







ಪುತ್ತೂರು: ಬಕ್ರೀದ್ ಹಬ್ಬ ಮುಸ್ಲಿಮರಿಗೆ ದೊಡ್ಡ ಹಬ್ಬವಾಗಿದೆ, ಈ ದಿನದಂದು ಹೊಸ ಬಟ್ಟೆ ಧರಿಸಿ ಮಸೀದಿಗೆ ವಿಶೇಷ ಈದ್ ನಮಾಜಿನಲ್ಲಿ ಭಾಗವಹಿಸಿ, ಪರಸ್ಪರ ಆಲಿಂಗಿಸಿ ಸಿಹಿ ಹಂಚಿ ಸಂಭ್ರಮ ಪಡುತ್ತಾರೆ. ಆದರೆ ಬಕ್ರೀದ್ ದಿನದಂದು ಒಳಮೊಗ್ರು ಗ್ರಾಮದ ಶೇಕಮಲೆ ಜಮಾತ್ನ ಮುಸ್ಲಿಂ ಭಾಂಧವರು ಈ ಬಾರಿ ಸಂಭ್ರಮಕ್ಕೆ ಹೆಚ್ಚು ಒತ್ತುಕೊಡಲಿಲ್ಲ ಇದಕ್ಕೆ ಕಾರಣ ಕುಂಬ್ರದ ಅಮೃತ ಕ್ಲಿನಿಕ್ನ ವೈದ್ಯರಾದ ವಿಘ್ನೇಶ್ವರ ಭಟ್ ಅವರ ಅನಾರೋಗ್ಯ. ಬ್ಲಡ್ ಕ್ಯಾನ್ಸರಿನಿಂದ ಬಳಲುತ್ತಿರುವ ಮತ್ತು ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟಪಡುತ್ತಿರುವ ವಿಘ್ನೇಶ್ವರ ಭಟ್ ರವರಿಗೆ ಹಣ ಸಂಗ್ರಹಿಸುವುದು ಮತ್ತು ವೈದ್ಯರಿಗಾಗಿ ಪ್ರಾರ್ಥನೆ ಮಾಡುವುದರಲ್ಲೇ ಬ್ಯುಸಿಯಾಗಿದ್ದರು.


ಏನಿದು ಘಟನೆ?
ಕುಂಬ್ರದಲ್ಲಿ ಕಳೆದ ಹಲವು ವರ್ಷಗಳಿಂದ ಅಮೃತ ಕ್ಲಿನಿಕ್ ನಡೆಸುತ್ತಿರುವ ವಿಘ್ನೇಶ್ವರ ಭಟ್ರವರಿಗೆ ಇದ್ದಕ್ಕಿದ್ದಂತೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದೆ. ವೈದ್ಯ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಅವರಿಗೆ ಕಾಯಿಲೆ ಬದುಕಿನ ಬಂಡಿಯನ್ನೇ ಬುಡಮೇಲು ಮಾಡಿದೆ. ಇದ್ದ ಹಣದಿಂದ ಚಿಕಿತ್ಸಾ ವೆಚ್ಚ ಭರಿಸಿದ್ದ ವೈದ್ಯರಿಗೆ ತನ್ನ ಬಳಿ ಇದ್ದ ಹಣ ಖಾಲಿಯಾದಾಗ ತಾವೇ ಸಾಮಾಜಿಕ ತಾಣದಲ್ಲಿ ಹಾಕಿ ಸಹಾಯಕ್ಕಾಗಿ ಕೈ ಚಾಚಿದ್ದರು. ನಮ್ಮೂರಿನ ವೈದ್ಯರು ಸಹಾಯಕ್ಕಾಗಿ ಕೈಚಾಚಿದಾಗ ಪಕ್ಕದಲ್ಲೇ ಇರುವ ಶೇಕಮಲೆ ಜಮಾತ್ಗೆ ಇದನ್ನು ಸಹಿಸಲು ಸಾಧ್ಯವಾಗಿಲ್ಲ. ಕಳೆದ ಶುಕ್ರವಾರ ವೈದ್ಯರ ವಿಚಾರವನ್ನು ಮಸೀದಿ ಕೂಗಿ ಹೇಳಲಾಯಿತು, ಆವತ್ತೆ ಹಣ ಸಂಗ್ರಹವನ್ನೂ ಮಾಡಲಾಯಿತು. ಸುಮಾರು 52 ಸಾವಿರದಷ್ಟು ಹಣ ಸಂಗ್ರಹವಾಗಿತ್ತು ಇದರಲ್ಲಿ ಕುಂಬ್ರದ ಮುಸ್ಲಿಂ ಬಂಧುಗಳೂ ಸೇರಿಕೊಂಡರು. ಚಿಕಿತ್ಸಾ ವೆಚ್ಚಕ್ಕಾಗಿ ತಮ್ಮಿಂದಾದ ಸಹಾಯ ನೀಡುತ್ತೇವೆ ಎಂದು ವೈದ್ಯರಿಗೆ ವಿಷಯ ತಿಳಿಸಲಾಯಿತು.



