ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ವಿಕಲಚೇತನರ ಕುಂದುಕೊರತೆ ಚರ್ಚೆ – ಹಲವು ನಿರ್ಣಯ

0

ಪುತ್ತೂರು: ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಜೂ.18ರಂದು ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್ ಎಸ್.ಬಿ. ಕೊಡಲಗಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ನಡೆಯಿತು.

ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ., ಪುತ್ತೂರು ನಗರಸಭೆ ಪೌರಾಯುಕ್ತೆ ವಿದ್ಯಾ ಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹಾಗೂ ತಾಲೂಕು ಪಂಚಾಯತ್ ವ್ಯವಸ್ಥಾಪಕಿ ತುಳಸಿ ಉಪಸ್ಥಿತರಿದ್ದರು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು

ಪಿಂಚಣಿ ಆದಾಯ ಮಿತಿ ಏರಿಕೆ: ವಿಕಲಚೇತನರ ಪಿಂಚಣಿಯ ಆದಾಯ ಮಿತಿಯನ್ನು 32,000 ರೂ.ಗೆ ಹೆಚ್ಚಿಸುವ ಬಗ್ಗೆ ಸರ್ಕಾರಕ್ಕೆ ಶಿಫಾರಸು. ಆರೈಕೆದಾರರ ಭತ್ಯೆ: ಅರ್ಜಿ ಹಾಕಿದ ಎಲ್ಲ ವಿಕಲಚೇತನರ ಆರೈಕೆದಾರರಿಗೆ ಭತ್ಯೆ ನೀಡುವ ಬಗ್ಗೆ ಸರ್ಕಾರಕ್ಕೆ ನಿರ್ಣಯ. ನಶ ಮುಕ್ತ ಅಭಿಯಾನ: ಶಾಲೆ, ಪ್ರೌಢಶಾಲೆ, ಕಾಲೇಜು, ಗ್ರಾಮ ಪಂಚಾಯತ್, ಸರ್ಕಾರಿ ಕಚೇರಿಗಳಲ್ಲಿ ‘ನಶ ಮುಕ್ತ ಭಾರತ ಅಭಿಯಾನ’ ಪ್ರತಿಜ್ಞಾವಿಧಿ ನಡೆಸಲು ಅರಿವು ಮೂಡಿಸಲಾಯಿತು. ಸಾಧನ ಸಲಕರಣೆ ವಿತರಣೆ: ವಿಕಲಚೇತನರ ಇಲಾಖೆಯಿಂದ ಅರ್ಜಿ ಹಾಕಿದ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಣೆ ಬಗ್ಗೆ ಚರ್ಚೆ. ವಿದ್ಯಾರ್ಥಿವೇತನ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಶಾಲೆಗಳಲ್ಲಿ ಪ್ರಚಾರ ಮಾಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿಸುವ ಬಗ್ಗೆ ಸೂಚನೆ. ನಿಯಮಿತ ಪಿಂಚಣಿ: ವಿಕಲಚೇತನರ ಪಿಂಚಣಿ, ಎಂಡೋ ಪಿಂಚಣಿ, ಹಿರಿಯ ನಾಗರಿಕರ ಪಿಂಚಣಿ ಪ್ರತಿ ತಿಂಗಳು ಬರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ.

ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಅವರು ತಹಶೀಲ್ದಾರ್‌ಗೆ ಈ ಕುರಿತು ಮನವಿ ಮಾಡಿದರು. ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರು, ಮಹಿಳಾ ಸಾಂತ್ವನದ ಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ. ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವನಿತಾ ವಂದಿಸಿದರು.ಸಭೆಯ ಕೊನೆಯಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ‘ನಶ ಮುಕ್ತ ಅಭಿಯಾನ’ದ ಪ್ರತಿಜ್ಞೆ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here