






ಸಮಾಜದಲ್ಲಿ ಶಾಶ್ವತ ಪರಿಣಾಮ ಬೀರುವ ಬದಲಾವಣೆ ಸೃಸ್ಟಿಸಿ-ವಿಕ್ರಂ ದತ್ತ



ಪುತ್ತೂರು: ಸಮಾಜದಲ್ಲಿ ಸೇವೆ ಮಾಡುವ ಉತ್ತಮ ಅವಕಾಶವನ್ನು ರೋಟರಿ ಮುಖಾಂತರ ನಮಗೆ ನೀಡಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಪ್ರಾಜೆಕ್ಟ್ ಉತ್ತಮ ಪ್ರಾಜೆಕ್ಟ್ ಆಗಿದ್ದು ಅದರಂತೆ ರೋಟರಿ ಸದಸ್ಯರು ಸಮಾಜದಲ್ಲಿ ಶಾಶ್ವತ ಪರಿಣಾಮ ಬೀರುವ ಬದಲಾವಣೆ ಸೃಷ್ಟಿಸಬೇಕಾಗಿದೆ ಎಂದು ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಗವರ್ನರ್ ವಿಕ್ರಮ ದತ್ತರವರು ಹೇಳಿದರು.



ಜೂ.26ರಂದು ಸಂಜೆ ನೆಹರುನಗರದ ಸುದಾನ ಕ್ಯಾಂಪಸ್ಸಿನ ಎಡ್ವರ್ಡ್ ಸಭಾ ಭವನದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಜೊತೆಗೆ ಸಂವಹನಾ ಕೌಶಲ್ಯ, ಸಹೋದ್ಯೋಗಿಗಳ ಸಹಕಾರ, ಭರವಸೆ ಕಳೆದುಕೊಳ್ಳದಿರುವಿಕೆ, ಸ್ಥಿರತೆ ಕಾಯ್ದುಕೊಳ್ಳುವಿಕೆ, ಒಳ್ಳೆಯ ಕಾರ್ಯಕ್ರಮ ಸಂಯೋಜಕ ಗುಣವನ್ನು ಅಳವಡಿಸಿಕೊಳ್ಳಬೇಕಾಗಿದೆ. ಬಿಸಿರಕ್ತದ ಯುವಕರಲ್ಲಿ ಸಮಾಜವನ್ನು ಉತ್ತಮ ಗುರಿಯತ್ತ ಕೊಂಡೊಯ್ಯುವ ನಾಯಕತ್ವ ಗುಣ ಬರಲಿ ಎಂದರು.

ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಕಾರುಣ್ಯ ಯೋಜನೆ ಆಗಲಿ-ಸುಜಾ ಮೊಹಮ್ಮದ್:
ಮುಖ್ಯ ಅತಿಥಿ, ಯೇನಪೋಯ(ಡೀಮ್ಡ್ ಟು ಬಿ ಯುನಿವರ್ಸಿಟಿ)ದ ಅಡ್ಮಿಶನ್ ಅಡ್ವೇಶರ್ ಸುಜಾ ಮೊಹಮ್ಮದ್ ಮಾತನಾಡಿ, ನಾವು ಮಾಡುವ ಯಾವುದೇ ಕಾರ್ಯವಾದರೂ ಅದು ಸಮಾಜದಲ್ಲಿ ಶಾಶ್ವತ ಪರಿಣಾಮ ಬೀರುವ ಕಾರ್ಯಕ್ರಮವಾಗಬೇಕಿದೆ. ನಮ್ಮ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿನ ರೋಗಿಗಳ ಜೊತೆಗೆ ಇರುವವರಿಗೆ ಕಾರುಣ್ಯ ಪ್ರಾಜೆಕ್ಟ್ನಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಊಟದ ವ್ಯವಸ್ಥೆಯನ್ನು ಮಾಡುತ್ತಾ ಬಂದಿದ್ದು ಇದು ರೋಟರಿ ಎಲೈಟ್ ಅಧ್ಯಕ್ಷ ಮೊಹಮ್ಮದ್ ಶಾಕೀರ್ರವರ ನೇತೃತ್ವದಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲೂ ಮುಂದುವರೆದರೆ ನಮ್ಮ ಸಂಘಟನೆ ಇದಕ್ಕೆ ಸಹಕಾರ ನೀಡಲಿದ್ದೇವೆ ಎಂದರು.