ಬಕ್ರೀದ್ ದಿನ ವಿಶೇಷ ಪ್ರಾರ್ಥನೆ
ಹಣ ಸಂಗ್ರಹ ಮಾಡಿದ್ದೂ ಮಾತ್ರವಲ್ಲದೆ ವೈಧ್ಯರ ರೋಗ ಶಮನಕ್ಕಾಗಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನೂ ನಡೆಸಲಾಯಿತು. ಮಸೀದಿಯಲ್ಲಿ ಮತ್ತೆ ಹಣ ಸಂಗ್ರಹಿಸಲಾಯಿರು ಎಲ್ಲವೂ ಒಟ್ಟು ಸೇರಿ 58,012 ರೂ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ಒಟ್ಟುಗೂಡಿಸಿದ ಶೇಕಮಲೆ ಜಮಾತ್ ಪ್ರಮುಖರು ನೇರವಾಗಿ ಸಂಪ್ಯದಲ್ಲಿರುವ ಡಾ. ವಿಘ್ನೇಶ್ವರ ಭಟ್ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಧರ್ಮಗಳ ಗಡಿಮೀರಿದ ಸೇವೆಯಾಗಿದೆ: ಎಸ್ ಪಿ ಬಶೀರ್
ನಮ್ಮೂರಿನ ವೈದ್ಯರಾದ ಡಾ. ವಿಘ್ನೇಶ್ವರ ಭಟ್ ರವರಿಗಾಗಿ ನಾವು ಶುಕ್ರವಾರ ಮತ್ತು ಬಕ್ರೀದ್ ದಿನ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದೇವೆ. ಧರ್ಮ, ಜಾತಿ, ಮತ ಯಾವುದೇ ಆಗಿರಲಿ ನಾವು ವೈದ್ಯರನ್ನು ಮನುಷ್ಯರೆಂದಷ್ಟೇ ತಿಳಿಯುತ್ತೇವೆ. ಮನುಷ್ಯ ಸಂಕಷ್ಟದಲ್ಲಿದ್ದಾಗ ಮನುಷ್ಯರಾದ ನಾವು ನೀವು ಸಹಾಯ ಮಾಡಬೇಕಾಗಿದ್ದು ನಮ್ಮ ಧರ್ಮವಾಗಿದೆ, ಅದನ್ನೇ ನಾವು ಮಾಡಿದ್ದೇವೆ. ಬೇರೆಯವರು ಕೊಟ್ಟಿದ್ದಾರೋ ಇಲ್ಲವೋ ಎಂಬುದು ನಮಗೆ ಮುಖ್ಯವಾಗುವುದಿಲ್ಲ. ಹಲವಾರು ಮಂದಿಗೆ ಚಿಕಿತ್ಸೆ ನೀಡಿದ ವೈದ್ಯರು ಬದುಕಿ ಉಳಿಯಬೇಕು, ಅವರ ಕುಟುಂಬ ಸಂತೋಷದಿಂದ ಇರಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ವೈದ್ಯರಿಗೆ ಮುಂದೆಯೂ ಸಹಾಯ ಮಾಡುವ ಭರವಸೆಯನ್ನು ನೀಡಿದ್ದೇವೆ. ರೋಗ ಶಮನಕ್ಕಾಗಿ ಸರ್ವರೂ ಪ್ರಾರ್ಥಿಸಿ ಯಾಕೆಂದ್ರೆ ಜೀವ ಹೋದ ಮೇಲೆ ನಾವು ದುಖ ಪಡುವುದಕ್ಕಿಂದ ಜೀವ ಇರುವಾಗಲೇ ಅವರಿಗೆ ನೆರವು ನೀಡುವ ಕೆಲಸ ಪ್ರತೀಯೊಬ್ಬರೂ ಮಾಡಿದರೆ ಒಂದು ಜೀವಕ್ಕೆ ಮರು ಜನ್ಮ ನೀಡಿದಂತಾಗುತ್ತದೆ ಎಂದು ಜಮಾತ್ ಕಾರ್ಯದರ್ಶಿ ಎಸ್ ಪಿ ಬಶೀರ್ ಹೇಳಿದರು.
