







ಪುತ್ತೂರು: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಮಂಗಲದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಜೂನ್ 1ರಂದು ಅತ್ಯಂತ ಸಂಭ್ರಮ, ಸಡಗರ ಮತ್ತು ವೈಭವದಿಂದ ನಡೆಯಿತು.


ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಆಕರ್ಷಕ ಬ್ಯಾಂಡ್ ಘೋಷ್ನೊಂದಿಗೆ ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಪುಟಾಣಿಗಳಿಗೆ ಆರತಿ ಎತ್ತಿ, ಹೂವಿನ ಸಿಂಚನ ಮಾಡಿ, ಉಯ್ಯಾಲೆ ತೂಗಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಹೊಸ ಶಾಲಾ ಬ್ಯಾಗ್ಗಳು, ಪಾಠ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಪಿಎಂಶ್ರೀ ಯೋಜನೆಯ ವಿಶೇಷತೆಗಳು ಹಾಗೂ ಶಾಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಮುಖ್ಯಗುರು ತಾರಾನಾಥ ಸವಣೂರು ಮಾಹಿತಿ ನೀಡಿ ಎಲ್ಲರನ್ನು ಸ್ವಾಗತಿಸಿದರು.



ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಚಂದ್ರ ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ, ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಪೋಷಕರು ಮತ್ತು ಶಾಲೆಯ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿನುತ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ವಂದನಾರ್ಪಣೆ ಸಲ್ಲಿಸಿದರು. ಸೌಮ್ಯ ಹಾಗೂ ಹೇಮಾವತಿ ಪುಸ್ತಕ ವಿತರಣೆಯಲ್ಲಿ ಸಹಕರಿಸಿದರು. ಕುಬ್ರಾ, ಸವಿತಾ, ಸಂಚನಾ ಮತ್ತು ಚಂದ್ರಾವತಿ ವಿವಿಧ ಚಟುವಟಿಕೆಗಳ ಯಶಸ್ವಿ ನಿರ್ವಹಣೆಯಲ್ಲಿ ಕೈಜೋಡಿಸಿದರು. ಬಳಿಕ ನಡೆದ ಪೋಷಕರ ಮಹಾಸಭೆಯಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಕಲಿಕಾ ಅಭಿವೃದ್ಧಿ ಹಾಗೂ ಪೋಷಕರ ಜವಾಬ್ದಾರಿಗಳ ಕುರಿತು ಚರ್ಚೆ ನಡೆಯಿತು. ಎಸ್.ಡಿ.ಎಂ.ಸಿ ಸದಸ್ಯರು, ಪೋಷಕವೃಂದ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕೊನೆಯಲ್ಲಿ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳ ನಗುಮುಖಗಳು ಹಾಗೂ ಪೋಷಕರ ಸಂತೃಪ್ತಿಯ ನಡುವೆ ಶಾಲಾ ಪ್ರಾರಂಭೋತ್ಸವ ಅರ್ಥಪೂರ್ಣವಾಗಿ ನೆರವೇರಿತು.










