






ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಮೇ 25ರಂದು 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವ ಜರುಗಿತು.ವೇದಮೂರ್ತಿ ಶ್ರೀವತ್ಸ ಕೆದಿಲಾಯ ಅವರ ನೇತೃತ್ವದಲ್ಲಿ ಗಣಹೋಮ ಮತ್ತು ದುರ್ಗಾ ಪೂಜೆ ನೆರವೇರಿತು.


ಮುಖ್ಯೋಪಾಧ್ಯಾಯ ಪ್ರಸನ್ನ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ಬಳಿಕ ಆರತಿ ಬೆಳಗಿ, ತಿಲಕವಿಟ್ಟು ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.




ಮುಖ್ಯ ಅತಿಥಿ ಶಾಲಾ ಆಡಳಿತ ಮಂಡಳಿ ಸದಸ್ಯ ಹಾಗೂ ಪೋಷಕ ಡಾ. ಶಿವಾನಂದ ಮಾತನಾಡಿ, “ಶಾಲೆಯಲ್ಲಿ ಏನೇ ವ್ಯತ್ಯಾಸ ಕಂಡುಬಂದಲ್ಲಿ ತಿಳಿಸಿ, ಶಾಲಾ ಅಭಿವೃದ್ಧಿಗೆ ಸಲಹೆ ನೀಡಿ” ಎಂದು ಪೋಷಕರಲ್ಲಿ ವಿನಂತಿಸಿದರು. ವಿದ್ಯಾರ್ಥಿಗಳಿಗೆ 25ನೇ ವರ್ಷದ ಶುಭ ಹಾರೈಸಿ, “ಪ್ರತಿ ವರ್ಷ ಹೊಸತನ್ನು ಕಲಿಯಿರಿ, ಚಟುವಟಿಕೆಯಿಂದ ತೊಡಗಿಕೊಳ್ಳಿ” ಎಂದು ಕರೆ ನೀಡಿದರು.

ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ, “ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮೊಬೈಲ್ ಬಳಸದೆ ಸಮಯವನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯ ಕ್ಷೇತ್ರದಲ್ಲಿ ಮುಂದೆ ಬಂದು ಕೀರ್ತಿವಂತರಾಗಿ” ಎಂದು ಹಾರೈಸಿದರು.ಉಪಾಧ್ಯಕ್ಷ ಪ್ರಸನ್ನ ಭಟ್ ಮಾತನಾಡಿ, “ಸಂಸ್ಥೆಯು ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಮಹಾಪುರುಷರ ಬದುಕನ್ನು ಮಾದರಿಯಾಗಿಟ್ಟುಕೊಂಡು ಕಠಿಣ ಪ್ರಯತ್ನದಿಂದ ಸಾಧನೆ ಸಾಧ್ಯ” ಎಂದರು.

ಜತೆ ಕಾರ್ಯದರ್ಶಿ ಸುಬ್ರಾಯ ಬಿ.ಎಸ್. ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯಲಿ ಎಂದು ಶುಭ ಹಾರೈಸಿದರು.ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಆಶೀರ್ವದಿಸಲಾಯಿತು.ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, “ಪ್ರತಿ ದಿನವೂ ಮನುಷ್ಯನಿಗೆ ವಿಶೇಷ. ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಸಮಯವನ್ನು ಶ್ರದ್ಧೆಯಿಂದ ಕಳೆಯಿರಿ. ಕೀರ್ತಿವಂತರಾಗಿ ಬಾಳಿ” ಎಂದು ಶುಭ ಕೋರಿದರು.ವಿದ್ಯಾರ್ಥಿನಿಯರಾದ ಆರಾದ್ಯ ಹಾಗೂ ವಿಶಾಖಾ ಪ್ರಾರ್ಥಿಸಿದರು. ಶಿಕ್ಷಕಿ ವಾಣಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಹರೀಶ್ ಪುತ್ತೂರಾಯ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು. ಶಾಲಾ ಉಪಾಧ್ಯಕ್ಷ ಪ್ರಸನ್ನ ಭಟ್, ಶಿಕ್ಷಕ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.










