ಅಸದೃಶ ಸಾಧಕ ಕಲಾ ಸಾಹಿತ್ಯ ಸಾರ್ವಭೌಮ ಕೆ.ಸಿ ಪಾಟಾಳಿ ಪಡುಮಲೆ

0

ಭೌತಿಕ ಪ್ರಪಂಚವು ಬಾಹ್ಯಾಕಾಶ ಮತ್ತು ಕಾಲದ ಚೌಕಟ್ಟಿನಲ್ಲಿ ಅಸ್ತಿತ್ವದಲ್ಲಿದ್ದು, ಕೆಲವು ನೈಸರ್ಗಿಕ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ .ಭೌತಿಕ ಪ್ರಪಂಚವು ಜಡವಲ್ಲ, ಚೈತನ್ಯಶಾಲಿಯಾದುದು. ಇಲ್ಲಿ ಜೀವಿಗಳ ಉಗಮ,ಸರ್ವತೋಮುಖ ಬೆಳವಣಿಗೆ, ಯಥಾಸಾದ್ಯ ಸಾಧನೆಯ ಮಜಲುಗಳನ್ನು ದಾಖಲಿಸಬಲ್ಲ ಅಪೂರ್ವ ಅವಕಾಶಗಳಿವೆ.ಆದಿವಂದ್ಯ, ಆದಿಪರಾಶಕ್ತಿ ಎಂದು ನಂಬಿಕೆಯ ನೆಲೆಯಾಗಿ ನಾವು ಯಾವುದನ್ನು ನಂಬುತ್ತೇವೆಯೋ ಆ ಶಕ್ತಿ ಜಗತ್ತನ್ನು ಜಡವಾಗಿ, ಬರಡಾಗಿ ಇಡಲಿಲ್ಲ .ಜೀವನ್ಮುಖಿಯಾಗಿಸಿ, ಅಗಣಿತ ಜೀವರಾಶಿಗಳಿಗೆ ಜೀವಂತಿಕೆಯನ್ನು ಮೂಲ ದ್ರವ್ಯವಾಗಿ ಒದಗಿಸಿದೆ ಎಂಬುದು ಸಾಮಾನ್ಯರಿಂದ ಪ್ರಾಜ್ಞರವರೆಗೂ ವ್ಯಾಪಕವಾದ ವಿಚಾರಧಾರೆಯಾಗಿದೆ.ಅಣು, ರೇಣು, ತೃಣ,ಕಾಷ್ಠ, ಸ್ಥಾವರ,ಜಂಗಮಾದಿಗಳಲ್ಲಿ ದೈವತ್ವದ ಸಾಕ್ಷಾತ್ಕಾರವನ್ನು ಕಂಡ ಜ್ಞಾನಿಗಳು, ಋಷಿ ಪುಂಗವರು ನಮ್ಮ ಸ್ಮರಣೆಗೆ ಬರುತ್ತಾರೆ.ಈ ಜಗತ್ತಿನಲ್ಲಿ ಅಗಣಿತ ಜೀವರಾಶಿಯ ಸಂದೋಹವೇ ಇದೆ .ಇದಕ್ಕೆಲ್ಲಾ ಮಾನವರು ಅತೀತರಲ್ಲ,ಇದರಲ್ಲಿ ಮಾನವರಿಗೆ ವಿಶೇಷ ಪ್ರಾಧಾನ್ಯತೆ ಇದೆ.ಆಲೋಚಿಸುವ, ತರ್ಕಿಸುವ, ಸಂವಹನ ನಡೆಸುವ ಸಾಮರ್ಥ್ಯ ಮಾನವರಿಗೆ ಮಾತ್ರ ಸಿದ್ಧಿಸಿದೆ.

ರಾಷ್ಟ್ರಕವಿ ಕುವೆಂಪುರವರ ಉಲ್ಲೇಖದ ಪ್ರಕಾರ, ‘ಏನಾದರೂ ಆಗು ಮೊದಲು ಮಾನವನಾಗು’ಎಂಬುದು ನಮ್ಮ ಮನೋ ಭೂಮಿಕೆಗೆ ಗ್ರಾಸ ಒದಗಿಸುತ್ತದೆ.ಅಲ್ಲಿ ಕರುಣೆ ಇದೆ,ದಯಾಪರ ನಿಲುವು ಇದೆ.

ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ವಿಶೇಷತೆಗಳಿಗೆ ಸ್ಪಂದಿಸುವ ವಿಶಿಷ್ಟತೆ ಮಾನವರಿಗೆ ಮಾತ್ರ ಸಿದ್ದಿಸಿದ ವಿಶೇಷ ಗುಣ. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ವಿದ್ಯೆಯನ್ನು ಕರಗತ ಮಾಡುವ ಜೊತೆ ಜೊತೆಗೆ ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಂಡು ಅಸೀಮ ಸಾಧನೆಯನ್ನು ಮಾಡಿದ ಮಹಾನುಭಾವರು ಬಹು ಸಂಖ್ಯೆಯಲ್ಲಿ ನಮಗೆ ಗೋಚರಿಸುತ್ತಾರೆ.ಇಂತಹ ಸಾಧನೆಗೆ ಮೂಲದ್ರವ್ಯ ಆ ಬಗೆಗಿನ ಅವಿಚಿನ್ನ ಸಾಧನಾಪಥವಲ್ಲದೇ ಬೇರೇನಲ್ಲ.

ಈ ಹಿನ್ನೆಲೆಯನ್ನು ಪ್ರಧಾನ ನೆಲೆಯಲ್ಲಿ ಕಂಡಾಗ ಗೋಚರವಾಗುವ,ಸಾಧನೆಯ ಬಲುಮೆಯಿಂದ ಶಿಕ್ಷಣ,ಕಲೆ, ಸಾಹಿತ್ಯ,ಯಕ್ಷಗಾನ,ಸಂಘಟನೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಬೆರಗುಗೊಳಿಸುವ ರೀತಿ ಔನ್ನತ್ಯವನ್ನು ಕಂಡುಂಡ ಶ್ರೀ ಕೆ.ಸಿ. ಪಾಟಾಳಿ ಪಡುಮಲೆ(ಚಂದ ಪಾಟಾಳಿ)

ಗಮನಸೆಳೆಯುವ ಸಾಧಕ ಮಹನೀಯರು. ಕೆ .ಸಿ. ಎಂಬ ಎರಡು ಅಕ್ಷರದಿಂದಲೇ ಖ್ಯಾತನಾಮರಾದ ಶ್ರೀಯುತರು ವಿಭಿನ್ನ ಕ್ಷೇತ್ರಗಳಲ್ಲಿ ದಣಿವರಿಯದ ಸಾಧನೆಯನ್ನು ದಾಖಲಿಸುವ ಮೂಲಕ ಸಮಾಜಕ್ಕೊಂದು ಮಾದರಿಯಾಗಿದ್ದಾರೆ. 

ಪಡುಮಲೆ ಎನ್ನುವ ನಾಲ್ಕು ಅಕ್ಷರದ ಒಂದು ವಿಶಿಷ್ಟವಾದ ಸ್ಥಳ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಚಾರಿತ್ರಿಕ ಸ್ಥಳ. ತುಳುನಾಡಿನ ಅವಳಿ ವೀರರಾದ ದೈವಿಕತೆಯನ್ನು ಮೈಗೂಡಿಸಿಕೊಂಡ, ಸತ್ಯಸಂಧತೆ, ವೀರತ್ವಕ್ಕೆ ಪ್ರತೀಕವಾಗಿದ್ದ ಕೋಟಿ ಚೆನ್ನಯರು ಜನಿಸಿದ ಪವಿತ್ರ ಮಣ್ಣು ಅದು. ಈ ಅಸಾಮಾನ್ಯ ದೇವಾಂಶ ಸಂಭೂತರ ಅಮ್ಮನಾದ ದೇಯಿಬೈದ್ಯೆತಿ,ಅಕ್ಕ ಕಿನ್ನಿದಾರು ಹೀಗೆ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ನಮಗೆ ಕಾಣುವುದು ಮಾನವತ್ವದಿಂದ ದೇವತ್ವಕ್ಕೆ ಏರಿದ ಪರಮವೈಭವದ ಸ್ಥಿತಿಯನ್ನು ಕಂಡ ಒಂದು ವಿಶಿಷ್ಟವಾದ ಘಟನೆ ಮತ್ತು ವಿದ್ಯಮಾನ. 

