







ಉಪ್ಪಿನಂಗಡಿ: ಗೋಳಿತ್ತೊಟ್ಟು, ಬಜತ್ತೂರು, ಕೊಯಿಲ, ಉಪ್ಪಿನಂಗಡಿ ಗ್ರಾಮದ ಕೆಲವು ಪ್ರದೇಶಗಳಲ್ಲಿ ಜೂ.1ರಂದು ಅಪರಾಹ್ನ ಸಿಡಿಲಿನ ಆರ್ಭಟದೊಂದಿಗೆ ಭಾರೀ ಗಾಳಿ ಬೀಸಿದ್ದು, ಹಲವು ಮರಗಳು, 26 ವಿದ್ಯುತ್ ಕಂಬಗಳು, ಅಡಿಕೆ ಗಿಡಗಳು ಧರೆಗರುಳಿವೆ. ಅಲ್ಲದೇ, ಕೆಲವರ ಮನೆಗೂ ಹಾನಿಯಾಗಿದೆ.



ಸೋಮವಾರ ಅಪರಾಹ್ನದ ಹೊತ್ತಿನಲ್ಲಿ ಸಿಡಿಲು ಮಿಂಚುಗಳ ಆರ್ಭಟದೊಂದಿಗೆ ಮಳೆ ಸುರಿದಿದ್ದು, ಕೆಲವು ಗ್ರಾಮಗಳ ಕೆಲವು ಪ್ರದೇಶಗಳಿಗಷ್ಟೇ ಸೀಮಿತವಾಗಿ ಭಾರೀ ಗಾಳಿ ಕೂಡಾ ಬೀಸಿದೆ. ಇದರಿಂದ ಹಲವು ಮರಗಳು ಧರೆಗುರುಳಿವೆ. ಹಲವರ ತೋಟದಲ್ಲಿ ಅಡಿಕೆ ಮರಗಳು ಧರೆಗುರುಳಿದ್ದು, ಭಾರೀ ಕೃಷಿ ಹಾನಿ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಕೊಡಂಗೆ ನಿವಾಸಿ ಜಗದೀಶ್ ಅವರ ಮನೆಯ ಶೀಟಿನ ಮೇಲ್ಚಾವಣಿಯೂ ಗಾಳಿಗೆ ಹಾರಿ ಹೋದ ಘಟನೆಯೂ ನಡೆದಿದೆ. ಮರಗಳು ಧರೆಗುರುಳಿದ್ದರಿಂದ ಮೆಸ್ಕಾಂನ ಉಪ್ಪಿನಂಗಡಿ ವಿಭಾಗ ವ್ಯಾಪ್ತಿಯ ಗೋಳಿತ್ತೊಟ್ಟು, ಬಜತ್ತೂರು, ಕೊಯಿಲ, ಬೊಳ್ಳಾವು, ಪೆರಿಯಡ್ಕ, ಕುಂಟಿನಿ, ನೆಡ್ಚಿಲು ಪರಿಸರದಲ್ಲಿ ಒಟ್ಟು 26 ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.













