






ಉಪ್ಪಿನಂಗಡಿ: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ವಿದ್ಯಾರ್ಥಿನಿ ವಿದುಷಿ ಶ್ರದ್ಧಾ ಉಪ್ಪಿನಂಗಡಿ ಅವರ ನೃತ್ಯ ಭೂಷಿಣಿ ಕಲಾ ಶಾಲೆಯ ಎರಡನೇ ಶಾಖೆ ಉಪ್ಪಿನಂಗಡಿ ಸಮೀಪದ ಅಂಡೆತಡ್ಕದಲ್ಲಿ ಶುಭಾರಂಭಗೊಂಡಿತು.



ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ಶಾಲಿನಿ ಆತ್ಮಭೂಷಣ್ ದೀಪ ಬೆಳಗಿಸಿ ಉದ್ಘಾಟಿಸಿದರು. “ಗುರು ಭಕ್ತಿ, ಸಾಧನೆ, ಹೆತ್ತವರ ಪ್ರೋತ್ಸಾಹ ನಿರಂತರವಾಗಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಶ್ರದ್ಧಾ ಸಾಕ್ಷಿ. ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಈಗಲೂ ಗುರು ಪರಂಪರೆ ಉಳಿದುಕೊಂಡು ಬಂದಿದೆ. ಕೇವಲ ನೃತ್ಯ ಕಲಿಯುವುದು ಮಾತ್ರವಲ್ಲ, ಅದರಲ್ಲಿ ಕುಟುಂಬದ ವಾತಾವರಣ ಕಾಣಬಹುದು. ಭಾರತೀಯ ಕಲೆ, ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆ ಅನುಸರಿಸುವುದು ಬಹುಮುಖ್ಯ” ಎಂದು ಅವರು ಹೇಳಿದರು. ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಮುಖ್ಯಸ್ಥ ವಿಘ್ನೇಶ್ ವಿಶ್ವಕರ್ಮ ಹಾಗೂ ಶಿಕ್ಷಕಿ ಗಿರಿಜಾ ಅವರನ್ನು ಗೌರವಿಸಲಾಯಿತು.




ಗುರುಗಳೇ ಸ್ಫೂರ್ತಿ:
ನೃತ್ಯ ಶಿಕ್ಷಕಿ ಶ್ರದ್ಧಾ ಎ. ಪ್ರಸ್ತಾವಿಕವಾಗಿ ಮಾತನಾಡಿ, “ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಪರಿಶ್ರಮದಿಂದಾಗಿ ನಾನು ಈ ಹಂತಕ್ಕೆ ಬಂದಿದ್ದೇನೆ. ಅವರ ಪ್ರೋತ್ಸಾಹದಿಂದಾಗಿ ನೃತ್ಯ ಭೂಷಿಣಿ ಕಲಾ ಶಾಲೆಯ ಮೊದಲ ಶಾಖೆ ಶಿಶಿಲದಲ್ಲಿ ಆರಂಭವಾಗಿದ್ದು, ಇದು ಎರಡನೇ ಶಾಖೆಯಾಗಿದೆ. ಮುಂದೆಯೂ ಎಲ್ಲರ ಸಹಕಾರ ಬೇಕು” ಎಂದರು.
ಶಾಲಾ ಮುಖ್ಯಗುರು ಕೃಷ್ಣಪ್ಪ, ಇಳಂತಿಲ ಕೇಶವ ಶಿಶುಮಂದಿರ ಕಾರ್ಯದರ್ಶಿ ರವಿ ಶಿಲ್ಪ, ಶ್ರದ್ಧಾಳ ದೊಡ್ಡ ತಂದೆ ಕುಂಞ ಮಿತ್ತಿಲ, ತಂದೆ ಸುಬ್ರಾಯ, ತಾಯಿ ಶಾಂತಾ, ಪ್ರಮುಖರಾದ ರಾಧಾಕೃಷ್ಣ ಭಟ್, ಶಶಿ, ಸುನಿತಾ ಮತ್ತಿತರರು ಉಪಸ್ಥಿತರಿದ್ದರು.ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿಗಳಾದ ಫಲ್ಗುಣಿ ಸ್ವಾಗತಿಸಿದರು. ಭಾರತಿ ಎಂ. ಕಡಬ ಪರಿಚಯಿಸಿದರು. ಅಕ್ಷಯಶಂಕರಿ ವಂದಿಸಿದರು. ಶ್ರಾವ್ಯ ಎ. ನಿರೂಪಿಸಿದರು. ವಿದ್ಯಾಲಕ್ಷ್ಮಿ ಸಹಕರಿಸಿದರು.










