






ಸಂಧ್ಯಾರಶ್ಮಿ ಜನರ ಬಾಳಲ್ಲಿ ಬೆಳಕು ತರಲಿ- ಡಾ|ರವೀಶ್ ಪಡುಮಲೆ
ಬೆಳೆಯುತ್ತಿರುವ ಈಶ್ವರಮಂಗಲಕ್ಕೆ ಬ್ಯಾಂಕ್ಗಳ ಅಗತ್ಯವಿದೆ- ಫೌಝಿಯಾ ಇಬ್ರಾಹಿಂ
ಯಾವುದೇ ಉದ್ದಿಮೆ, ಸಂಸ್ಥೆಗೆ ಇಲ್ಲಿ ಸೋಲಿಲ್ಲ- ರಾಮ ಮೇನಾಲ
ಐಶ್ವರ್ಯ ಇಲ್ಲದವರನ್ನು ಮೇಲೇತ್ತುವುದು ಉದ್ದೇಶ- ಡಾ. ರಂಗಯ್ಯ


ಪುತ್ತೂರು: ಸುಳ್ಯದ ಕುರುಂಜಿಭಾಗ್ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಸಂಧ್ಯಾರಶ್ಮಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಪ್ರಥಮ ಶಾಖಾ ಕಛೇರಿ ಈಶ್ವರಮಂಗಲದ ಎಂ.ಜಿ. ರೈ ಸಂಕೀರ್ಣದಲ್ಲಿ ಜೂ.17ರಂದು ಉಧ್ಘಾಟನೆಗೊಂಡಿತು.



ಮುಖ್ಯ ಅತಿಥಿ, ಉಜಿರೆ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರಾದ ಡಾ|ರವೀಶ್ ಪಡುಮಲೆ ನೂತನ ಶಾಖಾ ಕಛೇರಿಯ ಖಜಾನೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಎಂ.ಜಿ.ರೈ ಸಂಕೀರ್ಣದ ಮಾಲಕರು ಹಾಗೂ ಪ್ರಗತಿಪರ ಕೃಷಿಕ ಎಂ.ಗಣೇಶ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

sಸಂಧ್ಯಾರಶ್ಮಿ ಜನರ ಬಾಳಲ್ಲಿ ಬೆಳಕು ತರಲಿ:
ಖಜಾನೆ ಉದ್ಘಾಟಿಸಿದ ಡಾ|ರವೀಶ್ ಪಡುಮಲೆಯವರು ಮಾತನಾಡಿ ಶಾಖಾ ಕಛೇರಿ ಆರಂಭವಾಗುತ್ತಿರುವುದು ಈಶ್ವರಮಂಗಲಕ್ಕೆ ಗರಿಮೆಯಾಗಿದೆ. ಸಂಧ್ಯಾರಶ್ಮಿ ಸಂಸ್ಥೆಯನ್ನು ಶ್ರೀಪಂಚಲಿಂಗೇಶ್ವರ ದೇವರ ದೇವರ ಅಂಗಳಕ್ಕೆ ತಂದಿಟ್ಟಿದ್ದಾರೆ. ಕಛೇರಿಯನ್ನು ಉದ್ಘಾಟನೆ ಮಾಡಲು ಕಿರಿಯವನಾದ ನನಗೆ ಅವಕಾಶ ಕೊಟ್ಟಿದ್ದಾರೆ ಎಂದರು. ಸುಳ್ಯದ ಮಣ್ಣಿನ ಸುಬ್ರಹ್ಮಣ್ಯದ ಅನ್ನವನ್ನು ಉಂಡು ನಾನು ಬೆಳೆದಿದ್ದೇನೆ. ಈಶ್ವರಮಂಗಲ ಎಂಬುದು ಹಿಂದಿನ ಕಾಲದಲ್ಲಿ ಆದಿ ಪರ್ಮಳೆಗೆ ಒಳಪಟ್ಟದ್ದು. ಪರ್ಮಳೆಯ ದೈವಗಳು ಸುಳ್ಯ ಕ್ಷೇತ್ರದ ಸುಬ್ರಹ್ಮಣ್ಯದಿಂದ ಧ್ವಜಸ್ತಂಭವನ್ನು ತಂದವರು. ಅದೇ ರೀತಿ ಸುಳ್ಯದ ಮಣ್ಣಿನಿಂದ ಸಂಸ್ಥೆಯೂ ಪರ್ಮಳೆ ಮಣ್ಣಿಗೆ ಬಂದಿದೆ ಎಂದರು. ಸಂಧ್ಯಾರಶ್ಮಿ ಎಂದರೆ ಕತ್ತಲನ್ನು ನೀಡಿ ಬೆಳಕನ್ನು ಕೊಡುವುದು. ಸೂರ್ಯನ ಕಿರಣಗಳು ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತದೋ ಹಾಗೆಯೇ ಈ ಸಂಸ್ಥೆ ಇಲ್ಲಿನ ಭಾಗದ ಜನರ ಬಾಳಲ್ಲಿ ಆರ್ಥಿಕವಾಗಿ ಬೆಳಕನ್ನು ತರಲಿ ಎಂದ ಅವರು ಈ ಸಂಸ್ಥೆ ನಮ್ಮ ಮುಂದಿನ ಪೀಳಿಗೆಗೂ ಮುಂದುವರಿಯಲಿ ಎಂದರು.

ಬೆಳೆಯುತ್ತಿರುವ ಈಶ್ವರಮಂಗಲಕ್ಕೆ ಬ್ಯಾಂಕ್ಗಳ ಅಗತ್ಯವಿದೆ:
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮಾತನಾಡಿ ನನಗೆ ಇಂದು ಹೆಮ್ಮೆಯಾಗುತ್ತಿದೆ. ಈಶ್ವರಮಂಗಲದಲ್ಲಿ ಆದೆಷ್ಟು ಬ್ಯಾಂಕ್ಗಳು ವ್ಯವಹರಿಸುತ್ತಿದ್ದರೂ ಸಂಧ್ಯಾರಶ್ಮಿ ಸೊಸೈಟಿಯ ಅವಶ್ಯಕತೆಯೂ ಇದೆ. ಗ್ರಾಮೀಣ ಭಾಗವಾದ ಈಶ್ವರಮಂಗಲ ಪೇಟೆ ಬಹಳ ಬೇಗನೆ ಅಭಿವೃದ್ಧಿ ಹೊಂದುತ್ತಿದೆ. ಆದುದರಿಂದ ಇಂತಹ ಬ್ಯಾಂಕುಗಳು ಅಗತ್ಯ ಬೇಕಾಗಿದೆ. ನಿವೃತ್ತ ನೌಕರರು ಸೇರಿಕೊಂಡು ಮಾಡಿದ ಸೊಸೈಟಿ ಅಭಿವೃದ್ಧಿ ಹೊಂದಲಿ. ಎಲ್ಲಾ ಕಡೆ ಶಾಖೆಗಳ ವಿಸ್ತರಣೆಯಾಗಲಿ ಎಂದು ಹೇಳಿ ಶುಭಹಾರೈಸಿದರು.
ಯಾವುದೇ ಉದ್ದಿಮೆ, ಸಂಸ್ಥೆಗೆ ಇಲ್ಲಿ ಸೋಲಿಲ್ಲ:
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಮ ಮೇನಾಲ ಮಾತನಾಡಿ ಈಶ್ವರಮಂಗಲದ ಹೆಗ್ಗಳಿಕೆಗೆ ಮತ್ತೊಂದು ಕೀರ್ತಿ ಬಂದಿದೆ. ಪುಟ್ಟ ಪಟ್ಟಣ ಅಲ್ಪಾವಧಿಯಲ್ಲಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಇಲ್ಲಿ ಯಾವುದೇ ಸಂಸ್ಥೆ, ಉದ್ದಿಮೆಯನ್ನು ಪ್ರಾರಂಭಿಸಿದರೂ ಯಾರೂ ಸೋಲಲಿಲ್ಲ. ಈಶ್ವರಮಂಗಲ ಪೇಟೆ ಒಂದು ಕೇಂದ್ರಭಾಗವಾಗಿದೆ. ನೂರಾರು ಮಂದಿ ಈಶ್ವರಮಂಗಲ ಪೇಟೆಯನ್ನೇ ವ್ಯವಹಾರಕ್ಕೆ ಆಶ್ರಯಿಸುತ್ತಾರೆ. ಇಲ್ಲಿನ ದೇವರಾದ ಶ್ರೀಪಂಚಲಿಂಗೇಶ್ವರ ದೇವರ ಆಶೀರ್ವಾದದಿಂದ ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.