ಇಂತಹ ಚಾರಿತ್ರಿಕವೂ,ಪಾವಿತ್ರ್ಯತೆಯನ್ನು ಹೊಂದಿದ ಪಡುಮಲೆಯ ಮಣ್ಣಿನಲ್ಲಿ ಶ್ರೀಯುತ ಕೆ .ಸಿ .ಪಾಟಾಳಿಯವರು 13 – 2-1948 ರಂದು ಮಹಾಲಿಂಗ ಪಾಟಾಳಿ, ಪರಮೇಶ್ವರಿ ದಂಪತಿಗಳ ಸುಪುತ್ರರಾಗಿ ಜನ್ಮ ತಾಳಿದರು. ಪ್ರಾಥಮಿಕ ಶಿಕ್ಷಣವನ್ನು ಅಜ್ಜಾವರ, ಬಡಗನ್ನೂರು ಶ್ರೀ ಗಜಾನನ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ ಪೂರೈಸಿ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಳ್ಳಾರೆಯಲ್ಲಿ ಪಡೆದುಕೊಂಡರು. 1965 ರಲ್ಲಿ ತರಬೇತಿ ಪೂರ್ವ ಶಿಕ್ಷಕರಾಗಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. 1968 ರಿಂದ 70ರ ಅವಧಿಯಲ್ಲಿ ಮಂಗಳೂರು ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು ಸುಳ್ಯ ಪದವು ಖಾಸಗಿ ಹಿ. ಪ್ರಾ. ಶಾಲೆಯಲ್ಲಿ ಸೇವಾರಂಭವನ್ನು ಮಾಡಿದರು. ನಂತರ ಮಾತೃ ಶಾಲೆಯಾದ ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿಯುಕ್ತಿಗೊಂಡರು.

 ಓರ್ವ ಮಾದರಿ ಆದರ್ಶಮಯ ಶಿಕ್ಷಕ ಹೇಗಿರಬೇಕು ಎಂಬುದಕ್ಕೆ ಶ್ರೀಯುತರು ನಿದರ್ಶನವಾಗಿ ಕಾಣುತ್ತಾರೆ. ಸತತ ಅಧ್ಯಯನಶೀಲತೆ, ವಿಷಯದ ಕುರಿತಾದ ಆಳವಾದ ಮತ್ತು ಸಮಗ್ರವಾದ ಜ್ಞಾನ, ಸೃಜನಶೀಲತೆ, ಪರಿಣಾಮಕಾರಿ ನಿರೂಪಣಾ ಶೈಲಿ, ಕೌಶಲ್ಯ ಪೂರ್ಣವಾದ ಅಭಿವ್ಯಕ್ತಿ, ವಿದ್ಯಾರ್ಥಿಗಳ ಮನಸ್ಸಿಗೆ ಆನಂದಾನುಭೂತಿಯನ್ನು ಹರಿಸುವ ವಿಶಿಷ್ಟ ಮತ್ತು ಅನ್ಯಾದೃಶವಾದ ಪ್ರಾವೀಣ್ಯತೆ ಇವುಗಳಿಂದ ಇವರ ಅಧ್ಯಾಪನ ಮೇಲ್ ಸ್ತರದಲ್ಲಿಸಂಚರಿಸುವ ಒಂದು ವಿಶಿಷ್ಟ ಅನುಭವ.

ಕೇವಲ ಬೋಧನೆಗಷ್ಟೇ ಸೀಮಿತವಾಗದೆ ಮಕ್ಕಳಿಗೆ ಯಕ್ಷಗಾನ, ನಾಟಕ,ವಾಗ್ವರ್ಧಿನಿ ಸಭೆ,ಕಾವ್ಯವಾಚನ, ಹಸ್ತ ಪತ್ರಿಕೆ ರಚನೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಮಕ್ಕಳಲ್ಲಿ ಅಡಕವಾಗಿರಬಹುದಾದ ಪ್ರತಿಭೆಗೆ ಇಂಬು ನೀಡಿದವರು.

