






ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಐದು ದಿನಗಳ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರ ಮೇ.28ರ ಗುರುವಾರ ಸಮಾರೋಪಗೊಂಡಿತು.



ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಕಬಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರಿಗೆ ಇಂತಹ ಕಾರ್ಯಾಗಾರಗಳು ಅತ್ಯಂತ ಅಗತ್ಯ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ತರಬೇತಿ ಅವಶ್ಯಕ. ವೃತ್ತಿ ಕೌಶಲ್ಯ ಉದ್ದೀಪನಗೊಳಿಸಲು ತರಬೇತಿಗಳು ಸಹಕಾರಿ. ತರಬೇತಿ ಪಡೆದ ಶಿಕ್ಷಕರು ಮುಂದೆ ತರಬೇತುದಾರರಾಗಿ ಹೊರಹೊಮ್ಮಬೇಕು” ಎಂದರು.ಡಾ. ಅಮೃತ ಪ್ರಸಾದ್ ಸಮಾರೋಪದ ಮಾತನಾಡಿ, “ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರು ತಮ್ಮ ವಿಷಯದಲ್ಲಿ ಹಿಡಿತ ಸಾಧಿಸಿದಾಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ಛಾಪು ಮೂಡಿಸಲು ಸಾಧ್ಯ” ಎಂದು ಕಿವಿಮಾತು ಹೇಳಿದರು.



ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ., ಸದಸ್ಯ ಚಂದ್ರಶೇಖರ್, ಕಾರ್ಯಾಗಾರದ ಪ್ರಮುಖ ಸಂಯೋಜಕರಾದ ಪರಿಮಳ ಮೂರ್ತಿ ಹಾಗೂ ಅತೀರ, ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು.ತರಬೇತಿ ಪಡೆದ ಶಿಕ್ಷಕರು ಕಾರ್ಯಾಗಾರದ ಕುರಿತು ಅನಿಸಿಕೆ ಹಂಚಿಕೊಂಡರು. ಆಶಾ ಕೆ. ಶೆಟ್ಟಿ ವರದಿ ಮಂಡಿಸಿದರು.ಕವಿತಾ ಕೆ. ಪ್ರಾರ್ಥಿಸಿದರು. ಸವಿತಾ ಕೆ. ಸ್ವಾಗತಿಸಿದರು. ರಮ್ಯಶ್ರೀ ಜಿ. ವಂದಿಸಿದರು. ದೀಪ್ತಿ ಆರ್. ಭಟ್ ಹಾಗೂ ಆಶಾಲತಾ ಪಿ.ಎಚ್. ಕಾರ್ಯಕ್ರಮ ನಿರೂಪಿಸಿದರು.









