






ಪುತ್ತೂರು: ಇತ್ತೀಚೆಗೆ ಮಾಣಿಯ ಜನಭವನದಲ್ಲಿ ನಡೆದ ಲೇಖಕರೂ ವಿಶ್ರಾಂತ ಪ್ರಾಂಶುಪಾಲರೂ ಆದ ಡಾ.ವರದರಾಜ ಚಂದ್ರಗಿರಿ ಮತ್ತು ಡಾ. ಸುಲೇಖಾ ವರದರಾಜ್ ಅವರ ಸುಪುತ್ರ ಸೃಜನ್ ರಾಜ್ ಮತ್ತು ಮೇಘನಾ ಅವರ ವಿವಾಹದ ವಧೂಗೃಹಪ್ರವೇಶ ಕಾರ್ಯಕ್ರಮವು ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾಯಿತು. ವಿವಾಹ ವೇದಿಕೆಯಲ್ಲೇ ಡಾ. ಚಂದ್ರಗಿರಿ ಅವರ ಸಾತತ್ಯ-ಸಾಂಪ್ರತ ಎಂಬ ಹೊಸ ಲೇಖನಗಳ ಸಂಕಲನವನ್ನು ಅನಾವರಣಗೊಳಿಸಲಾಯಿತು.


ಹಿರಿಯ ಲೇಖಕರಾದ ಡಾ. ತಾಳ್ತಜೆ ವಸಂತಕುಮಾರ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಸಾಹಿತ್ಯಾಧ್ಯಯನದ ಅನೇಕ ಹೊಸ ಸಾಧ್ಯತೆಗಳನ್ನೂ ದಾರಿಗಳನ್ನೂ ಸೂಚಿಸುವ ಈ ಕೃತಿಯ ಒಟ್ಟು ಆಶಯವು ಸಾಂಸ್ಕೃತಿಕವಾಗಿದ್ದು ಒಂದು ಸಾಂಸ್ಕೃತಿಕ ವಾತಾವರಣದಲ್ಲೇ ಇದು ಬಿಡುಗಡೆಯಾಗುತ್ತಿರುವುದನ್ನು ಪ್ರಶಂಸಿದರು. ಕೃತಿಕಾರರಾದ ವರದರಾಜ ಚಂದ್ರಗಿರಿ ದಂಪತಿಗಳು ಸ್ವಾಗತಿಸಿದರು. ನೂತನ ವಧೂವರರೂ ವಧುವಿನ ತಂದೆ ತಾಯಿಯರಾದ ಹರಿಕಿರಣ್ ಕೊಯಿಲ, ಅನುರಾಧಾ ದಂಪತಿಗಳೂ ಕೃತಿಯ ಪ್ರಕಾಶಕರಾದ ಆಕೃತಿ ಪ್ರಕಾಶನದ ಕಲ್ಲೂರು ನಾಗೇಶರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಡಾ. ಗೋವಿಂದ ಪ್ರಸಾದ್ ಕಜೆ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಮೊದಲು ಸಂಜನಾ ರಾಜ್ ಚಂದ್ರಗಿರಿ ಮತ್ತು ಕು. ಹಂಸಿನಿ ರಾವ್ ಮಾರ್ಪಳ್ಳಿ ಇವರ ಶಾಸ್ತ್ರೀಯ ನೃತ್ಯವು ವಿಶೇಷ ಆಕರ್ಷಣೆಯಾಗಿತ್ತು. ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಡಾ. ಬಿ.ಎ ವಿವೇಕ ರೈ, ಡಾ. ಚಿನ್ನಪ್ಪ ಗೌಡ, ನಾಡೋಜ ಕೆ.ಪಿ. ರಾವ್, ಲಕ್ಷ್ಮೀಶ ತೋಳ್ಪಾಡಿ, ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಈಗಿನ ಅಧ್ಯಕ್ಷರಾದ ಎಂ.ಪಿ.ಶ್ರೀನಾಥ್, ತಾಲೂಕು ಅಧ್ಯಕ್ಷ ಉಮೇಶ ನಾಯಕ್, ನರೇಂದ್ರ ರೈ ದೇರ್ಲ, ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್, ವಿ.ಬಿ. ಅರ್ತಿಕಜೆ, ಡಾ. ರಮಾನಂದ ಬನಾರಿ,, ಕನ್ನಡ ವಿಶ್ವವಿದ್ಯಾಲಯದ ಡಾ. ಸುಬ್ಬಣ್ಣ ರೈ, ಮೋಹನ ಕುಂಟಾರು, ಡಾ. ಅಜಕ್ಕಳ ಗಿರೀಶ ಭಟ್, ಪಾದೇಕಲ್ಲು ವಿಷ್ಣು ಭಟ್, ಎಂ.ಆರ್.ವಾಸುದೇವ ಮುಂತಾದವರಲ್ಲದೆ ಎರಡೂ ಕುಟುಂಬಗಳ ಬಂಧುಗಳೂ ಸ್ನೇಹಿತವರ್ಗದವರೂ ಉಪಸ್ಥಿತರಿದ್ದರು. ಬಂದವರಿಗೆಲ್ಲಾ ಬಿಡುಗಡೆಯಾದ ಪುಸ್ತಕದ ಪ್ರತಿಯನ್ನೂ ಹಾಗೂ ಹಸಿರು ಜಾಗೃತಿಯ ಉದ್ದೇಶದಿಂದ ಚಿಕ್ಕು ಮತ್ತು ಪೇರಳೆ ಗಿಡಗಳನ್ನೂ ಸ್ಮರಣಿಕೆಯಾಗಿ ವಿತರಿಸಲಾಯಿತು.