ರೋಟರಿ ಎಲೈಟ್ ಆರಂಭ ಸುಂದರ, ಐತಿಹಾಸಿಕ-ಅಬ್ದುಲ್ ರಝಾಕ್ ಕಬಕಕಾರ್ಸ್:
ರೋಟರಿ ಅಸಿಸ್ಟೆಂಟ್ ಗವರ್ನರ್, ರೋಟರಿ ಎಲೈಟ್ ಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ರವರು ಮೌನೇಶ್ ವಿಶ್ವಕರ್ಮ ಸಂಪಾದಕತ್ವದ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಎಲೈಟ್ ಇದರ ಆರಂಭ ಸುಂದರ ಹಾಗೂ ಐತಿಹಾಸಿಕವಾಗಿದೆ. ರೋಟರಿ ಎಲೈಟ್ ನೂತನ ಅಧ್ಯಕ್ಷ ಮೊಹಮ್ಮದ್ ಶಾಕೀರ್ರವರ ಮುಂದಾಳತ್ವದಲ್ಲಿ ನನಗೆ ಅಸಿಸ್ಟೆಂಟ್ ಗವರ್ನರ್ ಹುದ್ದೆ ಸಿಕ್ಕಿರುವುದು ಸಂತೋಷವಾಗಿದೆ. ಅನ್ನದಾನದಲ್ಲಿ ಪ್ರಮುಖ ಪಾತ್ರ ವಹಿಸಿದ ದಿ.ಮಿತ್ತೂರು ಉಸ್ಮಾನ್ ಹಾಜಿರವರ ಪುತ್ರ ನ್ಯಾಯವಾದಿ ಮೊಹಮ್ಮದ್ ಶಾಕೀರ್ ಹಾಗೂ ಅವರಿಗೆ ಸಾಥ್ ನೀಡಲಿರುವ ಶಿಕ್ಷಣ ಕ್ಷೇತ್ರದ ರೆ|ವಿಜಯ ಹಾರ್ವಿನ್ರವರ ಪುತ್ರ ಸುಶಾಂತ್ ಹಾರ್ವಿನ್ರವರ ತಂಡ ಮುಂದಿನ ದಿನಗಳಲ್ಲಿ ರೋಟರಿ ಎಲೈಟ್ ಸಂಸ್ಥೆ ಬೆಳಗಲಿ ಎಂದರು.

ಸಾಮಾಜಿಕ ಬದ್ಧತೆ ಹಾಗೂ ಚಿಂತನೆ ಜಾಗೃತವಾದಾಗ ಯೋಜನೆ ಯಶಸ್ವಿ-ಶಶಿಧರ್ ಕಿನ್ನಿಮಜಲು:
ರೋಟರಿ ವಲಯ ಸೇನಾನಿ ಶಶಿಧರ್ ಕಿನ್ನಿಮಜಲು ಮಾತನಾಡಿ, ಕಳೆದ ವರ್ಷ ರೋಟರಿ ಎಲೈಟ್ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜರವರು ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿರುವುದು ಖುಶಿಯ ವಿಷಯವಾಗಿದೆ. ನಮ್ಮಲ್ಲಿ ಯಾವಾಗ ಸಾಮಾಜಿಕ ಬದ್ಧತೆ, ಸಾಮಾಜಿಕ ಚಿಂತನೆ ಜಾಗೃತವಾಗುತ್ತದೋ ಅವಾಗ ನಮ್ಮ ಯೋಜನೆ ಯಶಸ್ವಿಯಾಗುತ್ತದೆ. ನೂತನ ಅಧ್ಯಕ್ಷ ಮೊಹಮ್ಮದ್ ಶಾಕೀರ್ರವರ ಮುಂದಿನ ಯೋಜನೆಗಳಿಗೆ ನಮ್ಮ ಸಹಕಾರ ಸಂಪೂರ್ಣವಾಗಿ ಇದೆ ಎಂದರು.