ಆರ್ಯಾವರ್ತ, ಜಂಬೂದ್ವೀಪ ಭರತ ಖಂಡ,ಭರತವರ್ಷ,ಭಾರತ ಎಂಬೆಲ್ಲ ವಿಶಿಷ್ಟವಾದ ಪರಿಕಲ್ಪನೆಗಳಿಂದ ಮೂಡಿಬಂದಿರುವ ನಮ್ಮ ಈ ಭವ್ಯ ದೇಶದಲ್ಲಿ ಎಷ್ಟೆಷ್ಟೋ ಮಹನೀಯರು ತಮ್ಮ ಸಾಧನೆಯ ಬಲುಮೆಯಿಂದ ಅಳಿಸಲಾಗದ ಛಾಪನ್ನು ಬೀರಿಹೋಗಿದ್ದಾರೆ. ಪೂಜ್ಯರಾದ ಕೆ .ಸಿ. ಪಾಠಾಳಿಯವರು ಸಹ ಹೃನ್ಮನಗಳಲ್ಲಿ ವಿದ್ಯುತ್ ಸಂಚಾರವನ್ನು ಉಂಟು ಮಾಡಬಲ್ಲ ಕಲೋಪಾಸನೆಗೆ ಪೂರ್ಣ ರೂಪದ ಮನಸ್ಸನ್ನು ಕೇಂದ್ರೀಕರಿಸಿದವರು. ಅವರೊಬ್ಬ ಶ್ರೇಷ್ಠ ಮಟ್ಟದ ಯಕ್ಷಗಾನ ಕಲಾವಿದ ,ತಾಳಮದ್ದಳೆಯ ಅರ್ಥಧಾರಿ. ಗಮಕವಾಚನದಲ್ಲೂ ತನ್ನ ಪ್ರತಿಭೆಯನ್ನು ಇನ್ನಿಲ್ಲದಂತೆ ಮೆರೆದವರು. ಯಕ್ಷಗಾನ ವೇಷಧಾರಿಯಾಗಿ ಉದಾತ್ತ ಪಾತ್ರಗಳಾದ ಶ್ರೀರಾಮ, ಶ್ರೀ ಕೃಷ್ಣ, ಸುಧನ್ವ,ಅಕ್ರೂರ, ಹನುಮಂತ, ಈಶ್ವರ, ಭೀಷ್ಮಅತಿಕಾಯ ಇಂತಹ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ ಓರ್ವ ಧೀಮಂತ ಕಲಾವಿದ. ಯಕ್ಷಗಾನದಲ್ಲಿ ಆಂಗಿಕ, ವಾಚಿಕಾದಿಯಾಗಿ ನಾಲ್ಕು ಅಂಗಗಳು ಸಮಗ್ರವಾಗಿದ್ದರೂ ಸಹ ಅದರಲ್ಲಿ ವಾಚಿಕ ಅಂದರೆ ಮಾತುಗಾರಿಕೆ ಪ್ರಸಂಗದ ಪೂರ್ಣ ರೂಪದ ಅನಾವರಣಕ್ಕೆ ಸೂಕ್ತ ವಾತಾವರಣವನ್ನು ಕಲ್ಪಿಸುತ್ತದೆ. ಇಂತಹ ಮಾತುಗಾರಿಕೆ ಸಾಹಿತ್ಯ ಶುದ್ಧವಾಗಿ,ನಿರರ್ಗಳವಾಗಿ ಮತ್ತು ಮಾರ್ಮಿಕವಾಗಿ ಹೊರಹೊಮ್ಮಿದಾಗ ಮಾತ್ರ ಪ್ರದರ್ಶನದ ಒಟ್ಟು ಸ್ವರೂಪ ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಶ್ರೀಯುತರು ನಮಗೆ ಬಹಳ ಮುಖ್ಯ ವ್ಯಕ್ತಿಯಾಗಿ ಯಾಕೆ ಕಾಣಿಸುತ್ತಾರೆ ಎಂದರೆ, ಭಾವಪೂರ್ಣವಾದ ಪಾತ್ರ ನಿರ್ವಹಣೆ, ಮಾರ್ಮಿಕವಾಗಿ ಮತ್ತು ವಿಶಿಷ್ಟವಾಗಿ ಮಾತಿನ ಮಂಟಪ ಕಟ್ಟುವ ಕೌಶಲ್ಯ ಇದು ಇವರನ್ನು ಯಕ್ಷ ಲೋಕದಲ್ಲಿ ಸಾಧಕರ ಸಾಲಿನಲ್ಲಿ ವಿರಾಜಮಾನರಾಗುವಂತೆ ಮಾಡಿದೆ ಎಂದರೆ ತಪ್ಪಲ್ಲ.

