ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

0

ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಪೋಷಕರ ಪಾತ್ರವೂ ಮುಖ್ಯ: ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ

ಉಪ್ಪಿನಂಗಡಿ: ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ಜೂ.16ರಂದು ಪೋಷಕರ ಸಭೆ ನಡೆಯಿತು.


ಆಶೀರ್ವಚನ ನೀಡಿದ ಸಂಸ್ಥೆಯ ಕಾರ್ಯದರ್ಶಿಯೂ ಆದ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಅವರು, ಬಿತ್ತಿದ ಬೀಜದಿಂದ ಉತ್ತಮ ಫಲ ದೊರಕುವಂತೆ ತಂದೆ ತಾಯಿಯರು ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿಚಾರ ಹಾಗೂ ಮೌಲ್ಯಗಳನ್ನು ಬಿತ್ತಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಗುಣ, ನಡತೆಗಳನ್ನು ಕಲಿಸಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಪೋಷಕರ ಪಾತ್ರವೂ ಮುಖ್ಯ ಎಂದರು. ಪೋಷಕರ ಸಭೆಗಳಿಗೆ ಹಾಜರಾಗುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದ್ದು, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಇಂತಹ ಸಭೆಗಳು ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳು ಅತಿಯಾಗಿ ಮೊಬೈಲ್ ಬಳಸದಂತೆ ಪೋಷಕರು ಜಾಗೃತೆ ವಹಿಸಬೇಕು. ಪೋಷಕರು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಂಡಾಗ ಮಕ್ಕಳೂ ಅದನ್ನು ಅನುಸರಿಸುತ್ತಾರೆ ಎಂದು ಹೇಳಿದರು.


ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ. ಅವರು ಶಾಲೆಯ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಹಾಗೂ ಶಾಲೆಯ ನೀತಿ, ನಿಯಮಗಳನ್ನು ವಿವರಿಸಿದರು. ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಬಿ.ಟಿ. ಅವರು ಹದಿಹರೆಯದ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳು ಬೆಳೆಯುವಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಹೇಳಿದರು. ನೂತನವಾಗಿ ಆಯ್ಕೆಯಾದ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಆಲಾಜೆ ಅವರು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಸಹಕಾರವನ್ನು ಕೋರಿದರು.


ಕನ್ನಡ ಶಿಕ್ಷಕಿ ನಿತ್ಯಾ ಬಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಹೆಚ್. ವಂದಿಸಿದರು. ವಿಜ್ಞಾನ ಶಿಕ್ಷಕಿ ಸವಿತಾ ಪಿ.ಸಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶಕುಂತಲಾ ಕೆ., ಭವ್ಯಾ ವೈ., ಸಂಧ್ಯಾ ವೈ.ಎಂ. ಹಾಗೂ ಡೊಂಬಯ್ಯ ಎ. ಸಹಕರಿಸಿದರು.

LEAVE A REPLY

Please enter your comment!
Please enter your name here