ಐಶ್ವರ್ಯ ಇಲ್ಲದವರನ್ನು ಮೇಲೇತ್ತುವುದು ಉದ್ದೇಶ:
ಅಧ್ಯಕ್ಷತೆ ವಹಿಸಿದ್ದ ಸಂಧ್ಯಾರಶ್ಮಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಡಾ. ರಂಗಯ್ಯ ಮಾತನಾಡಿ ಐಶ್ವರ್ಯ ಇಲ್ಲದವರನ್ನು ಮೇಲೇತ್ತುವುದು ನಮ್ಮ ಉದ್ದೇಶ. ಇವತ್ತು ಸಾಲ ತೆಗೆದುಕೊಂಡವರು ನಾಳೆ ನಮ್ಮ ಡೆಪಾಸಿಟರ್ ಆಗಬೇಕು ಎಂಬ ಭರವಸೆ ಇದೆ. ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಬಿಟ್ಟು ಉಳಿದ ಠೇವಣಿಗಳಿಗೆ ಶೇ.10ರಷ್ಟು ಬಡ್ಡಿ ನೀಡುತ್ತೇವೆ. ಇದು ಜೂ.30ರವರೆಗೆ ಗ್ರಾಹಕರಿಗೆ ಲಭ್ಯವಿದೆ. ಶಾಖಾ ಸಲಹಾ ಸಮಿತಿಯವರ ಶಿಫಾರಸ್ಸಿನ ಮೇರೆಗೆ ಗ್ರಾಹಕರಿಗೆ ಸಾಲ ನೀಡಲಾಗುವುದು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಸಂಘದ ನಿರ್ದೇಶಕರು ಹಾಗೂ ಸಲಹಾಸಮಿತಿ ಉಪಾಧ್ಯಕ್ಷ ನಾಗಪ್ಪ ಬೊಮ್ಮಟ್ಟಿ ಸ್ವಾಗತಿಸಿ ಮಾತನಾಡಿ 2019ರಲ್ಲಿ ಸುಳ್ಯದಲ್ಲಿ ಸ್ಥಾಪನೆಗೊಂಡ ಸಂಘ ಮೂರು ತಾಲೂಕುಗಳನ್ನು ಕೇಂದ್ರೀಕರಿಸಿದೆ. ಸ್ಥಾಪನೆಯಾಗಿ 7 ವರ್ಷ ಕಳೆದು 8ನೇ ವರ್ಷಕ್ಕೆ ಪಾದರ್ಪಣೆಗೊಂಡಿದೆ ಶೇ.10 ಡಿವಿಡೆಂಡ್ ಕೊಡುತ್ತಿದೆ. ವೃತ್ತಿಯಿಂದ ನಿವೃತ್ತಿಯಾದವರು ಸೇರಿಕೊಂಡು ಸಂಧ್ಯಾರಶ್ಮಿ ಆರಂಭ ಮಾಡಿದ್ದಾರೆ. ಇದೀಗ ಆಯಕಟ್ಟಿನಲ್ಲಿರುವ ಕೇಂದ್ರವಾಗಿರುವ ಈಶ್ವರಮಂಗಳದಲ್ಲಿ ಶಾಖೆ ತೆರೆಯುವ ಆಲೋಚನೆ ಬಂದು ಇಂದು ಉದ್ಘಾಟನೆಗೊಂಡಿದೆ ಎಂದರು.
