ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ ಕಿವಿಯ ಶ್ರವಣ ತಪಾಸಣಾ ಶಿಬಿರ

0

ಕಡಬ ಪತ್ರಕರ್ತರ ಸಮಾಜ ಸೇವೆ ಮಾದಿರಿಯಾಗಿದೆ: ತಮನ್ನಾ ಜಬಿನ್

ಕಡಬ: ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ವಿತರಣಾ ಕಾರ್ಯಕ್ರಮ ಜೂ.8ರಂದು ಕಡಬ ಪ್ರೆಸ್ ಕ್ಲಬ್ ಕಚೇರಿಯಲ್ಲಿ ನಡೆಯಿತು.

ಶಿಬಿರ ಉದ್ಘಾಟಿಸಿದ ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬಿನ್ ಮಾತನಾಡಿ, ತಮ್ಮ ದಿನನಿತ್ಯದ ಕರ್ತವ್ಯದೊಂದಿಗೆ ಪತ್ರಕರ್ತರು ಜನರ ಅನುಕೂಲಕ್ಕಾಗಿ ಶಿಬಿರಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಿವಿಯ ಶ್ರವಣ ತಪಾಸಣೆ ಹಾಗೂ ಯಂತ್ರಕ್ಕೆ ಧನ ಸಹಾಯ ನೀಡುವ ಮೂಲಕ ಕಡಬ ಪತ್ರಕರ್ತರ ಸಂಘ ಮಾದರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಬೇರೆ ಎಲ್ಲಾ ರೀತಿಯ ಶಿಬಿರಗಳು ನಡೆಯುತ್ತವೆ. ಆದರೆ ಕಿವಿಯ ಶ್ರವಣ ತಪಾಸಣೆಯಂತ ಶಿಬಿರಗಳು ಬಹಳ ಅಪರೂಪವಾಗಿದೆ. ಇಂತಹ ಶಿಬಿರಗಳಿಂದ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಅನುಕೂಲವಾಗುತ್ತದೆ, ಕಡಬದಲ್ಲಿ ಈ ಶಿಬಿರ ಪ್ರತೀ ತಿಂಗಳು ನಡೆಸುವಂತಾಗಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಮನ್ನಾ ಜಬಿನ್ ಜಬಿನ್ ಹೇಳಿದರು.

ಟೀಮ್ ಈಶ್ವರ ಮಲ್ಪೆ ಟ್ರಸ್ಟ್ ಸಂಯೋಜಕ ಲವ ಬಂಗೇರ ಮಾತನಾಡಿ, ಕಿವಿಯ ಶ್ರವಣ ಉಚಿತ ತಪಾಸಣೆ ಹಾಗೂ ಯಂತ್ರಗಳ ವಿತರಣಾ ಶಿಬಿರವನ್ನು ವಿವಿಧ ಸಂಘಟನೆಗಳ ಜೊತೆಗೂಡಿ ನಡೆಸುತ್ತಾ ಬಂದಿದ್ದೇವೆ. ಇದು 121ನೇ ಶಿಬಿರವಾಗಿದ್ದು ಸಾವಿರಾರು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು. ಟೀಮ್ ಈಶ್ವರ ಮಲ್ಪೆಯ ತಜ್ಞ ವೈದ್ಯ ಡಾ. ಪವನ್ ಮಾತನಾಡಿ, ಸಾಮಾನ್ಯವಾಗಿ ನಾವು ಕಿವಿಯ ಸಮಸ್ಯೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸಾಮಾನ್ಯವಾಗಿ ನರಗಳ ದೋಷದಿಂದ ಕಿವಿಯ ಸಮಸ್ಯೆ ಉಂಟಾಗುತ್ತದೆ. ಕಿವಿಯ ಸಮಸ್ಯೆ ಉಲ್ಭಣವಾಗುವ ಮುಂಚೆ ತಪಾಸನೆ ನಡೆಸಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ ಒಳಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ ಮಾತನಾಡಿ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಜನರ ಬದುಕಿಗೆ ಪೂರಕವಾದ ಸೇವಾ ಕಾರ್ಯ ಮಾಡಿದರೆ ತಮ್ಮ ವೃತ್ತಿಗೆ ಮತ್ತಷ್ಟು ಘನತೆ ಗೌರವ ಬರುತ್ತದೆ. ಕೇವಲ ನಕಾರಾತ್ಮ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಕಾರಾತ್ಮ ವಿಚಾರಗಳಿಗೂ ಆದ್ಯತೆ ನೀಡಿ ಸಮಾಜ ಸೇವಾ ಕಾರ್ಯಗಳನ್ನು ಮಾಡಬೇಕು, ಕಡಬ ತಾಲೂಕು ಪತ್ರಕರ್ತರ ಸಂಘ ಕೇವಲ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸೀಮಿತವಾಗದೆ, ಹಲವು ಸಮಾಜಮುಖಿ ಕಾರ್ಯಗಳನ್ನು ಮಡುತ್ತಾ ಬರುತ್ತಿದೆ ಎಂದರು.


ಸಂಘದ ಉಪಾಧ್ಯಕ್ಷ ಲೋಕೇಶ್ ಬಿ. ಎನ್. ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಸುಧಾಕರ ಆಚಾರ್ಯ ಕಾಣಿಯೂರು, ಕೋಶಾಧಿಕಾರಿ ಪ್ರವೀಣ್‌ರಾಜ್ ಕೆ.ಎಸ್., ಸದಸ್ಯರಾದ ದಿವಾಕರ ಎಂ., ಪ್ರಶಾಂತ್ ಸಿ.ಎಚ್., ತಸ್ಲಿಮ್ ಮರ್ದಾಳ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿಕಟಪೂರ್ವಾಧ್ಯಕ್ಷ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here