






ಸರಕಾರದಿಂದ ದೊರೆಯುವ ಬಹುತೇಕ ಸೌಲಭ್ಯಗಳು ಮನೆ ಯಜಮಾನಿಗೆ; ಶಾಸಕ ಅಶೋಕ್ ರೈ


ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ಇದರಲ್ಲಿ ಬಹುಪಾಲು ಸೌಲಭ್ಯಗಳು ಮನೆಯ ಯಜಮಾನಿ ಪರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.



ಅವರು ದೇವರಾಜರಸು ಹಿಂದುಳಿದ ನಿಗಮದ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿ ಮಾತನಾಡಿದರು. ಕಾರ್ಯಕ್ರಮವು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಮಹಿಳೆ ಪ್ರತೀ ಕುಟುಂಬದ ಯಜಮಾನಿಯಾಗಿರುತ್ತಾಳೆ, ಮಹಿಳೆಯ ಕೈಗೆ ಸರಕಾರದ ಸೌಲಭ್ಯ ದೊರೆತಲ್ಲಿ ಅದು ಕುಟುಂಬದ ಅಭಿವೃದ್ದಿಗೆ ಕಾರಣವಾಗುತ್ತದೆ ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದ ಬಹುತೇಕ ಯೋಜನೆಗಳು ಮಹಿಳಾ ಪರವಾಗಿದೆ. ಇಷ್ಟು ವರ್ಷದಲ್ಲಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕೇವಲ ಹೊಲಿಗೆ ಯಂತ್ರ ಮಾತ್ರವಲ್ಲ ಮಹಿಳಾ ಸ್ವಉದ್ಯೋಗಕ್ಕೆ ಮೂರು ಲಕ್ಷದವರೆಗೆ ಲೋನ್ ದೊರೆಯುತ್ತಿದ್ದು ಇದರಲ್ಲಿ ಎರಡು ಲಕ್ಷ ಸಬ್ಸಿಡಿ ಮೊತ್ತವನ್ನು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮಿ, ಶಕ್ತಿ ಯೋಜನೆಯನ್ನು ಸರಕಾರ ಮಹಿಳೆಯರಿಗೆ ನೀಡಿದೆ ಇದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ಮೂಲೆಗೆ ಎಸೆಯಬೇಡಿ
ಉಚಿತವಾಗಿ ಹೊಲಿಗೆ ಯಂತ್ರಿ ಸಿಕ್ಕಿದೆ ಎಂಬ ತತ್ಸಾರ ಬೇಡ , ಅದನ್ನು ಬಳಸಿಕೊಳ್ಳಬೇಕು. ಫ್ಯಾಷನ್ ಯುಗದಲ್ಲಿ ಮಹಿಳೆಯರ ವಿವಿಧ ಬಟ್ಟೆಗಳ ಸ್ಟಿಚ್ಚಿಂಗ್ ಕಲಿತಲ್ಲಿ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಮಹಿಳೆಯರು ಮನೆಯಲ್ಲೇ ಇದ್ದು ಟೈಲರಿಂಗ್ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಶಾಸಕರ ಮೂಲಕ ಸೌಲಭ್ಯ ಸಿಗುತ್ತಿದೆ
ಅಶೋಕ್ ರೈ ಶಾಸಕರಾದ ಬಳಿಕ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಸಿಗುವಂತಾಗಿದೆ. ಈ ಹಿಂದೆ ಇಂಥಹ ಸೌಲಭ್ಯ ಇರಲಿಲ್ಲ. ರಾಜ್ಯ ಸರಕಾರ ಮಹಿಳಾ ಸ್ವಾವಲಂಬನೆಗಾಗಿ ಅನೆಕ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.
25 ಯಂತ್ರ ವಿತರಣೆ
ಕಾರ್ಯಕ್ರಮದಲ್ಲಿ ಸುಮಾರು 25 ಮಂದಿ ವಿವಿಧ ಗ್ರಾಮಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು.ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುಡಾ ಸದಸ್ಯ ನಿಹಾಲ್ಪಿ ಶೆಟ್ಟಿ,ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.ಇಲಾಖಾಧಿಕಾರಿ ಜಯಶ್ರೀ ಸ್ವಾಗತಿಸಿದರು. ಶಾಸಕರ ಕಚೇರಿ ಸಹಾಯಕ ಲಿಂಗಪ್ಪ ವಂದಿಸಿದರು.










