






ರೇಷ್ಮೆ ಬೆಳೆಯುವ ಈ ಭಾಗದ ಕೃಷಿಕರಿಗೆ ವಿಶೇಷ ಯೋಜನೆಗಳನ್ನು ತರಲಾಗುವುದು: ಸಚಿವ ಕೆ.ವೆಂಕಟೇಶ್


ವಿಟ್ಲ: ದ.ಕ., ಉಡುಪಿ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ಬಹಳಷ್ಟು ಕಡಿಮೆ ಇದೆ. ರೇಷ್ಮೆ ಕೃಷಿ ಮಾಡುವಲ್ಲಿ ಈ ಭಾಗದ ಕೃಷಿಕರು ಮುಂದಡಿ ಇಡಬೇಕಿದೆ. ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಕೆಲಸ ಸರಕಾರದಿಂದ ಮಾಡಲಾಗುತ್ತಿದೆ. ಅದರಲ್ಲೂ ಈ ಭಾಗದ ಕೃಷಿಕರಿಗೆ ಸಹಕಾರಿಯಾಗಲು ಇನ್ನಷ್ಟು ವಿಶೇಷ ಯೋಜನೆಗಳನ್ನು ತರಲಾಗುವುದು. ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಕ್ರಮ ಯಶಸ್ಸಾಗಲಿ ಎಂದು ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ರವರು ಹೇಳಿದರು.




ಅವರು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆದ ದ.ಕ. ಜಿಲ್ಲಾ ಪಂಚಾಯತ್ ರೇಷ್ಮೆ ಇಲಾಖೆ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಚೇರಿ ವಿಟ್ಲ ಇದರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ತಂತ್ರಜ್ಞಾನಕ್ಕೂ ಈಗಿನ ತಂತ್ರಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಹೊಸ ತಂತ್ರಜ್ಞಾನಗಳಿಂದ ಈಗ ರೇಷ್ಮೆ ಬೆಳೆ ಬೆಳೆಯಲು ಬಲು ಸುಲಭ. ಈ ಭಾಗದ ಜನರು ರೇಷ್ಮೆ ಬೆಳೆ ಬೆಳೆಯಲು ಮುಂದೆ ಬರಬೇಕಿದೆ. ಅನೇಕ ರೀತಿಯ ಸಹಾಯಧನಗಳಿವೆ, ಹಲವಾರು ಯೋಜನೆಗಳಿವೆ. ಅವೆಲ್ಲದರ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ನಿಮಗೆ ಮಾಹಿತಿ ನೀಡಲಿದ್ದಾರೆ. ರೇಷ್ಮೆ ಬೆಳೆಗೆ ಪರಿವರ್ತನೆ ಆಗುವವರಿಗೆ ಬಹಳಷ್ಟು ಉತ್ತೇಜನ ನೀಡಲಾಗುವುದು. ರಾಜ್ಯದ ಎಲ್ಲಾ ಭಾಗಗಳಲ್ಲೂ ಮಾರ್ಕೇಟ್ ಗಳನ್ನು ತೆರೆಯುವ ಕೆಲಸವಾಗಲಿದೆ. ದೇಶದಲ್ಲೇ ರೇಷ್ಮೆ ಬೆಳೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡುವವರಿಗೆ ಸಸಿಯಿಂದ ಹಿಡಿದು ಎಲ್ಲಾ ಸವಲತ್ತುಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡಲಾಗುವುದು. ಉಳಿದಂತೆ ಸಬ್ಸಿಡಿಗಳನ್ನು