ಸಂಘದ ಉಪಾಧ್ಯಕ್ಷ ವಿಶ್ವನಾಥ್ ನಾಯರ್ ಪ್ರಾಸ್ತಾವಿಕವಾಗಿ ಮಾತನಾಡಿ ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ 1980ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ ಎಲ್ಲಾ ವರ್ಗದ ನೌಕರರು ಒಳಗೊಂಡಿದ್ದಾರೆ. ಈ ಸಂಘದಿಂದ ಒಂದು ಸಹಕಾರ ಸಂಘ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ 26 ಪ್ರವರ್ತಾಕರನ್ನು ಆಯ್ಕೆ ಮಾಡಲಾಯಿತು. 2018ರಲ್ಲಿ ಸೊಸೈಟಿ ನೋಂದಣಿಯಾಗಿ 2019ರ ಜೂನ್ 17ರಂದು ಸಂಧ್ಯಾರಶ್ಮಿ ಎಂಬ ಸೊಸೈಟಿ ಪ್ರಾರಂಭವಾಯಿತು.
ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಸೊಸೈಟಿ ನಿವೃತ್ತ ನೌಕರರ ಸಮರ್ಥ ಆಡಳಿತ ಮಂಡಳಿ ಮತ್ತು ಮೂವರು ಸಿಬಂದಿ ಹಾಗೂ ಪ್ರಬುದ್ಧ ಗ್ರಾಹಕರ ಸಾಹಕಾರದಿಂದ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಪ್ರಸ್ತುತ ನಿವೃತ್ತ ನೌಕರರನ್ನು ಒಳಗೊಂಡ 18 ನಿರ್ದೇಶಕರಿಂದ ಸೊಸೈಟಿ ಮುನ್ನಡೆಯುತ್ತಿದೆ. ಸುಳ್ಯದಲ್ಲಿ ಪ್ರಧಾನ ಕಛೇರಿ ಹೊಂದಿರುವ ಸೊಸೈಟಿ ಸುಸಜ್ಜಿತ ಸ್ವಂತ ಕಟ್ಟಡವನ್ನೂ ಹೊಂದಿದ್ದು ಕಛೇರಿ ಸಂಪೂರ್ಣ ಗಣಕೀಕೃತಗೊಂಡಿದೆ. ಇಲಾಖೆಯಿಂದ ಅಡಿಟ್ ಆಗುತ್ತಿದ್ದು ಉತ್ತಮ ಗ್ರೇಡ್ ಹೊಂದಿದೆ ಎಂದ ಅವರು ಕಳೆದ ಬಾರಿ ರೂ. 8 ಲಕ್ಷ ಲಾಭದಲ್ಲಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಎಂ.ಜಿ. ರೈ ಸಂಕೀರ್ಣದ ಮಾಲಕ ಗಣೇಶ್ ರೈ ಮಾತನಾಡಿ ಶುಭಹಾರೈಸಿದರು. ಗ್ರಾಹಕರಾದ ಮುಂಡ್ಯ ಶ್ರೀಕೃಷ್ಣ ಭಟ್, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಭಟ್, ನಿರ್ದೇಶಕರಾದ ಚೆನ್ನಕೇಶವ ಎಂ. ಜಾಲ್ಸೂರು ಹಾಗೂ ಬಾಬು ಗೌಡರವರು ಅನಿಸಿಕೆ ತಿಳಿಸಿ ಶುಭ ಹಾರೈಸಿದರು.