ಚಿಕ್ಕ ಚಿಕ್ಕ ಹೆಜ್ಜೆಯನ್ನು ಮುಂದಿಟ್ಟರೆ ಅದೇ ಸಾಧನೆ-ಸಿಲ್ವಿಯಾ ಡಿ’ಸೋಜ:
ಕ್ಲಬ್ ನಿರ್ಗಮಿತ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜ ಮಾತನಾಡಿ, ರೋಟರಿ ಅಧ್ಯಕ್ಷೆಯಾಗಿ ಸಮಾಜಕ್ಕೆ ಸೇವೆ ಮಾಡಲು ನನಗೆ ಹೆಮ್ಮೆ ಎನಿಸಿದೆ. ಎಷ್ಟೇ ಚಿಕ್ಕ ಹೆಜ್ಜೆಯಾದರೂ ತಲೆಗೆಡಿಸದೆ ಚಿಕ್ಕ ಚಿಕ್ಕ ಹೆಜ್ಜೆಯನ್ನು ಮುಂದಿಟ್ಟರೆ ಅದೇ ಸಾಧನೆ. ಕ್ಲಬ್ ನಿಂದ ಹಲವಾರು ಸಮಾಜಮುಖಿ ಪ್ರಾಜೆಕ್ಟ್ ಗಳು ಸದಸ್ಯರ, ದಾನಿಗಳಿಂದ ಯಶಸ್ವಿಯಾಗಿ ಆಗಿದೆ. ಸದಸ್ಯರ ಬದ್ಧತೆ ಹಾಗೂ ಸ್ನೇಹತ್ವದಿಂದ ಮರೆಯಲಾಗದ ಪಯಣ ರೋಟರಿಯಿಂದ ಆಗಿದ್ದು ಮುಂದಿನ ಪದಾಧಿಕಾರಿಗಳಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸದಸ್ಯರ ಸೇರ್ಪಡೆ:
ಕ್ಲಬ್ಗೆ ನೂಥನ ಸದಸ್ಯರಾಗಿ ಸುದಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯತೀಶ್ ಕುಮಾರ್ ಬಿ.ಕೆ, ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುತ್ತಿರುವ ಖಲಂದರ್ ಇಬ್ರಾಹಿಂ, ಕ್ಯಾಂಪ್ಕೋ ಉದ್ಯೋಇ ಅಕ್ಷಯ್ ಕುಮಾರ್ ಕೆ, ಬಿಂದು ಸಂಸ್ಥೆಯ ಐಟಿ ಮ್ಯಾನೇಜರ್ ಹರಿಪ್ರಸಾದ್ರವರುಗಳನ್ನು ಪಿಡಿಜಿ ವಿಕ್ರಂ ದತ್ತರವರು ರೋಟರಿ ಪಿನ್ ತೊಡಿಸಿ ಕ್ಲಬ್ಗೆ ಅಧಿಕೃತವಾಗಿ ಬರಮಾಡಿಕೊಂಡರು.