ನೀಡಲಾಗುವುದು. ರೇಷ್ಮೆ ಬಹಳಷ್ಟು ಉತ್ತಮ ಬೆಳೆಯಾಗಿದೆ. ರಾಜ್ಯದಾದಂತ ರೇಷ್ಮೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಮೊಟ್ಟೆಯ ಗೂಡನ್ನು ತಂದು ಮಾರಾಟ ಮಾಡುವ ಕೃಷಿಕರಿಗೆ ಹಿಂದಿನ ಸರಕಾರ ಪ್ರತೀ ಕಿಲೋಗೆ 10 ರೂ ನೀಡಲಾಗುತ್ತಿತ್ತು. ಇದೀಗ ನಮ್ಮ ಸರಕಾರ ಬಂದ ಮೇಲೆ 30 ರೂ. ಕೊಡುವ ಕೆಲಸವಾಗುತ್ತಿದೆ. ರೇಷ್ಮೆಬೆಳೆಯಿಂದಾಗಿ ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ. ಉತ್ತಮ ಉದ್ದೇಶ ಇಟ್ಟುಕೊಂಡು ಮಾಡಿದ ಕಾರ್ಯಕ್ರಮ ಯಶಸ್ಸಾಗಲಿ ಎಂದರು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದರವರು ಮಾತನಾಡಿ, ಇದೊಂದು ಮಾಹಿತಿ ಆಧಾರಿತ ಕಾರ್ಯಕ್ರಮವಾಗಿದೆ. ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ರವರು ಸರಳ ವ್ಯಕ್ತಿತ್ವದವರಾಗಿದ್ದಾರೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ರೇಷ್ಮೆ ಮಾರುಕಟ್ಟೆ ಇಲ್ಲದೆ ಇರುವುದರಿಂದ ರೇಷ್ಮೆ ಕೃಷಿ ಕಡಿಮೆಯಾಯಿತು. ಈ ಕಾರ್ಯಕ್ರಮದ ಮೂಲಕ ರೇಷ್ಮೆಯ ಬೆಳವಣಿಗೆ, ಆದಾಯ ಎಲ್ಲರಿಗೆ ಬಹಿರಂಗ ಪಡಿಸುವ ಕೆಲಸವಾಗಿದೆ. ಮನೆ ಬೆಳಗುವ ಕೆಲಸ ಈ ಕೃಷಿಯಿಂದ ಆಗಲಿದೆ. ರೇಷ್ಮೆ ಕೃಷಿಯಿಂದ ಮನೆ – ಮನೆಯ ಸಂಪಾದನೆ ಸಾಧ್ಯ. ರೇಷ್ಮೆ ಉತ್ಪಾದನೆಯ ಮೌಲ್ಯ ವರ್ದನೆ ಆದಾಗ ಕೃಷಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ನಮ್ಮ ಸುದ್ದಿ ಪತ್ರಿಕೆ, ಚಾನಲ್, ವೆಬ್ಸೈಟ್ ಪುತ್ತೂರು, ಸುಳ್ಯ, ಬೆಳ್ತಂಗಡಿ ಸಹಿತ ಜಿಲ್ಲೆಯಾದಂತ ಕಾರ್ಯನಿರ್ವಹಿಸುತ್ತಿದ್ದು. ಈ ಭಾಗದ ಜನರಿಗೆ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆ, ಚಾನಲ್, ವೆಬ್ಸೈಟ್, ಸುದ್ದಿ ಅರಿವು ಕೇಂದ್ರ ನಿಮ್ಮೊಂದಿಗೆ ಸೇರಿಕೊಳ್ಳಲಿದ್ದೇವೆ. ಆ ಮೂಲಕ ನಿಮ್ಮ ಮಾಧ್ಯಮವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಿದ್ದೇವೆ. ದ.ಕ.ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಮನೆ – ಮನೆಯ ಉದ್ಯಮವನ್ನಾಗಿ ಮಾಡಿ ಆರ್ಥಿಕ ಸ್ವಾವಲಂಭಿಯನ್ನಾಗಿಸುವ ಕೆಲಸ ಮಾಡೋಣ ಎಂದರು.

ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಪ್ರತಿಭಾ ಬಿ.ಆರ್. ರವರು ಮಾತನಾಡಿ ರೇಷ್ಮೆ ಕೃಷಿ ದ.ಕ.ಜಿಲ್ಲೆಯಲ್ಲಿ 1992ರ ವರೆಗೆ ಹೆಚ್ಚಿತ್ತು. ಆ ಬಳಿಕದ ದಿನಗಳಲ್ಲಿ ಬಂದ ಗಂಟು ರೋಗದ ಹಿನ್ನೆಲೆಯಲ್ಲಿ ಬೆಳೆ ಕಡಿಮೆಯಾಯಿತು. ಆ ಬಳಿಕದ ದಿನಗಳಲ್ಲಿ ಇಲಾಖೆ ಅದನ್ನು ಹತೋಟಿಗೆ ತರುವ ಪ್ರಯತ್ನ ನಡೆಸಿತಾದರೂ ದ.ಕ. , ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಾಗಿಲ್ಲ. ನಮ್ಮ ಸಂಶೋಧನಾ ಸಂಸ್ಥೆಗಳು ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಹೊರತಂದಿದೆ. ಕೃಷಿಕರು ಉತ್ತಮ ಆದಾಯ ಪಡೆಯಲು ಇದು ಬಹಳಷ್ಟು ಅನುಕೂಲಕರವಾಗಿದೆ. ಇದೀಗ ಇಂಡೋ ಜಾಫಿನೀಸ್ ಸಿಸ್ಟಮ್ ನಲ್ಲಿ ರೇಷ್ಮೆ ಕೃಷಿ ಬೆಳೆ ಮಾಡಲಾಗುತ್ತದೆ. ಸೋಂಕು ನಿವಾರಣೆಗೆ ಅತ್ಯಾಧುನಿಕ ಕ್ರಮ ಕೈಗೊಳ್ಳುವುದರಿಂದ ಇತ್ತೀಚಿನ ದಿನಗಳಲ್ಲಿ ಬೆಳೆ ವಿಫಲತೆ ಕಡಿಮೆಯಾಗುತ್ತಿದೆ. ಯುವಕರು ಸಾಪ್ಟವೇರ್ ಕಂಪೆನಿಗಳನ್ನು ಬಿಟ್ಟು ರೇಷ್ಮೆ ಬೆಳೆ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುವ ಹಂತಕ್ಕೆ ತಲುಪಿದ್ದಾರೆ. ರೇಷ್ಮೆ ಬೆಳೆಗೆ ಇಲಾಖೆ ನಿತ್ಯ ನಿರಂತರವಾಗಿ ಸಹಕಾರ ಮಾಡುತ್ತಿದೆ. ರೇಷ್ಮೆ ಕೃಷಿಯಿಂದ ಆರ್ಥಿಕತೆ ಸುದೃಢವಾಗಲು ಸಾಧ್ಯ ಎಂದು ಹೇಳಿದ ಅವರು ರೇಷ್ಮೆ ಕೃಷಿಗೆ ಸರಕಾರದಿಂದ ಸಿಗುವ ಸವಲತ್ತು, ರೇಷ್ಮೆ ಕೃಷಿ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಬೈಲುಗುತ್ತುರವರು ಮಾತನಾಡಿ ಇದೊಂದು ಜನರಿಗೆ ಸಹಕಾರಿಯಾಗುವ ಕಾರ್ಯಕ್ರಮವಾಗಿದೆ. ಇಂತಹ ಸಚಿವರುಗಳಿಂದ ರೇಷ್ಮೆಗೆ ಬಲ ಬಂದಿದೆ. ಯಾವುದೇ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದರೆ ಯಾವುದೇ ಯೋಜನನೆಗಳು ಕೃಷಿಕರಿಗೆ ತಲುಪಲು ಸಾಧ್ಯ ಎಂದರು.