ಠೇವಣಾತಿ ಪತ್ರ ವಿತರಣೆ:
ನೂತನ ಶಾಖೆಯಲ್ಲಿ ಸದಸ್ಯತ್ವ, ಪಾಲು ಬಂಡವಾಳ, ನೀರಖು ಠೇವಣಿ, ಉಳಿತಾಯ ಖಾತೆ ಮಾಡಿದ ಗ್ರಾಹಕರಿಗೆ ಠೇವಣಾತಿ ಪತ್ರ ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಂತಿ ಎಂ. ಆರ್. ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉತ್ತಮ ಕಾರ್ಯನಿರ್ವಹಣೆಗೆ ನೂತನ ಶಾಖಾ ಸಲಹಾ ಸಮಿತಿ ರಚಿಸಿದ್ದು ಇದರ ಸದಸ್ಯರನ್ನು ಹೂ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ತುಕಾರಾಮ ಏನೆಕಲ್ಲು, ಬಾಲಸುಬ್ರಹ್ಮಣ್ಯ ಕೆ.ಎಸ್., ಕೆ.ಆರ್. ಚಂದ್ರಹಾಸ, ಹಿಮಕರ ಎಮ್., ಕೇಶವ ಸಿ.ಎ, ಶ್ರೀಧರ ನಾಯ್ಕ ಪಿ., ರಾಮಚಂದ್ರ ಪಿ., ಸುಧಾಮ ಆಲೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರು ಹಾಗೂ ಸಲಹಾ ಸಮಿತಿ ಉಪಾಧ್ಯಕ್ಷ ಶಂಕರ ಪಾಟಾಲಿ ಅತಿಥಿಗಳ ಪರಿಚಯ ಮಾಡಿದರು. ನಿರ್ದೇಶಕಿ ಡಾ. ಸಾಯಿಗೀತಾ ಆಶಯ ಗೀತೆ ಹಾಡಿದರು. ಸಲಹಾ ಸಮಿತಿ ಸದಸ್ಯೆ ಪ್ರೇಮಲತಾ ಪ್ರಾರ್ಥಿಸಿ ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನ್ಯಶ್ರೀ ವಂದಿಸಿದರು. ನಿರ್ದೇಶಕರು ಹಾಗೂ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ಲ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಅನಿಲ್ ಕುಮಾರ್ ಎನ್. ವಿ. ಹಾಗೂ ರಶ್ಮಿತಾ ಸಹಕರಿಸಿದರು. ಸಲಹಾ ಸಮಿತಿಯ ಸದಸ್ಯರಾದ ವಸಂತಿಸುಬ್ಬ ಪಾಟಾಳಿ, ಪ್ರೇಮಲತಾ ಎ.ಎಚ್., ದೇವದಾಸ್ ಕೂಜುಗೋಡು ಸಹಿತ ಹಲವು ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು.
ಹಿರಿಯ ನಾಗರಿಕರಿಗೆ ಶೇ.10 ಬಡ್ಡಿ
ಉದ್ಘಾಟನೆ ಪ್ರಯುಕ್ತ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಬಿಟ್ಟು ಉಳಿದ ಠೇವಣಿಗಳಿಗೆ 0.5ರಷ್ಟು ಬಡ್ಡಿ ಹೆಚ್ಚು ನೀಡಲಿದ್ದು ಶೇ.10ರಷ್ಟು ಬಡ್ಡಿ ನೀಡುತ್ತೇವೆ. ಈ ಆಫರ್ ಜೂ.30ರವರೆಗೆ ಲಭ್ಯವಿದೆ.
ಡಾ.ರಂಗಯ್ಯ, ಅಧ್ಯಕ್ಷರು, ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
ಮುಖ್ಯಅತಿಥಿಗಳಿಗೆ ಸನ್ಮಾನ
ಮುಖ್ಯ ಅತಿಥಿಗಳಾಗಿದ್ದ ಉಜಿರೆ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರಾದ ಡಾ|ರವೀಶ್ ಪಡುಮಲೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಮಾಜಿ ಉಪಾಧ್ಯಕ್ಷ ರಾಮ ಮೇನಾಲ ಹಾಗೂ ಎಂ.ಜಿ. ರೈ ಸಂಕೀರ್ಣದ ಮಾಲಕ ಗಣೇಶ್ ರೈರವರನ್ನು ಸೊಸೈಟಿ ವತಿಯಿಂದ ಶಾಲು, ಹಾರ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.