ಎಲ್ಲರೂ ನಮ್ಮವರೇ: ಸುಲೈಮಾನ್ ಹಾಜಿ
ಶೇಕಮಲೆ ಜಮಾತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಹಾಜಿ ಮಾತನಾಡಿ ಕಷ್ಟಗಳು, ರೋಗಗಳು ಮಾನವನ ದೇಹಕ್ಕೆ ಬರುತ್ತದೆ ವಿನಾ ರೋಗಗಳು ಜಾತಿ, ಧರ್ಮ ನೋಡಿ ಬರುವುದಲ್ಲ. ನಮ್ಮೂರ ವೈದ್ಯರಿಗೆ ಮಾರಕ ಕಾಯಿಲೆ ಬಂದಿದೆ ಅದು ಗುಣಮುಖವಾಗಲೆಂದು ನಾವು ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿದ್ದೇವೆ. ನಾವು ಮಾಡಿದ್ದು ಅಳಿಲ ಸೇವೆ ಅಷ್ಟೆ. ಸಮಾಜ ಭಾಂದವರು ಕೈ ಜೋಡಿಸಿ ಅವರ ಚಿಕಿತ್ಸೆಗೆ ಆರ್ಥಿಕ ನೆರವಾಗಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ಹೇಳಿದರು.
ಕೃತಜ್ಞತೆಗಳು
ಸಂಕಷ್ಟದಲ್ಲಿರುವ ನನ್ನ ನೋವನ್ನು ಕಂಡು ಸಹಾಯ ಮಾಡಿದ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಳಿಲ ಸೇವೆ ಎಂದು ನೀವು ಹೇಳಿದರು ಈಗಿನ ಪರಿಸ್ಥಿತಿಯಲ್ಲಿ ನನಗಿದು ದೊಡ್ಡ ಶಕ್ತಿಯಾಗಿದೆ. ದೇವರು ನಿಮ್ಮನ್ನು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ
ಡಾ. ವಿಘ್ನೇಶ್ವರ ಭಟ್
ಈ ವೇಳೆ ಜಮಾತ್ ಸದಸ್ಯರುಗಳಾದ ಎಸ್ ಎಂ ಮಹಮ್ಮದ್ ಕುಂಬ್ರ, ಸಲಾಮುದ್ದೀನ್ ಕುಂಬ್ರ, ನಾಸಿರ್ ಕುಂಬ್ರ, ಮಹಮ್ಮದ್ ಬೊಳ್ಳಾಡಿ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಬಶೀರ್ ಕೌಡಿಚ್ಚಾರ್, ರಿಝ್ವಾನ್ ಕೌಡಿಚ್ಚಾರ್, ಮೊಯಿದಿನ್ ಅಲಂಗೂರು, ಅಝರ್ ಕುಂಬ್ರ, ಹಮೀದ್ ಶೇಕಮಲೆ, ಅಮೀನ್ ಕುಂಬ್ರ, ಯೂಸುಫ್ ಮುಡಾಲ, ಹಾಫಿಲ್ ಮುಹಮ್ಮದ್ ಹಾಶಿರ್ ಉಪಸ್ಥಿತರಿದ್ದರು.










