







ದಿವಾಕರ ದಾಸ್ ರವರ ಸಾಮಾಜಿಕ ಕಳಕಳಿಯ ಕೆಲಸ ಇತರರಿಗೆ ಮಾದರಿ: ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು


ವಿಟ್ಲ: ಸಿರಿ ಬಂದ ಕಾಲಕ್ಕೆ ಕರೆದು ಧಾನವ ಮಾಡು ಎನ್ನುವ ಕನ್ನಡದ ಗಾದೆಯನ್ನು ದಿವಾಕರ ದಾಸ್ ರವರು ಸಾಕಾರಗೊಳಿಸಿದ್ದಾರೆ. ತನ್ನ ಹುಟ್ಟೂರಿನ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕವನ್ನು ನೀಡಿದ್ದಾರೆ. ಇದು ಮಕ್ಕಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ನಮ್ಮ ಅಳಕೆಮಜಲು ಶಾಲೆ ಮಾತ್ರವಲ್ಲ ಜಿಲ್ಲೆಯ ಹಲವಾರು ಶಾಲೆಗಳಿಗೆ ಅವರು ಉಚಿತ ಪುಸ್ತಕಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇವರ ಇಂತಹ ಸಾಮಾಜಿಕ ಕಳಕಳಿಯ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಹೇಳಿದರು.



ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆರವರು ಆಡಳಿತ ನಿರ್ದೇಶಕರಾಗಿರುವ ಮೈಸೂರಿನ ಎಸ್. ಎಲ್. ವಿ. ಬುಕ್ಸ್ ಇಂಡಿಯಾ ಪ್ರೈ. ಲಿ. ವತಿಯಿಂದ ಅಳಕೆಮಜಲು ಕಿ. ಪ್ರಾ.ಶಾಲಾ ಮಕ್ಕಳಿಗೆ ಕೊಡಲ್ಪಟ್ಟ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷರಾದ ತಿರುಮಲೇಶ್ವರ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷರಾದ ಪದ್ಮನಾಭ ಸಪಲ್ಯ, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರಮುಖರಾದ ರಮೇಶ ಎಂ ಬಾಯಾರ್ , ಎಸ್. ಡಿ. ಎಂ.ಸಿ. ಉಪಾಧ್ಯಕ್ಷರಾದ ರೂಪ ಕುಲಾಲ್ ಪುಂಡಿಕಾಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಮುಖ್ಯೋಪಾಧ್ಯಾಯರಾದ ರಾಜೀವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಶೋಭಾ ಸ್ವಾಗತಿಸಿ, ಸಹ ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಪಿ. ವಂದಿಸಿದರು. ಶಿಕ್ಷಕಿಯರಾದ ಸವಿತಾ ಬಲ್ಕೀಸ್, ದಿವ್ಯ ಸಹಕರಿಸಿದರು.










