






ಉಪ್ಪಿನಂಗಡಿ : ಭೂ ದಾಖಲೆಗಳನ್ನು ದಾಖಲೀಕರಿಸುವ ವೇಳೆ ಪಕ್ಕದ ಜಮೀನನ್ನು ಸೇರಿಸಿದ ತಪ್ಪಿಗೆ ಡಾಕ್ಯೂಮೆಂಟ್ ರೈಟರ್ ವಿರುದ್ದ ಆಕ್ರಮಣಕಾರಿಯಾಗಿ ವರ್ತಿಸಿ , ಅವ್ಯಾಚಪದಗಳಿಂದ ನಿಂದಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಕರಾಯ ಗ್ರಾಮದ ನಿವಾಸಿಯಾಗಿರುವ ಕೆ ಎಸ್ ಅಬ್ದುಲ್ಲಾ ಎಂಬವರು ದೂರು ನೀಡಿದ್ದು, ಅವರು ಕರಾಯದ ಪೆಟ್ರೋಲ್ ಪಂಪಿನಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಹೊರಡುವ ಸಮಯದಲ್ಲಿ ಇನೋವಾ ಕಾರಿನಲ್ಲಿ ಬಂದ ಚರಣ್ ಎಂಬವರು ದ್ವಿ ಚಕ್ರ ವಾಹನಕ್ಕೆ ಕಾರನ್ನು ಅಡ್ಡವಾಗಿರಿಸಿ ಸಂಚಾರಕ್ಕೆ ತಡೆಯೊಡ್ಡಿರುವುದಲ್ಲದೆ , ಅವ್ಯಾಚಪದಗಳಿಂದ ನಿಂದಿಸಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ.



ಕರಾಯ ಗ್ರಾಮದ ವ್ಯಕ್ತಿಯೋರ್ವರ ಭೂ ದಾಖಲೆಗಳ ದಾಖಲೀಕರಣದ ವೇಳೆ ಆರೋಪಿತರ ಭೂಮಿಯು ಸೇರಿರುವುದಕ್ಕೆ ತಾನೇ ಕಾರಣವೆಂದು ಭಾವಿಸಿ ತನ್ನ ವಿರುದ್ದ ಈ ಕೃತ್ಯಗೈದಿರುತ್ತಾರೆಂದು ದೂರಲಾಗಿದೆ.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
.
.










