ಪುತ್ತೂರು: ವೀರಮಂಗಲ-ಸಾರಕೂಟೇಲುವರೆಗೆ ಕೆಎಸ್‌ಆರ್‌ಟಿಸಿ ಬಸ್ ವಿಸ್ತರಣೆಗೆ ಮನವಿ

0

ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ ಅನ್ನು ಸಾರಕೂಟೇಲುವರೆಗೆ ವಿಸ್ತರಿಸುವಂತೆ ನೂರಾರು ಗ್ರಾಮಸ್ಥರು ಪುತ್ತೂರು ಶಾಸಕ ಅಶೋಕ ರೈ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳದಲ್ಲೇ ಡಿಪೋ ಮ್ಯಾನೇಜರ್‌ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಸ್ತುತ ವೀರಮಂಗಲಕ್ಕೆ ಬೆಳಗ್ಗೆ 8.45ಕ್ಕೆ ಬರುವ ಬಸ್ ಅನ್ನು ಸಾರಕೂಟೇಲುವರೆಗೆ ಬಂದು ಹಿಂದಿರುಗಿದರೆ, ಸಂಜೆ 4.30ಕ್ಕೆ ವೀರಮಂಗಲದಿಂದ ಹೊರಡುವ ಬಸ್ ಸಾರಕೂಟೇಲಿನಲ್ಲಿ ತಿರುಗಿ ಪುತ್ತೂರಿಗೆ ತೆರಳಿದರೆ ನೂರಾರು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶವಾದ ಸಾರಕೂಟೇಲು, ಪುಡಿಂಕಲಡ್ಕ, ಕಾಯರ್ ಮುಗೇರು ಭಾಗದಿಂದ ನೂರಾರು ಮಕ್ಕಳು 5 ಕಿ.ಮೀ.ಗಿಂತ ಹೆಚ್ಚು ದೂರ ನಡೆದು ಶಾಲೆಗೆ ಬರುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಆಟೋ ಬಾಡಿಗೆ ಭರಿಸಲು ಕಷ್ಟವಾಗುತ್ತಿದೆ. ಪ.ಜಾ, ಪ.ಪಂ, ಮುಸ್ಲಿಂ ಸೇರಿದಂತೆ ವಿವಿಧ ವರ್ಗದ ಮಕ್ಕಳು ಇಲ್ಲಿನ ವೀರಮಂಗಲ ಶಾಲೆಯನ್ನು ಅವಲಂಬಿಸಿದ್ದಾರೆ.

ಮನವಿ ಸಲ್ಲಿಕೆ ವೇಳೆ ಶಾಲಾ ಮುಖ್ಯಗುರು ತಾರಾನಾಥ ಪಿ, ಊರ ಪ್ರಮುಖರಾದ ಬಾಬು ಶೆಟ್ಟಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರ ಸಮಸ್ಯೆ ಅರಿತು ತಕ್ಷಣ ಸ್ಪಂದಿಸಿದ ಶಾಸಕರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here