






ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಯಕ್ಷಧ್ರುವ ಯಕ್ಷ ಶಿಕ್ಷಣ 2026-27ನೇ ಶೈಕ್ಷಣಿಕ ವರ್ಷದ ಉಚಿತ ಯಕ್ಷಗಾನ ತರಬೇತಿ ತರಗತಿ ಜೂ.13ರಂದು ಆರಂಭವಾಯಿತು.



ಬಲ್ಯ ರಾಮನಗರ ನಿವಾಸಿ, ಹಿರಿಯ ಕೃಷಿಕ ವಿಠ್ಠಲ ಮಾರ್ಲರವರು ಉದ್ಘಾಟಿಸಿ, ಯಕ್ಷಗಾನ ಕಲೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಿ, ಪ್ರೋತ್ಸಾಹಿಸಬೇಕೆಂದು ಹೇಳಿದರು. ಅತಿಥಿಯಾಗಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ರಾಯಚೂರು ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಜನಾರ್ದನ ನಾಯ್ಕ್ ಅವರು, ಮಕ್ಕಳಿಗೆ ನೈತಿಕ ಮೌಲ್ಯ ಶಿಕ್ಷಣ ಅತ್ಯಗತ್ಯ. ಯಕ್ಷಗಾನ, ಕಲೆ, ಸಾಹಿತ್ಯ, ಸಂಗೀತ ಮಕ್ಕಳಲ್ಲಿ ಆಸಕ್ತಿಯಿಂದ ಬರಬೇಕು. ಶಿಕ್ಷಕರು, ಪೋಷಕರು ಪ್ರೋತ್ಸಾಹಿಸಬೇಕು ಎಂದರು.



ಯಕ್ಷ ಶಿಕ್ಷಣ ಪುತ್ತೂರು ವಿಭಾಗ ಸಂಚಾಲಕ ಪ್ರಶಾಂತ ರೈ ಪಂಜ ಅವರು ಮಾತನಾಡಿ, ಯಕ್ಷಗಾನ ಕಲೆಯ ಮಹತ್ವ, ಅದರ ವಿವಿಧ ಹಂತಗಳ ಕುರಿತಾಗಿ ವಿವರಿಸಿ ಶುಭ ಹಾರೈಸಿದರು. ವಿದ್ಯಾಲಯದ ಯಕ್ಷ ಶಿಕ್ಷಕರಾದ ಸುಂದರ ಗೌಡ ಅರಸಿನಮಕ್ಕಿ ಮಾತನಾಡಿ, ಮಕ್ಕಳನ್ನು ಯಕ್ಷಗಾನ ತರಗತಿಗೆ ಸೇರಿಸಿ ಉಚಿತ ಯಕ್ಷಗಾನ ಶಿಕ್ಷಣದ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಬಾಕಸ್ ಶಿಕ್ಷಣ ಸಂಸ್ಥೆ ಪುತ್ತೂರು ಇಲ್ಲಿನ ಶಿಕ್ಷಕಿ ಪ್ರಪುಲ್ಲಾ ಇವರು ವಿದ್ಯಾರ್ಥಿಗಳಿಗೆ ಅಬಾಕಸ್ ತರಗತಿಯ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಸ್ವಾಗತಿಸಿ, ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕಿ ಕಾವ್ಯ ವಂದಿಸಿದರು. ಸಹಶಿಕ್ಷಕಿ ಅಕ್ಷತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.










