






ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದಂಬಾಡಿ ಸರ್ಕಾರಿ ಶಾಲೆಯ ಆಟದ ಮೈದಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಮಣ್ಣು ತುಂಬಿಸುವ ಕಾಮಗಾರಿಯು ಇದೀಗ ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಮಳೆಗಾಲ ಹೊಸ್ತಿಲಲ್ಲಿ ಇರುವಾಗ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅವೈಜ್ಞಾನಿಕವಾಗಿ ಮಣ್ಣು ಸುರಿದಿರುವುದು ಕೃಷಿಕರ ನಿದ್ದೆಗೆಡಿಸಿದೆ. ಇತ್ತೀಚೆಗೆ ಸುರಿದ ಒಂದೆರಡು ಮಳೆಗೆ ಮಣ್ಣು ದಿಬ್ಬದಲ್ಲಿ ಅಲ್ಲಲ್ಲಿ ಬಿರುಕು ಮೂಡಿದ್ದು ಮಣ್ಣು ಕೊಚ್ಚಿಕೊಂಡು ಹೋಗಲು ತಯಾರಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೃಷಿ ತೋಟ ಹಾಗೇ ಸಾರ್ವಜನಿಕ ರಸ್ತೆಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.



20 ಫೀಟ್ಗಿಂತಲೂ ಹೆಚ್ಚು ಎತ್ತರಕ್ಕೆ ಮಣ್ಣು ಸಂಗ್ರಹ
ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಮುಖ್ಯ ಗುರುಗಳ ಆದೇಶದಂತೆ ಶಾಲಾ ಮೈದಾನದ ವಿಸ್ತರಣೆಗಾಗಿ ಭಾರಿ ಪ್ರಮಾಣದಲ್ಲಿ ಮಣ್ಣನ್ನು ತಂದು ಸುರಿಯಲಾಗಿದೆ. ಸುಮಾರು 7 ತಿಂಗಳುಗಳಿಂದ ನಿರಂತವಾಗಿ ಖಾಸಗಿ ವ್ಯಕ್ತಿಗಳ ಜಮೀನಿನ ಮಣ್ಣನ್ನು ಇಲ್ಲಿ ತಂದು ಸುರಿಯಲಾಗಿದ್ದು ಪ್ರಸ್ತುತ ಈ ಮಣ್ಣಿನ ರಾಶಿ ಸುಮಾರು 20 ಫೀಟ್ಗಿಂತಲೂ ಹೆಚ್ಚಿನ ಎತ್ತರಕ್ಕೆ ಬಂದು ನಿಂತಿದೆ. ಆದರೆ, ಈ ಬೃಹತ್ ಮಣ್ಣಿನ ದಿಬ್ಬವನ್ನು ಸಂರಕ್ಷಿಸಲು ಯಾವುದೇ ತಡೆಗೋಡೆಯನ್ನಾಗಲಿ ಅಥವಾ ಪರ್ಯಾಯ ಭದ್ರತಾ ವ್ಯವಸ್ಥೆಯನ್ನಾಗಲಿ ಮಾಡಲಾಗಿಲ್ಲ. ಇದಲ್ಲದೆ ಮಣ್ಣು ಸುರಿಯುವ ಮೊದಲು ಕೂಡ ಯಾವುದೇ ಇಂಜಿನಿಯರಿಂಗ್ ಎಸ್ಟಿಮೇಟ್ ಕೂಡ ತಯಾರು ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ.



ಮಳೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲ: ಕೃಷಿ ತೋಟಗಳಿಗೆ ಹಾನಿ ಭೀತಿ
ಪ್ರಸ್ತುತ ಸುರಿದಿರುವ ಮಣ್ಣಿನ ರಾಶಿಯಲ್ಲಿ ಈಗಾಗಲೇ ಸುರಿದ ಮಳೆಗೆ ಸಣ್ಣ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ. ಮುಂಬರುವ ಮಳೆಗಾಲದಲ್ಲಿ ಭಾರಿ ಮಳೆಯಾದಲ್ಲಿ ಈ ಇಳಿಜಾರಿನಲ್ಲಿರುವ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಮೈದಾನದ ಕೆಳಭಾಗದಲ್ಲಿ ಸ್ಥಳೀಯ ನಿವಾಸಿಗಳ ಕೃಷಿ ತೋಟಗಳಿದ್ದು, ಮಣ್ಣು ಕುಸಿದರೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಆಸ್ತಿ-ಪಾಸ್ತಿಗಳು ನಾಶವಾಗುವ ಭೀತಿ ಎದುರಾಗಿದೆ. ಪರಿಸರದಲ್ಲಿರುವ ಹಸಿರು ಗಿಡ-ಮರಗಳ ಮೇಲೂ ಈ ಮಣ್ಣು ಕುಸಿಯುವ ಅಪಾಯ ಎದ್ದು ಕಾಣುತ್ತಿದೆ. ಇದಲ್ಲದೆ ಸಾರ್ವಜನಿಕ ಸಂಪರ್ಕ ರಸ್ತೆ ಕೂಡ ಇದ್ದು ಮಣ್ಣು ಕುಸಿದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಶಿಕ್ಷಣಾಧಿಕಾರಿ, ತಹಶೀಲ್ದಾರ್, ಇಓ ಗೆ ದೂರು
ಈ ಅವೈಜ್ಞಾನಿಕ ಕಾಮಗಾರಿಯಿಂದ ಕಂಗಾಲಾದ ಸ್ಥಳೀಯ ಸಾರ್ವಜನಿಕರು ಕೆದಂಬಾಡಿ ಗ್ರಾಮ ಪಂಚಾಯತ್ಗೆ ತುರ್ತು ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದ ಗಂಭೀರತೆಯನ್ನು ಅರಿತ ಗ್ರಾಮ ಪಂಚಾಯತ್, ಮುಂದಾಗಬಹುದಾದ ಅಪಾಯವನ್ನು ತಪ್ಪಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಇದಲ್ಲದೆ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ಅವರಿಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಮಕ್ಕಳ ಆಟದ ಮೈದಾನ ವಿಸ್ತರಣೆ ಮಾಡುವುದು ಒಳ್ಳೆಯದೇ. ಆದರೆ ಕೃಷಿಕರ ತೋಟಗಳನ್ನು ಬಲಿಗೊಟ್ಟು ಈ ಕೆಲಸ ಮಾಡಬಾರದು. ಸರಿಯಾದ ರೀತಿಯಲ್ಲಿ ಇಂಜಿನಿಯರ್ಗಳಿಂದ ಯಾವ ರೀತಿಯಲ್ಲಿ ಮಣ್ಣು ತುಂಬಿಸಬಹುದು ಎಂದು ಎಸ್ಟಿಮೇಟ್ ಪಡೆದುಕೊಂಡು ಮಣ್ಣು ತುಂಬಿಸಬೇಕಿತ್ತು ಆದರೆ ಅವೆಲ್ಲವನ್ನು ಮಾಡದೇ ಒಟ್ರಾಸಿಯಾಗಿ ಮಣ್ಣು ತುಂಬಿಸಲಾಗಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಈ ಮಣ್ಣು ಕುಸಿಯದಂತೆ ಏನಾದರೂ ವ್ಯವಸ್ಥೆ ಮಾಡಬೇಕು ಅಥವಾ ನೀರು ಹರಿದು ಹೋಗಲು ಶಾಶ್ವತ ಕಾಲುವೆ ಮಾಡಬೇಕು. ಶಾಲಾ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಮಳೆಗಾಲದ ಮುಂಚಿತವಾಗಿ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಹಾಯಕ ಕಮೀಷನರ್ಗೆ ದೂರು
ಕೆದಂಬಾಡಿ ಸನ್ಯಾಸಿಗುಡ್ಡೆ ಸರಕಾರಿ ಶಾಲೆಯ ವಠಾರದಲ್ಲಿ ಆಟದ ಮೈದಾನವನ್ನು ವಿಸ್ತರಿಸಲು ಯಾವುದೇ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳದೇ ಮಣ್ಣು ತುಂಬಿಸಿದ್ದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೇ ಇರುವುದರಿಂದ ಮಣ್ಣು ಕೃಷಿ ತೋಟಗಳಿಗೆ, ಸಾರ್ವಜನಿಕ ರಸ್ತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಇದು ಮಾನವ ನಿರ್ಮಿತ ವಿಕೋಪವಾಗಿರುವುದರಿಂದ ಕೃಷಿ ಹಾನಿಗೊಂಡರೆ ಯಾರು ಪರಿಹಾರ ನೀಡುವುದು ಆದ್ದರಿಂದ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮೀಷನರ್ರವರಿಗೆ ಸ್ಥಳೀಯ ಕೃಷಿಕರುಗಳಾದ ರಾಘವ ಗೌಡ ಕೆರೆಮೂಲೆ, ಗಣಪತಿ ಭಟ್ ಸನ್ಯಾಸಿಗುಡ್ಡೆ, ರಾಜೀವ ರೈ ಕೋರಂಗ, ಪುಷ್ಪಾವತಿ ಶೀನಪ್ಪ ಗೌಡ, ದಿನಕರ ರೈ ಮಾಣಿಪ್ಪಾಡಿ, ಕರುಣಾಕರ ರೈ ಕೋರಂಗ,ಸುರೇಶ್ ರೈಮಾಣಿಪ್ಪಾಡಿ, ಕರುಣಾಕರ ರೈ ಅತ್ರೆಜಾಲುರವರುಗಳು ಮನವಿ ಮಾಡಿದ್ದಾರೆ.