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕರಾದ ಎಂ.ಪ್ರಸಾದ್ ಶೆಟ್ಟಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ 90% ಜನ ಅಡಿಕೆಯನ್ನು ನಂಬಿದ್ದಾರೆ. ಆದರೆ ಅಡಿಕೆ ಬೆಲೆ ಕುಸಿದರೆ ಈ ಭಾಗದ ಜನರು ಬಹಳಷ್ಟು ಕಷ್ಟ ಅನುಭವಿಸಬೇಕಾದ ಸನ್ನಿವೇಶ ಎದುರಾಗಬಹುದು. ಆದ್ದರಿಂದ ಉಪ ಬೆಳೆಯನ್ನಾಗಿ ರೇಷ್ಮೆ ಕೃಷಿ ಮಾಡಬಹುದಾಗಿದೆ.ಇದರಿಂದಲೂ ಬಹಳಷ್ಟು ಲಾಭ ಪಡೆಯಬಹುದಾಗಿದೆ. ಕೃಷಿಕರು ರೇಷ್ಮೆ ಕೃಷಿಯ ಬಗ್ಗೆ ಒಲವು ತೋರಬೇಕಿದೆ. ಸರಕಾರವು ಎಲ್ಲಾ ರೀತಿಯ ಸಹಕಾರವನ್ನು ಕೃಷಿಕರಿಗೆ ನೀಡಲಿದೆ. ಕೃಷಿಕರ ಶ್ರೇಯೋಬಿವೃದ್ಧಿ ನಮ್ಮ ಗುರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ , ರೇಷ್ಮೆ ಕೃಷಿಯಲ್ಲಿ ಸಾಧನೆಗೈಯುತ್ತಿರುವ ಮಮತ ರೈ ದೇವಸ್ಯ, ಮಿಶ್ರಕೃಷಿಯಲ್ಲಿ ಸಾಧನೆಗೈಯ್ಯುತ್ತಿರುವ ನವೀನ್ ಚಾಕುಬಾಯ್ ಸುಳ್ಯ, ಮುರುವ ಮಹಾಭಲ ಭಟ್ ರವರನ್ನು ಸನ್ಮಾನಿಸಲಾಯಿತು. ಬಳಿಕ 2026-27ನೇ ಸಾಲಿನ ಮಾಹಿತಿ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು. ವೈಭವ್ ಪ್ರಭು ಮೂಡಬಿದ್ರೆ, ರಾಮಕೃಷ್ಣ ಗೌಡ ದೋಳ್ಪಾಡಿ, ಜೋಸೆ- ರೋಡ್ರಿಗಸ್ ರವರಿಗೆ ಸಹಾಯಧನ ಹಾಗೂ ಸಲಕರಣೆ ವಿತರಣೆ ಮಾಡಲಾಯಿತು.
ಪಶುಸಂಗೋಪನಾ ಇಲಾಖೆ ಮಂಗಳೂರು ಇದರ ಉಪನಿರ್ದೇಶಕರಾದ ಅರುಣ್ ಕುಮಾರ್ ಶೆಟ್ಟಿ, ಮಂಗಳೂರು ಕಪಿಲ ಗೋಶಾಲೆಯ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ, ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಪ್ರೀತಂ ಸೀಕ್ವೆರಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹಿನಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ವಿಟ್ಲ ಇದರ ನಿರ್ದೇಶಕರಾದ ಸುಮಿತ್ ಮಸ್ಕರೇನಸ್ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ದಿನೇಶ್ ಪ್ರಾರ್ಥಿಸಿದರು. ನಿರ್ದೇಶಕರಾದ ನಾಗರಾಜ್ ಬನ್ನೂರು ವಂದಿಸಿದರು.

ಅನುಮೋದನೆ ಸಿಕ್ಕಿದ ಕೂಡಲೇ ಕೊಯಿಲ ಪಶು ವೈದ್ಯಕೀಯ ಆಸ್ಪತ್ರೆ ಆರಂಭ
ಕಡಬ ತಾಲೂಕು ಕೊಯಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿಗೆ ಕೇಂದ್ರದಿಂದ ಅನುಮೋದನೆ ಸಿಗಬೇಕಿದೆ. ನಮ್ಮಲ್ಲಿನ ಇಬ್ಬರು ನಿರ್ದೇಶಕರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಅನುದಾನಗಳು ಬಂದಿದೆ, ಕೆಲಸಗಳು ಪೂರ್ಣಗೊಂಡಿದೆ, ಸಿಬ್ಬಂದಿಗಳ ನೇಮಕ ಕೂಡಾ ಆಗಿದೆ. ಪರ್ಮೀಶನ್ ಬಂದ ಕೂಡಲೇ ಆರಂಭಿಸಲಿದ್ದೇವೆ.
ಕೆ. ವೆಂಕಟೇಶ್, ಸಚಿವರು,
ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ










