






ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಮಂದಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಮನೆಯಿಲ್ಲದೆ ಇದ್ದು ಅಂತಹ ಕುಟುಂಬಗಳಿಗೆ ಮನೆ ಮಂಜೂರು ಮಾಡುವಂತೆ ಶಾಸಕ ಅಶೋಕ್ ರೈ ಅವರು ವಸತಿ ಮತ್ತು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ರವರಿಗೆ ಮನವಿ ಸಲ್ಲಿಸಿದ್ದಾರೆ.


ಮೇ.21ರಂದು ಸಚಿವರನ್ನು ಭೇಟಿಯಾದ ಶಾಸಕರು 1500ಕ್ಕೂ ಮಿಕ್ಕಿ ಬಡವರಿಗೆ ತನ್ನ ಕ್ಷೇತ್ರದಲ್ಲಿ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಸ್ವಂತ ಜಾಗವಿಲ್ಲ, ಕೆಲವರಿಗೆ ಸ್ವಂತ ಜಾಗವಿದ್ದರೂ ಮನೆ ಕಟ್ಟಲು ಆರ್ಥಿಕ ಶಕ್ತಿ ಇಲ್ಲ. ಇಂತಹ ಬಡ ಕುಟುಂಬಗಳು ನೆಮ್ಮದಿಯಾಗಿರಬೇಕಾದರೆ ಅವರಿಗೊಂದು ಸ್ವಂತ ಸೂರಿನ ಅಗತ್ಯವಿದ್ದು ಈ ಬಾರಿ ಪುತ್ತೂರಿಗೆ 1500 ಮನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು 1500 ಮನೆಗಳ ಬದಲು 1250 ಮನೆಗಳನ್ನು ಕೊಡುವ ಭರವಸೆ ನೀಡಿದ್ದಾರೆ.



ನಿವೇಶನ ಉಚಿತ ನೀಡುತ್ತಿದ್ದೇವೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಇಲ್ಲದ ಕಡು ಬಡವರಿಗೆ 2.75 ಸೆಂಟ್ಸ್ ನಿವೇಶನಕ್ಕಾಗಿ 300 ಎಕ್ರೆ ಸರಕಾರಿ ಜಾಗವನ್ನು ಗುರುತಿಸಲಾಗಿದೆ ಮತ್ತು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವಿಟ್ಲ ಮುಡ್ನೂರು ಗ್ರಾಮದಲ್ಲಿ ನಾನೇ ಜಾಗ ಖರೀದಿಸಿ ಅದರಲ್ಲಿ 250 ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚುವ ಕೆಲಸವನ್ನು ಮಾಡಲಿದ್ದೇನೆ ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರಲ್ಲಿ ತಿಳಿಸಿದ ಶಾಸಕರು ಉಳಿದಂತೆ ಸಾವಿರಕ್ಕೂ ಮಿಕ್ಕಿ ಬಡವರಿಗೂ ಮನೆ ನಿರ್ಮಾಣ ಮಾಡಬೇಕಿದೆ ಇದಕ್ಕೆ ಸರಕಾರದ ನೆರವು ಅಗತ್ಯವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ನನ್ನ ಕ್ಷೇತ್ರದಲ್ಲಿ ಯಾವುದೇ ಕುಟುಂಬ ಮನೆ, ವಿದ್ಯುತ್, ಕುಡಿಯುವ ನೀರು ಇಲ್ಲದೇ ಇರಬಾರದು ಎಂಬ ಸಂಕಲ್ಪ ಮಾಡಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಕೆಲಸವನ್ನು ನಾನು ಮಾಡಲಿದ್ದೇನೆ. 2000ಕ್ಕೂ ಮಿಕ್ಕಿ ಕುಟುಂಬಗಳಿಗೆ ನಿವೇಶನ ನೀಡುವ ಕೆಲಸವನ್ನು ಮಾಡುತ್ತೇನೆ. 1250 ಮನೆಯನ್ನು ಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಮುಂದೆ ಇನ್ನಷ್ಟು ಬೇಡಿಕೆಗಳನ್ನು ಸಲ್ಲಿಸಲಾಗುವುದು
ಅಶೋಕ್ ರೈ, ಶಾಸಕರು ಪುತ್ತೂರು