ಮಕ್ಕಳಿಗೂ ಕಾದಿದೆ ಇಲ್ಲಿ ಅಪಾಯ…!
ಸುಮಾರು 20 ಫೀಟ್ಗಿಂತಲೂ ಹೆಚ್ಚು ಎತ್ತರದಲ್ಲಿ ಮಣ್ಣು ತುಂಬಿಸಿರುವುದರಿಂದ ಮಳೆಗಾಲದಲ್ಲಿ ಈ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚಿದೆ ಅಲ್ಲದೆ ಮಣ್ಣು ಕೊಚ್ಚಿ ಹೋಗಿ ದೊಡ್ಡ ದೊಡ್ಡ ಚರಂಡಿ ನಿರ್ಮಾಣವಾಗಲಿದೆ. ಇದಲ್ಲದೆ ಮಳೆಗಾಲದಲ್ಲಿ ಮಕ್ಕಳು ಆಟವಾಡಿಕೊಂಡು ಮಣ್ಣಿನ ದಿಬ್ಬದ ಹತ್ತಿರ ಬಂದರೆ ಮಣ್ಣಲ್ಲಿ ಕಾಲು ಊತು ಹೋಗಿ ಅವಾಂತರ ಸಂಭವಿಸುವ ಸಾಧ್ಯತೆಯೂ ಇದೆ. ಪುಟ್ಟ ಪುಟ್ಟ ಮಕ್ಕಳು ಆಟವಾಡಿಕೊಂಡು ಬಂದು ಮಣ್ಣಲ್ಲಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಸಾರ್ವಜನಿಕರು ಆತಂತ ವ್ಯಕ್ತಪಡಿಸಿದ್ದಾರೆ.
ಆಟದ ಮೈದಾನ ವಿಸ್ತರಣೆ, ಕ್ರೀಡಾಕೂಟಕ್ಕೆ ಅನುಕೂಲವಾಗುಂತೆ ಟ್ರ್ಯಾಕ್ ರಚನೆ ಹಾಗೂ ಕೃಷಿ ತೋಟ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಎಸ್ಡಿಎಂಸಿ ನಿರ್ಣಯದಂತೆ ಮಣ್ಣು ಹಾಕಲಾಗಿದೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ, ಮಣ್ಣು ಹಾಕುವುದರಿಂದ ತೊಂದರೆ ಆಗುವುದು ಕಂಡು ಬಂದಿದ್ದರೆ ಮಣ್ಣು ತುಂಬಿಸುವ ಸಂದರ್ಭದಲ್ಲೇ ತಿಳಿಸಿದ್ದರೆ ನಾವು ಮಣ್ಣು ಹಾಕುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ನಾವು ವ್ಯವಸ್ಥೆ ಮಾಡಿ ಕೊಡುತ್ತೇವೆ.
-ಕೃಷ್ಣ ಕುಮಾರ್ ಇದ್ಯಪೆ,
ಅಧ್ಯಕ್ಷರು ಎಸ್ಡಿಎಂಸಿ ಕೆದಂಬಾಡಿ ಸ.ಹಿ.ಪ್ರಾ.ಶಾಲೆ
ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಮಣ್ಣು ತುಂಬಿಸಿರುವುದರ ಬಗ್ಗೆ ಶಾಲಾ ಮುಖ್ಯಗುರುಗಳಿಗೂ ಲಿಖಿತ ಮನವಿ ಮಾಡಿದ್ದೇವೆ ಆದರೆ ಅವರು ಯಾವುದೇ ರೆಸ್ಪಾನ್ಸ್ ಮಾಡಿಲ್ಲ, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆಗಾಗಿ ತಾಪಂ ಇಓಗೆ ಮನವಿ ಮಾಡಿಕೊಂಡಿದ್ದೇವೆ.
-ಲಾವಣ್ಯ ಪಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆದಂಬಾಡಿ ಗ್ರಾಪಂ









