಥಾಲಯ ಸಮಿತಿ ಸದಸ್ಯ, ಪತ್ರಕರ್ತ ಉಮೇಶ್ ಮಿತ್ತಡ್ಕ ರವರು ಮಾತನಾಡಿ  ಶುಭ ಹಾರೈಸಿದರು. ಆರಂಭದ ದಿನ ಶಿಕ್ಷಕರಾದ ಶ್ರೀಮತಿ ಮಮತಾ ಹಾಗೂ ಕು. ಸಾನಿಧ್ಯ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಪ್ರಾಸ್ತಾವಿಕ ಮಾತನಾಡಿ, ದಿಶಾ ಸ್ವಾಗತಿಸಿದರು. ಗ್ರಂಥಾಲಯ ಸಮಿತಿ ಸದಸ್ಯರುಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಪಂಚಾಯತ್ ವತಿಯಿಂದ ಮಕ್ಕಳಿಗೆ ಲಘು ಉಪಹಾರ ನೀಡಲಾಯಿತು.

LEAVE A REPLY

Please enter your comment!
Please enter your name here