ಸದಸ್ಯರ ಮಕ್ಕಳಿಗೆ ಅಭಿನಂದನೆ:
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೋಟರಿ ಎಲೈಟ್ ಸದಸ್ಯರ ಮಕ್ಕಳಾದ ಎಸೆಸ್ಸೆಲ್ಸಿಯಲ್ಲಿ ಶೇ ೯೭ ಅಂಕ ಗಳಿಸಿದ ಪಲ್ಲವಿ(ಗಂಗಾಧರ ಆಚಾರ್ಯ ಮತ್ತು ಸುಮ ದಂಪತಿ ಪುತ್ರಿ), ಶೇ.೯೫ ಅಂಕ ಗಳಿಸಿದ ಫಾತಿಮತ್ ರಿಝಾ(ಅಬ್ದುಲ್ ರಝಾಕ್ ಕೆ ಹಾಗೂ ಶಮೀದಾ ಬಾನುರವರ ಪುತ್ರಿ), ಸಿಯೋನಾ ಅಸುಂಪ್ತ(ಉಲ್ಲಾಸ್ ಲೋಬೊ ಹಾಗೂ ಸ್ಪಂದನರವರ ಪುತ್ರಿ), ಡಿಯೋನ್ ಮ್ಯಾನ್ವಲ್(ಜೋನ್ಸನ್ ಹಾಗೂ ಝೀನಾರವರ ಪುತ್ರ), ಪಿಯುಸಿಯಲ್ಲಿ ಶಾಝ್(ಶಮೀರುದ್ಧೀನ್ ಹಾಗೂ ಶಹಾನರವರ ಪುತ್ರ), ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಫಾತಿಮ ರಿಝಾ ಝುಬೈದ(ಮೊಹಮ್ಮದ್ ಶಾಕೀರ್ ಹಾಗೂ ರೈಯಾನರವರ ಪುತ್ರಿ), ಮೈಸೂರು ರೀಜ್ಹನ್ನಲ್ಲಿ ನಡೆದ ವಿಜ್ಞಾನ ಡ್ರಾಮಾ ಸ್ಪರ್ಧೆಯಲ್ಲಿ ಸಾಧನೆಗೈಯ್ದ ಹಾಗೂ ಯಕ್ಷಗಾನದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಬಾಲ ಕಲಾವಿದನಾಗಿ ಗುರುತಿಸಿಕೊಂಡಿರುವ ಗಳಿಸಿದ ರಿಶಬ್ ರಾಮ್(ರಾಮ ಕೆ ಹಾಗೂ ಪ್ರಭಾವತಿರವರ ಪುತ್ರ)ರವರುಗಳನ್ನು ಅಭಿನಂದಿಸಲಾಯಿತು.
ಇಂಟರ್ಯಾಕ್ಟ್ ಪದಾಧಿಕಾರಿಗಳಿಗೆ ಅಭಿನಂದನೆ:
ರೋಟರಿ ಕ್ಲಬ್ ಪುತ್ತೂರು ಎಲೈಟ್ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಆಫ್ ಸುದಾನ ಶಾಲೆಯ ಅಧ್ಯಕ್ಷರಾಗಿ ಆಯ್ಕೆಯಾದ ಹತ್ತನೇ ತರಗತಿಯ ಪ್ರಾಪ್ತಿ ಯು.ಶೆಟ್ಟಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ಒಂಭತ್ತನೇ ತರಗತಿಯ ಅನಘ, ಕ್ಲಬ್ ಸಂಯೋಜಕರಾಗಿ ಶಿಕ್ಷಕಿ ಲವೀನಾ ಹನ್ಸ್ ಹಾಗೂ ಇಂಟರ್ಯಾಕ್ಟ್ ಕ್ಲಬ್ ಆಫ್ ಬಾಲವಿಕಾಸ ಶಾಲೆ ಮಾಣಿ ಇದರ ಸಂಯೋಜಕಿ ಜಯಶ್ರೀ ಎಂ.ರವರುಗಳನ್ನು ಅಭಿನಂದಿಸಲಾಯಿತು.
ಗೌರವ;
ರೋಟರಿ ಎಲೈಟ್ ಸ್ಥಾಪಕಾಧ್ಯಕ್ಷ ರೆ|ವಿಜಯ ಹಾರ್ವಿನ್, 2028-29ರ ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಡಾ.ಸೂರ್ಯನಾರಾಯಣ ಕೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನೂತನ ಅಧ್ಯಕ್ಷ ಶಿವರಾಮ ಗೌಡರವರ ಅನುಪಸ್ಥಿತಿಯಲ್ಲಿ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾದ ಪ್ರೊ|ಝೇವಿಯರ್ ಡಿ’ಸೋಜ, ಡಿವೈಎಸ್ಪಿ ಪ್ರಮೋದ್ ಕುಮಾರ್ರವರನ್ನು ಗೌರವಿಸಲಾಯಿತು.