ಮಾಸ್ತರರ ಮಾತಾಪಿತರದು ತುಂಬು ಸಂಸಾರ. ಅವರ ಏಳು ಮಕ್ಕಳ ಕುಟುಂಬದಲ್ಲಿ ಇವರೊಬ್ಬರೇ ಗಂಡು ಮಗನಾದರೆ, ಮಿಕ್ಕವರು ಆರು ಮಂದಿ ಹೆಣ್ಣು ಮಕ್ಕಳು. ಇವರ ಪೈಕಿ ಇಬ್ಬರು ಅಧ್ಯಾಪಕಿಯರು. ಇನ್ನುಳಿದವರು ಕೃಷಿ,ಸಾಮಾಜಿಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದಾರೆ.

ಮಂಗಳೂರು ಆಕಾಶವಾಣಿಯಲ್ಲಿ ಶ್ರೀಯುತ ರ ಚಿಂತನ, ಸ್ವರಚಿತ ಕವನ ವಾಚನ, ಭಾಷಣ ಯುವವಾಣಿಯಲ್ಲಿ ಪ್ರಸಾರವಾಗಿದೆ. ಇಷ್ಟಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಗಣನೀಯವಾದ ಕೊಡುಗೆಯನ್ನು ಶ್ರೀಯುತರು ನೀಡಿದ್ದಾರೆ. ಕೆಲವು ಕೃತಿಗಳ ಕರ್ತೃ ಇವರು. ಉಲ್ಲೇಖಿಸುವುದಿದ್ದರೆ ಶ್ರೀ ಅಯ್ಯಪ್ಪ ಸ್ವಾಮಿ ಚರಿತ್ರೆ (ಭಾಮಿನಿ ಷಟ್ಪದಿ), ಶ್ರೀ ಪಡುಮಲೆ ಕ್ಷೇತ್ರ ದರ್ಶನ, ಬಾಲ ರಶ್ಮಿ (ಶಿಶು ಗೀತೆಗಳ ಸಂಕಲನ), ಅಕ್ಷರ ದೀಪ (ಸಾಕ್ಷರತಾ ಗೀತಾವಳಿ), ಶ್ರೀ ಶಾಸ್ತಾರ ವಿಷ್ಣುಮೂರ್ತಿ ಭಜನಾವಳಿ, ಪ್ರಬಂಧ ಸಂಗಮ (ರಾಜ್ಯಮಟ್ಟದ ಬಹುಮಾನಿತ ಕೃತಿ), ಗುರುದಕ್ಷಿಣೆ (ಯಕ್ಷಗಾನ ಅರ್ಥ ಸಾಹಿತ್ಯ), ಶ್ರೀ ಪೂಮಾಣಿ ಕಿನ್ನಿಮಾಣಿ ದರ್ಶನ(ಯಕ್ಷಗಾನ ಪ್ರಸಂಗ), ಶ್ರೀ ಆಂಜನೇಯ ದರ್ಶನ, ಸತ್ವ ಪರೀಕ್ಷೆ (ಯಕ್ಷಗಾನ ಅರ್ಥ ಸಾಹಿತ್ಯ), ಶ್ರೀ ಪಡುಮಲೆ ಕ್ಷೇತ್ರ ದರ್ಶನ–೨(ಪರಿಷ್ಕೃತ ದ್ವಿತೀಯ ಆವೃತ್ತಿ). ಇವೆಲ್ಲವೂ ಅವರ ಲೇಖನಿಯಿಂದ ಹೊರಹೊಮ್ಮಿದ ಅಮೂಲ್ಯ ಕೃತಿ ರತ್ನಗಳು.ಇಷ್ಟಲ್ಲದೆ ಪತ್ರಿಕೆಗಳಲ್ಲಿ, ಹಲವು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕರಾಗಿಯೂ ಲೇಖಕರಾಗಿಯೂ ತಮ್ಮ ವಿಶಿಷ್ಟವಾದ ಬರವಣಿಗೆಯನ್ನು ತೋರ್ಪಡಿಸಿದ್ದಾರೆ. ಪೆರ್ಣೆ ಶ್ರೀ ಭಗವತೀ ಕ್ಷೇತ್ರದಲ್ಲಿ ಪ್ರಕಾಶಿಸಲ್ಪಟ್ಟ ‘ದರ್ಶನಂ’ಎಂಬ ಕೃತಿಯ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷದ ಪ್ರಕಾರದಲ್ಲಿ ‘ನ ಭೂತೋ ನ ಭವಿಷ್ಯತಿ ಎಂಬಂತೆ ಅದ್ಭುತವಾದ ಬಣ್ಣದ ವೇಷಗಳನ್ನು ನಿರ್ವಹಿಸಿ ಇತಿಹಾಸ ನಿರ್ಮಿಸಿದ ಬಣ್ಣದ ಮಹಾಲಿಂಗರ ಸ್ಮರಣೆಗೋಸ್ಕರ ಸ್ಥಾಪಿತವಾದ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರು ಆಗಿದ್ದ ಶ್ರೀಯುತರು ಪ್ರತಿಷ್ಠಾನಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದವರು.ಸಾಂದರ್ಭಿಕ ಸಲಹೆಗಳನ್ನು ನೀಡಿ ಅದಕ್ಕೊಂದು ಆಯ ಆಕಾರವನ್ನು ಕೊಟ್ಟವರು.

ಶ್ರೀಯುತ ಕೆ.ಸಿ. ಮಾಸ್ತರರ ಧರ್ಮಪತ್ನಿ ಶ್ರೀಮತಿ ಕುಮುದಾಕ್ಷಿ. ಇವರ ಸಫಲ ದಾಂಪತ್ಯದ ಪ್ರತೀಕವಾಗಿ ಮೂವರು ಮಕ್ಕಳು ಇವರಿಗೆ ಜನಿಸಿದರು. ಹಿರಿಯ ಮಗ ಶ್ರೀದೇವಿಪ್ರಸಾದ್ ಕೆ.ಸಿ. ತಂದೆಯಂತೆಯೇ ಯಕ್ಷಗಾನ,ನಾಟಕ, ಸಾಹಿತ್ಯದಲ್ಲಿ ಪರಿಶ್ರಮವನ್ನು ಹೊಂದಿದ್ದರು. ಮಾತ್ರವಲ್ಲ ಅಧ್ಯಾಪನ ಕ್ಷೇತ್ರದಲ್ಲೂ ಮುಖ್ಯ ಗುರುಗಳಾಗಿ ಸೇವೆಯನ್ನು ಸಲ್ಲಿಸಿದರು. ಆದರೆ ಕಾಲನ ಕಡೆಗಣ್ಣಿಗೆ ಸಿಲುಕಿ ತೀವ್ರ ಅನಾರೋಗ್ಯದ ಕಾರಣ ಇತ್ತೀಚೆಗೆ ವಿಧಿವಶರಾದರು. ಮಾಸ್ತರರ ಹಿರಿಯ ಮಗಳು ಅಮಿತಾ ಎಂಬಾಕೆ, ಕಿರಿಯ ಮಗಳು ಅರುಣಾ ಕೆ.ಸಿ.ಕೇರಳ ಪ್ರಾಂತ್ಯಕ್ಕೆ ಸೇರಿದ ಮೀಯ ಪದವು ಎಂಬಲ್ಲಿ ಹೈಸ್ಕೂಲು ಅಧ್ಯಾಪಕಿಯಾಗಿದ್ದಾರೆ. ಬಹಳ ಪ್ರತಿಭಾವಂತ ಮತ್ತು ಸಾಹಿತ್ಯಕ,ಸಾಂಸ್ಕೃತಿಕ ಒಲವುಗಳನ್ನು ಹೊಂದಿರುವಾಕೆ. ಈಕೆಯ ಮಗಳು ಹಿಮಾನಿ ಅದ್ವೈತಿ ಭರತನಾಟ್ಯದಲ್ಲಿ ಪ್ರವರ್ಧಮಾನ ಸ್ಥಿತಿಗೆ ಬರುತ್ತಿರುವ ಪ್ರತಿಭಾವಂತ ಕಲಾವಿದೆ.

