ಪುತ್ತೂರು ಸುದಾನ ಶಾಲೆಯಲ್ಲಿ ಮಂತ್ರಿಮಂಡಲ ಪ್ರಮಾಣವಚನ, ವಿದ್ಯಾರ್ಥಿ ಸಂಘಗಳ ಉದ್ಘಾಟನೆ

0

ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಮಂತ್ರಿಮಂಡಲ ರಚನೆ, ಪ್ರಮಾಣವಚನ ಸ್ವೀಕಾರ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಜೂ.20ರಂದು ಶಾಲೆಯ ಎಡ್ವರ್ಡ್ ಹಾಲ್‌ನಲ್ಲಿ ನಡೆಯಿತು.

ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಪ್ರಮಾಣವಚನ ಬೋಧಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಆಯುಷ್ ಎಲ್ ರೈ, ಉಪ ನಾಯಕಿ ದೇವಮುರಾರಿ ಗುಂಜನ್ ಆರ್, ವಿದ್ಯಾರ್ಥಿ ಕಾರ್ಯದರ್ಶಿ ಎಸ್ಟಾವಿಯೋ ವೋನ್ ಜೋಸೆಫ್, ವಿರೋಧ ಪಕ್ಷದ ನಾಯಕ ಯಶವಂತ ಬಿ ಎಚ್, ಉಪನಾಯಕಿ ಇಂಪನಾ ಸಿ ಭಟ್ ಪ್ರಮಾಣವಚನ ಸ್ವೀಕರಿಸಿದರು.

ನಿಕಟಪೂರ್ವ ಕಾರ್ಯದರ್ಶಿ ವಿಕಾಸ್ ರಾಥೋಡ್ ಕರ್ತವ್ಯ ಪುಸ್ತಕ ಹಸ್ತಾಂತರಿಸಿದರು.ವಿವಿಧ ವಿದ್ಯಾರ್ಥಿ ಸಂಘಗಳನ್ನು ದೀಪೋಜ್ವಲನ ಮತ್ತು ಚಿತ್ರಕಲಾ ಶಿಕ್ಷಕ ಶಿವಗಿರಿ ಕಲ್ಲಡ್ಕ ರೂಪಿಸಿದ ‘ಧ್ಯೇಯ ಚಕ್ರ’ ತಿರುಗಿಸುವ ಮೂಲಕ ಉದ್ಘಾಟಿಸಲಾಯಿತು.

ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ. ನಾರ್ಬರ್ಟ್ ಮಸ್ಕರೇನಸ್, “ನಾಯಕತ್ವ ಎಂದರೆ ಅಧಿಕಾರವಲ್ಲ, ಜವಾಬ್ದಾರಿಯಿಂದ ಮಾಡಬೇಕಾದ ಸೇವೆ. ಸುದಾನ ಶಾಲೆ ಅಂಕಗಳಿಕೆ ಜೊತೆಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಕ್ಕೂ ಪ್ರಾಮುಖ್ಯತೆ ನೀಡುತ್ತಿರುವುದು ಶ್ಲಾಘನೀಯ” ಎಂದರು.

ಉದ್ಘಾಟನೆಗೊಂಡ ಸಂಘಗಳು:
ಪ್ರತಿಭಾ ಲಲಿತಕಲಾ ಸಂಘ, ಜಾಗೃತಿ ಸೋಶಿಯಲ್ ಕ್ಲಬ್, ಶಕ್ತಿ ಕ್ರೀಡಾ ಕ್ಲಬ್, ಅವನಿ ವಿಜ್ಞಾನ ಸಂಘ, ದೃಷ್ಟಿ ಐಟಿ ಕ್ಲಬ್, ಲಹರಿ ಸಾಹಿತ್ಯ ಸಂಘ ಮತ್ತು ಇಂಟೆರ್ಯಾಕ್ಟ್ ಕ್ಲಬ್. ನಿರ್ದೇಶಕರು ವಾರ್ಷಿಕ ಚಟುವಟಿಕೆಗಳ ವರದಿ ನೀಡಿದರು.ಇದೇ ವೇಳೆ ಲಹರಿ ಸಾಹಿತ್ಯ ಸಂಘದ ಶಿಕ್ಷಕಿ ಅನಿತಾ ಕೆ ಸಂಪಾದಕತ್ವದ ಶಾಲಾ ಭಿತ್ತಿಪತ್ರಿಕೆ “ವಾಯ್ಸ್ ಆಫ್ ಸುದಾನ” ಬಿಡುಗಡೆಗೊಂಡಿತು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, “ಭಾರತದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಅರಿಯಲು ವಿದ್ಯಾರ್ಥಿ ಪಾರ್ಲಿಮೆಂಟ್ ಸಹಾಯಕ. ಶ್ರದ್ಧೆ, ಹೊಣೆ ಮತ್ತು ಕಾಳಜಿಯಿಂದ ದುಡಿಯುವ ವಿದ್ಯಾರ್ಥಿಗಳು ಈ ನಾಡಿನ ಆಸ್ತಿ” ಎಂದರು.

ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ ಪ್ರತಿಮಾ, ಗಾಯತ್ರಿ ಕೆ, ಅಮೃತವಾಣಿ ಉಪಸ್ಥಿತರಿದ್ದರು. ಶಮಿತಾ, ಮೋಕ್ಷಾ, ಅಕ್ಷರ ಕೆ ಸಿ, ಬಿಂದು ಮತ್ತು ಲಾವ್ಯರಿಂದ ‘ಧ್ಯೇಯ ನೃತ್ಯ’ ನಡೆಯಿತು. ಕಾರ್ಯಕ್ರಮವನ್ನು ಜಾಗೃತಿ ಸೋಶಿಯಲ್ ಕ್ಲಬ್ ಆಯೋಜಿಸಿತ್ತು.

LEAVE A REPLY

Please enter your comment!
Please enter your name here