ಅಭಿನಂದನಾ ಪತ್ರ ಹಸ್ತಾಂತರ:
ಆಂಟಿ ಡ್ರಗ್ಸ್ ಅಭಿಯಾನದಲ್ಲಿ ರೋಟರಿ ಎಲೈಟ್ ಸದಸ್ಯರು ಸಮಾಜದಲ್ಲಿ ಅಭಿನಯದ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಕ್ಲಬ್ಗೆ ಡಿವೈಎಸ್ಪಿ ಪ್ರಮೋದ್ ಕುಮಾರ್ರವರು ಅಭಿನಂದನಾ ಪತ್ರವನ್ನು ಕ್ಲಬ್ ಅಧ್ಯಕ್ಷ ಮೊಹಮದ್ ಶಾಕೀರ್ರವರಿಗೆ ಹಸ್ತಾಂತರಿಸಿದರು.
ರಂಗ ಹೆಜ್ಜೆ, ನವಚೇತನಾ ಅಂಗನವಾಡಿ ಪ್ರಾಜೆಕ್ಟ್:
ಕಮ್ಯೂನಿಟಿ ಸರ್ವಿಸ್ ವತಿಯಿಂದ ಸಮುದಾಯ ಜಾಗೃತಿಗೊಂದು ಪಯಣ ಹೆಜ್ಜೆಯಾಗಿ ‘ರಂಗ ಹೆಜ್ಜೆ’ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮತು ಮಹಿಳಾ ಸಬಲೀಕರಣ ಎಂಬಂತೆ ಹತ್ತು ಅಂಗನವಾಡಿಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ‘ನವಚೇತನಾ ಅಂಗನವಾಡಿ ಪ್ರಾಜೆಕ್ಟ್’ ಅನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಪತ್ರಕರ್ತ ಮೌನೇಶ್ ವಿಶ್ವಕರ್ಮರವರು ಈ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿಯ ರಮಾ ಉಪಸ್ಥಿತರಿದ್ದರು.
ಆನೆಟ್ ಮಾನ್ವಿ ಮತ್ತು ಬಳಗ ಪ್ರಾರ್ಥಿಸಿದರು. ಕ್ಲಬ್ ನಿರ್ಗಮನ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸುಶಾಂತ್ ಹಾರ್ವಿನ್ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಪದ್ಮಾವತಿ ವರದಿ ಮಂಡಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ರೆ|ವಿಜಯ ಹಾರ್ವಿನ್ರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ಸದಸ್ಯ ರಂಜಿತ್ ಮಥಾಯಿಸ್, ದೇವರಾಜ್ ಆರ್ರವರು ಪದ ಪ್ರದಾನ ಅಧಿಕಾರಿ, ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ನಿಯೋಜಿತ ಅಧ್ಯಕ್ಷ ರಾಮ ಕೆ ಹಾಗೂ ವೊಕೇಶನಲ್ ಸರ್ವಿಸ್ ಚೇರ್ಮನ್ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಅಧ್ಯಕ್ಷ ಕೇವಲ ಅಧಿಕಾರವಲ್ಲ, ಜವಾಬ್ದಾರಿ..