ಕೆ.ಸಿ .ಮಾಸ್ತರರು ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ತರಬೇತುದಾರರಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು.ಚಾರಿತ್ರಿಕ ಪುರುಷರಾದ ಕೋಟಿ ಚೆನ್ನಯರು ಜನ್ಮ ತಾಳಿದ ಪಡುಮಲೆಯ ದಿವ್ಯ ಲೀಲಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಮಹನೀಯರೊಂದಿಗೆ ನಿರಂತರವಾಗಿ ಶ್ರಮಿಸಿದ ಓರ್ವ ಮಹಾನುಭಾವರು ಶ್ರೀಯುತರು ಎಂಬುದು ಅಭಿಮಾನದ ವಿಷಯ.

ಪೂಜ್ಯರಾದ ಕೆ ಸಿ ಪಾಟಾಳಿಯವರು ಅಧ್ಯಾಪನ,ಕಲೆ,ಸಾಹಿತ್ಯ, ದೇವತಾರಾಧನೆ ಈ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗಮನಿಸಿ ಅವರಿಗೆ ಜಿಲ್ಲಾ ಪ್ರಶಸ್ತಿ,,ರಾಜ್ಯ ಪ್ರಶಸ್ತಿ ಸಂದಿರುತ್ತದೆ. ಮಾತ್ರವಲ್ಲ,ಶಿಕ್ಷಕರ ಸಾಧನೆಗೆ ಹೆಗ್ಗುರುತಾದ ಅತ್ಯುನ್ನತ ಪ್ರಶಸ್ತಿಯಾದ ರಾಷ್ಟ್ರಪ್ರಶಸ್ತಿ ಕೂಡ ಅವರಿಗೆ ಸಿಕ್ಕಿರುತ್ತದೆ. ಇಂತಹ ವಿಶಿಷ್ಟವೂ ಮಹತ್ವಪೂರ್ಣವಾದ ಸಾಧನೆಯ ಮೂಲಕ ಒಂದು ಮಾದರಿ ಸಮಾಜ ನಿರ್ಮಾಣಕ್ಕೆ ಯಥಾಸಾಧ್ಯ ಶ್ರಮಿಸಿದ ಮಹನೀಯರು ಈಗ ನಮ್ಮನ್ನು ಅಗಲಿ ಹೋಗಿದ್ದಾರೆ ಎಂಬುದು ನಮಗೆ ವೇದನೆಯನ್ನು ಕೊಡುವ ವಿಚಾರವಾಗಿದೆ. ಹಾಗಿದ್ದರೂ ಸಹ ಅವರು ಹಾಕಿಕೊಟ್ಟ ಮೇಲ್ ಪಂಕ್ತಿ ಮುಂದಿನ ಜನಾಂಗಕ್ಕೆ ದಾರಿದೀಪವಾಗುವುದರಲ್ಲಿ ಎಳ್ಳಿನಿತೂ ಸಂದೇಹವಿಲ್ಲ .ಅವರ ಸಾಧನೆ ಚಿರಾಯುವಾಗಲಿ ಪರಮಾತ್ಮನಲ್ಲಿ ಐಕ್ಯವಾಗಿರುವ ಅವರ ದಿವ್ಯ ಆತ್ಮವು ಮತ್ತೊಮ್ಮೆ ಭುವಿಗೆ ಬೆಳಕನ್ನು ತರಲು ಜನ್ಮ ತಳೆದು ಬರಲಿ ಎಂದು ಆಶಿಸುತ್ತೇನೆ.

ಬರಹ : ನಾರಾಯಣ ತೋರಣಗಂಡಿ, ಸಪ್ತಸ್ವರ ಪೈಲೂರು ಸುಳ್ಯ ದ .ಕ.

LEAVE A REPLY

Please enter your comment!
Please enter your name here