ಸಾಧಕ ಮಹನೀಯರ ಆಕರ್ಷಕ ಚಿತ್ತಾರ ಬಿಡಿಸಿ ಮಕ್ಕಳನ್ನು ಹುರಿದುಂಬಿಸೋ ಕಾಯಕ…

0

*ಸಜಂಕಾಡಿ ಸರಕಾರಿ ಶಾಲೆಯ ಗುರುಗಳ ತಂಡದ ಮೂಲಕ ಮೂಡಿ ಬಂದ ಮಹಾನ್ ಸಾಧಕ ಮಹನೀಯರ ಭಾವಚಿತ್ರಗಳು…
*ಕ್ಯೂಆರ್ ಕೋಡ್ ಅಳವಡಿಕೆ ಮೂಲಕ ಮಹನೀಯರ ಸಾಧನೆಯನ್ನು ಸಂಪೂರ್ಣ ರೀತಿ ಪುಟಾಣಿ ಮಕ್ಕಳಿಗೆ ಮನದಟ್ಟು ಮಾಡುವ ಕಾರ್ಯ…

ಇನ್ನೇನು ಬೇಸಿಗೆ ರಜೆಯು ಕಳೆದು , ಮೂರ್ನಾಲ್ಕು ದಿನಗಳಲ್ಲಿ ವಿದ್ಯಾ ದೇಗುಲಗಳೆಲ್ಲಾ ಮತ್ತೆ ಪುನರಾರಂಭಗೊಳಲಿದ್ದು , ಪುಟಾಣಿ ಮಕ್ಕಳೆಲ್ಲರೂ ಮುಂಗಾರು ಮಳೆಯ ಜೊತೆಗೆ ಹೆಜ್ಜೆ ಹಾಕಿಕೊಂಡು , ಸಡಗರ ಸಂಭ್ರಮದಿಂದ ಮತ್ತೆ ಜ್ಞಾನ ದೇಗುಲವನ್ನು ಸೇರೋ ಸಮಯ.


ಇಂತಹ ವೇಳೆ ಮಕ್ಕಳನ್ನು ಸೆಳೆಯಲು , ಶಾಲಾ ಶಿಕ್ಷಕ ವೃಂದ ನಾಡಿನ ಸಾಧಕ ಮಹನೀಯರ ಸಾಧನೆಯನ್ನು ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಪರಿಚಯಿಸಿ , ಅವರಲ್ಲೂ ಸಮಾಜ ಸೇವೆಯ ಅರಿವು ಮೂಡಿಸುವಂತಹ ಸಣ್ಣದಾದ ಪ್ರಯತ್ನವೊಂದನ್ನು ಸಜಂಕಾಡಿ ಸರಕಾರಿ ಶಾಲಾ ಅವರಣದಲ್ಲಿ ಬೇಸಿಗೆ ರಜೆ ವೇಳೆ ನಡೆದಿದೆ.


ಸುಮಾರು 59ವರುಷಗಳ ಇತಿಹಾಸ ಹೊಂದಿರುವ ಶಾಲೆ ತಾಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು 30ಕಿ.ಮೀ ದೂರದ ಸಜಂಕಾಡಿ ಎಂಬಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರ ಬೆಳಕು ನೀಡುವಂತಹ ಮಹಾನ್ ಕಾರ್ಯವನ್ನು ಮಾಡುತ್ತ ಬಂದಿದೆ. ಹಿಂದೆ ಇದೇ ಶಾಲೆಯಲ್ಲಿ ಪ್ರಭಾರ ಮುಖ್ಯಗುರುಗಳಾಗಿದ್ದ ಸುಮಲತಾ ಪಿ.ಕೆ ಅವರ ಬೆಂಬಲ ಮತ್ತು ಪ್ರೋತ್ಸಾಹ ಜೊತೆಗೆ ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು ಅವರ ವಿಶೇಷ ಮುತುವರ್ಜಿಯಿಂದ ಮತ್ತು ಅಕ್ಷರ ಪ್ರೇಮಿಗಳು ,ಜ್ಣಾನಾಶಕ್ತರು ಇವರೆಲ್ಲರ ಸಹಾಯ , ಸಹಕಾರದೊಂದಿಗೆ ಶಾಲಾ ಗೋಡೆಯಲ್ಲಿ ಪುತ್ತೂರಿನ ಯುವ ಕಲಾವಿದರಾದ ಸುದಾಂಶು ಆಚಾರ್ಯ ಹಾಗೂ ಕಾರ್ತಿಕ್ ಇವರುಗಳ ಕೈಚಳಕದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ,ಕಿತ್ತಳೆ ಹಣ್ಣು‌ ಮಾರಾಟದಿಂದ ಶಾಲೆ ನಿರ್ಮಿಸಿದ ಅಕ್ಷರ ಸಂತ ಪದ್ಮಶ್ರೀ ಡಾ .ಹರೇಕಳ ಹಾಜಬ್ಬ ,ಸುರಂಗ ನಿರ್ಮಾಣ ಮೂಲಕ ಆಧುನಿಕ ಭಗೀರಥನೆಂದು ಕರೆಸಿಕೊಂಡ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಈ ಸಾಧಕ ಮಹನೀಯರ ಭಾವಚಿತ್ರಗಳು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಬರಹಗಳೆಲ್ಲಾ ಅತ್ಯಾಕರ್ಷಕ ವಾಗಿ ಮೂಡಿಬಂದಿವೆ.

QRಕೋಡ್ ಮೂಲಕ ಸಾಧಕ ಮಹನೀಯರ ಮಾಹಿತಿ
ಡಿಜಟಲೀಕರಣ ವನ್ನು ಪರಿಚಯಿಸುವ ಸಲುವಾಗಿ ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು ಇವರ ಸುಂದರ ಕಲ್ಪನೆಯಲ್ಲಿ ಗೋಡೆಯಲ್ಲಿ ಚಿತ್ರಿಸಲಾದ ಸಾಧಕ ಮಹನೀಯರ ಮಾಹಿತಿಗಳನ್ನು ಚಿತ್ರದ ಮೇಲ್ಭಾಗದಲ್ಲಿ ಹಾಕಲಾದ QRಕೋಡ್ ಮೂಲಕ ಪಡೆಯುವಂತೆ ಮಾಡಲಾಗಿದೆ.

“ಸಾಧಕ ಮಹನೀಯರ ಚಿತ್ರ ಬಹಳ ಉತ್ತಮವಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳಿಗೆ ಇವರ ಸಾಧನೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿಸುತ್ತದೆ. ಶಿಕ್ಷಕರ ವಿಭಿನ್ನ ಪ್ರಯತ್ನಕ್ಕೆ ಅಭಿನಂದನೆಗಳು”
ಯಶೋಧ
ಅಧ್ಯಕ್ಷರು ಎಸ್.ಡಿ.ಎಂ.ಸಿ ಸಜಂಕಾಡಿ

LEAVE A REPLY

Please enter your comment!
Please enter your name here