ಪ್ರತಿಷ್ಠಿತ ರೋಟರಿ ಸಂಸ್ಥೆಯ ಅಧ್ಯಕ್ಷನಾಗುವುದು ಮತ್ತು ಅದರ ಮುಖಾಂತರ ಸಮಾಜಕ್ಕೆ ಸೇವೆ ಸಲ್ಲಿಸುವುದು ಹೆಮ್ಮೆಯ ವಿಷಯವಾಗಿದೆ. ರೋಟರಿ ಅಧ್ಯಕ್ಷ ಅದು ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ. ರೋಟರಿ ಸಂಸ್ಥೆಯಲ್ಲಿನ ಸೇವೆ ಅದು ನಮ್ಮ ಬದುಕಿನುದ್ದಕ್ಕೂ ಅಳವಡಿಸುವ ಚಳುವಳಿಯಾಗಿದೆ. ಕ್ಲಬ್ನಲ್ಲಿ ಹಿರಿ-ಕಿರಿಯ ಸದಸ್ಯರಿದ್ದು ಕ್ಲಬ್ ಚಟುವಟಿಕೆಗಳ ಯಶಸ್ವಿಗೆ ಅವರುಗಳ ಸಹಕಾರ ನಿರಂತರ ಬೇಕಾಗಿದೆ. ಈ ಬಾರಿ ನಮ್ಮದೇ ಕ್ಲಬ್ನ ಅಬ್ದುಲ್ ರಝಾಕ್ರವರು ಅಸಿಸ್ಟೆಂಟ್ ಗವರ್ನರ್ ಆಗಿ, ಸಹಪಾಠಿ ಶಶಿಧರ್ ಕಿನ್ನಿಮಜಲುರವರು ವಲಯ ಸೇನಾನಿಯಾಗಿರುವುದು ನನಗೆ ಆನೆಬಲ ಬಂದಂತಾಗಿದೆ. ನಾವೆಲ್ಲರೂ ಸಾಮಾಜಿಕ ಬದ್ಧತೆಯೊಂದಿಗೆ ಜನಜಾಗೃತಿ ಮೂಡಿಸೋಣ, ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಕಾರುಣ್ಯ ಯೋಜನೆ ಜಾರಿಗೆ ತರೋಣ.
–ಮೊಹಮ್ಮದ್ ಶಾಕೀರ್, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಎಲೈಟ್
ಅವಾರ್ಡ್/ಟಿಆರ್ಎಫ್ ಬಾಕ್ಸ್..
ಮೈಸೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅನುಬಂಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಎಲೈಟ್ ಕ್ಲಬ್ಗೆ ಭಾಜನವಾದ ‘ರೋಟರಿ ಎಕ್ಸಲೆನ್ಸಿ ಅವಾರ್ಡ್’ ಕ್ಲಬ್ನ ವೊಕೇಶನಲ್ ಸರ್ವಿಸ್ ವತಿಯಿಂದ ಕ್ಲಬ್ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ರೋಟರಿ ಫೌಂಡೇಶನ್ಗೆ ಸದಸ್ಯರಿಂದ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ನನ್ನ ಕಾಣಿಕೆ ವಿಶ್ವದ ಒಳಿತಿಗಾಗಿ ಟಿಆರ್ಎಫ್ ಬಾಕ್ಸ್ ಎಂಬ ವಿಶಿಷ್ಟ ಯೋಜನೆ ಬಿಡುಗಡೆಗೊಳಿಸಲಾಯಿತು. ಇದು ಪ್ರತಿ ಸದಸ್ಯರ ಮನೆಯಲ್ಲಿ ಇಟ್ಟುಕೊಂಡು ಹಣವನ್ನು ಹಾಕಿ ಮುಂದಿನ ಡಿಜಿ ಅಧಿಕೃತ ಭೇಟಿ ಸಂದರ್ಭದಲ್ಲಿ ಬಾಕ್ಸ್ ಅನ್ನು ತೆರೆಯಲಾಗುವುದು. ಸಾಂಕೇತಿಕವಾಗಿ ಸದಸ್ಯರಾದ ಶ್ರೇಯಸ್ ಆನಂದ್, ಸುಧೀರ್ ಆಚಾರ್ಯರವರಿಗೆ ಟಿಆರ್ಎಫ್ ಬಾಕ್ಸ್ ವಿತರಿಸಲಾಯಿತು.
ಸನ್ಮಾನ..
