






ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ 3ನೇ ವಾರ್ಡ್ನ ದೇವಿನಗರದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಮೂರು ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗೆ ಸಾಥ್ ನೀಡಿತು.


ಮೂರನೇ ದಿನವಾದ ಮೇ.20ರಂದು ಕುಟುಂಬ ಸದಸ್ಯರು ಮತ್ತೆ ತಾಲೂಕು ಆಡಳಿತ ಸೌಧದ ಮೆಟ್ಟಿಲಿನಲ್ಲಿ ಕುಳಿತು ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಂಡಲದ ಬಿಜೆಪಿ ಕಾರ್ಯಕರ್ತರು, ಬಂಟ್ವಾಳ ಮಂಡಲದ ಬಿಜೆಪಿ ಕಾರ್ಯಕರ್ತರು ಜೊತೆಗೂಡಿ ಬಡವರ ಶೋಷಣೆ ಮಾಡುತ್ತಿರುವ ಸರಕಾರ ಹಾಗೂ ಪುತ್ತೂರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮನೆಯ ಹಕ್ಕುಪತ್ರಗಳನ್ನು ನೀಡದೆ ಸತಾಯಿಸುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಮತ್ತು ದಲಿತ ವಿರೋಧಿ ಸರ್ಕಾರದ ನಡೆ ಅತ್ಯಂತ ಖಂಡನೀಯ. ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಅವರ ಜೊತೆ ನಿಲ್ಲಲಿದೆ ಎಂದರು. ಸಿದ್ದರಾಮಯ್ಯ ಸರ್ಕಾರ ಮೂರು ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಆಡಳಿತ ಸೌಧದ ಮುಂದೆ ಬಂದು ಕೈ ಚಾಚುವ ದಯನೀಯ ಸ್ಥಿತಿಗೆ ರಾಜ್ಯ ತಲುಪಿರುವುದು ಅತ್ಯಂತ ನಾಚಿಕೇಡು ಎಂದು ಸಂಸದರು ಕಿಡಿಕಾರಿದರು.



ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಆರ್. ಚೆನ್ನಪ್ಪ ಕೋಟ್ಯಾನ್, ದಯಾನಂದ ಶೆಟ್ಟಿ ಉಜ್ರಿಮಾರ್, ಪಿ.ಬಿ. ಶಿವಕುಮಾರ್, ರಾಮದಾಸ್ ಬಂಟ್ವಾಳ, ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ಯಶೋಧರ ಕರ್ಬೆಟ್ಟು, ಹರೀಶ್ ಬಿಜತ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.










