






ಪುತ್ತೂರು: ಮುರದ ಶಿವಸದನ ನಿವಾಸಿ ಮರೂರು ದಿ. ವೆಂಕಟೇಶ್ ಹೆಬ್ಬಾರರ ಧರ್ಮಪತ್ನಿ ದಿ. ಶಾರದಾ ಹೆಬ್ಬಾರ್ ಇವರ ಸ್ಮರಣಾರ್ಥ ಶ್ರೀ ಕ್ಷೇತ್ರ ಉದಯಾದ್ರಿ ಪಡುಬಿದ್ರಿ, ಭೈರವಿ ನಾಟ್ಯಾಲಯ ಐವರ್ನಾಡು ಇಲ್ಲಿನ ಉದಯೋನ್ಮುಖ ಕಲಾವಿದೆಯರಿಂದ ‘ನೃತ್ಯಾರ್ಪಣಂ’ ನಾಟ್ಯ ಕಾರ್ಯಕ್ರಮವು ಹಿರಿಯ ನಾಗರಿಕರ ವಸತಿ ನಿಲಯ ಶಿವಸದನದಲ್ಲಿ ಭಕ್ತಿ ಭಾವಪೂರ್ಣವಾಗಿ ವೈಭವದಿಂದ ನೆರವೇರಿತು.


ನೃತ್ಯ ಕಾರ್ಯಕ್ರಮವು ನೆರೆದಿದ್ದ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಬಳಿಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಟ್ರಸ್ಟಿನ ಕೋಶಾಧಿಕಾರಿ ದಿನಕರ ರಾವ್ ಅವರು ದಿವಂಗತರ ಬಗ್ಗೆ ಸ್ಮರಿಸಿದರು.ದಿವಂಗತರ ಅಳಿಯಂದಿರಾದ ವಾಸುದೇವ ರಾವ್ ಮತ್ತು ಸಹೋದರರು, ಸಹೋದರಿಯರು, ಸೊಸೆಯಂದಿರು ಹಾಗೂ ಬಂಧುಗಳು ದೀಪ ಬೆಳಗಿಸಿ, ಶಿವ ಪಂಚಾಕ್ಷರಿ ಮಂತ್ರವನ್ನು ಸಾಮೂಹಿಕವಾಗಿ ಜಪಿಸಿ, ಹೂವಿನ ದಳಗಳಿಂದ ಅರ್ಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು.




ರೂ.25,000 ದೇಣಿಗೆ:
ಬಂಧುಗಳೆಲ್ಲರೂ ಸೇರಿ ದಿವಂಗತರ ನೆನಪಿನಲ್ಲಿ ಶಿವಸದನ ವಸತಿ ನಿಲಯಕ್ಕೆ ರೂ.25,000 ದೇಣಿಗೆ ನೀಡಿದರು. ದಿವಂಗತರ ಅಳಿಯಂದಿರು ಆಯೋಜಿಸಿದ ವಿಶೇಷ ಸಹಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಎಲ್ಲರನ್ನೂ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಕರುಣ್ ಬೆಳ್ಳೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಸಂತೋಷ್ ಉಜ್ಜೋಡಿ, ಚೇತನ್ ಶರ್ಮ, ಗಾಯತ್ರಿ ಪಿಲಿಂಜ, ಮೋಹನ್ ದಾಸ್ ಪಿಲಿಂಜಾ, ನರೇಂದ್ರ ರಾವ್, ಪೂರ್ಣಿಮಾ, ಗೀತಾ ರಾವ್, ಸಿಬ್ಬಂದಿ ವರ್ಗ, ಶಿಕ್ಷಕಿಯರು ಸಹಕರಿಸಿದರು.