ವೈದ್ಯಕ್ಷೇತ್ರದಲ್ಲಿ ಸಾಧನೆಗೈಯ್ದ ಪಲ್ಸ್ ಪೋಲಿಯೊ ಚೇರ್ಮನ್, ಮೂಳೆ ಮತ್ತು ಕೀಲು ತಜ್ಞೆ ಡಾ.ನಾಗಶ್ರೀ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯ್ದ ರೋಟರಿ ಎಲೈಟ್ ಸದಸ್ಯರ ಮಕ್ಕಳಾದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಇ ರೊಬೋಟಿಕ್ ಆಂಡ್ ಅಟೋಮೇಶನ್ ವಿಷಯದಲ್ಲಿ ೪ನೇ ಸ್ಥಾನ ಗಳಿಸಿದ ಶಮಿರುದ್ಧೀನ್ ಹಸನ್ ಹಾಗೂ ಶಹಾನ ಶಮಿರುದ್ದೀನ್ರವರ ಪುತ್ರಿ ಶಾಝ ಶಮೀರುದ್ಧೀನ್ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೮.೮೩ ಅಂಕ ಗಳಿಸಿ ರಾಜ್ಯದಲ್ಲಿ ೮ನೇ ರ್ಯಾಂಕ್ ಗಳಿಸಿದ ಪುರುಷೋತ್ತಮ್ ಶೆಟ್ಟಿ ಹಾಗೂ ಪೂನಂ ಶೆಟ್ಟಿರವರ ಪುತ್ರಿ ಕು.ಸ್ವಸ್ತಿ ಶೆಟ್ಟಿರವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪದ ಪ್ರದಾನ.
ರೋಟರಿ ಪುತ್ತೂರು ಎಲೈಟ್ನ 2026-27ರ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಮೊಹಮ್ಮದ್ ಶಾಕೀರ್, ಕಾರ್ಯದರ್ಶಿ ಸುಶಾಂತ್ ಹಾರ್ವಿನ್, ಕೋಶಾಧಿಕಾರಿ ಹಾಗೂ ಬುಲೆಟಿನ್ ಎಡಿಟರ್ ಮೌನೇಶ್ ವಿಶ್ವಕರ್ಮ, ನಿಕಟಪೂರ್ವ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷ ರಾಮ ಕೆ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಆಸ್ಕರ್ ಆನಂದ್, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಹಾಗೂ ಅಡ್ವೈಸರ್ ರೆ.ವಿಜಯ ಹಾರ್ವಿನ್, ಸರ್ವಿಸ್ ಚೇರ್ಮನ್ ಈಶ್ವರ್ ಬೆಡೇಕರ್, ಪಬ್ಲಿಕ್ ಇಮೇಜ್ ಚೇರ್ಮನ್ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ವೊಕೇಶನಲ್ ಸರ್ವೀಸ್ ಚೇರ್ಮನ್ ಹರಿಣಿ ಪುತ್ತೂರಾಯ, ಕಮ್ಯೂನಿಟಿ ಸರ್ವೀಸ್ ಚೇರ್ಮನ್ ಜಯಕುಮಾರ್ ನಾಯರ್, ಇಂಟರ್ನ್ಯಾಷನಲ್ ಸರ್ವಿಸ್ ಚೇರ್ಮನ್ ಡಾ.ಸಚಿನ್ ಶಂಕರ್, ಕ್ಲಬ್ ಮೆಂಬರ್ಶಿಪ್ ಚೇರ್ಮನ್ ಸುಧೀರ್ ಆಚಾರ್ಯ, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ಚೇರ್ಮನ್ ದೇವರಾಜ್ ಆರ್, ಕ್ಲಬ್ ಫೌಂಡೇಶನ್ ಚೇರ್ಮನ್ ಹಾಗೂ ಟಿ.ಆರ್.ಎಫ್ ಚೇರ್ಮನ್ ಆಗಿ ಮಾಧವ ಗೌಡ, ನ್ಯೂ ಜನರೇಶನ್ ಚೇರ್ಮನ್ ಪದ್ಮಾವತಿ, ಪಲ್ಸ್ ಪೋಲಿಯೊ ಚೇರ್ಮನ್ ಡಾ.ನಾಗಶ್ರೀ, ಸಾರ್ಜಂಟ್ ಎಟ್ ಆರ್ಮ್ಸ್ ಬಾಲು ಸುದಾನರವರಿಗೆ ಪದಪ್ರದಾನ ಅಧಿಕಾರಿ ಪಿಡಿಜಿ ವಿಕ್ರಂ ದತ್ತರವರು ಪದಪ್ರದಾನವನ್ನು ನೆರವೇರಿಸಿದರು.










