






ಉಪ್ಪಿನಂಗಡಿ: ಎಸ್.ಸಿ/ ಎಸ್.ಟಿ ಸಮುದಾಯದ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯು ಸದಾ ಸ್ಪಂದನೆಯನ್ನು ನೀಡುತ್ತದೆ. ದಿನದ 24 ಗಂಟೆಯೂ ಪೊಲೀಸ್ ಠಾಣೆ ತೆರೆದಿದ್ದು, ಸಮಸ್ಯೆಗಳಿದ್ದಾಗ ಯಾವಾಗ ಬೇಕಾದರೂ ಬಂದು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬಹುದು. ಸ್ವಾತಂತ್ರ್ಯ ಸಿಕ್ಕಿ 79 ವರ್ಷವಾಗುತ್ತಾ ಬಂದರೂ ಈ ಸಮುದಾಯದ ಕೆಲವು ಕುಟುಂಬಗಳು ಇನ್ನೂ ತೀರಾ ಹಿಂದುಳಿದಿದ್ದು, ಅವರನ್ನು ಪರಿವರ್ತನೆ ಮಾಡುವ ಕೆಲಸವನ್ನು ಸಮುದಾಯದ ಮುಖಂಡರು ಮಾಡಬೇಕು ಎಂದು ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹೇಳಿದರು.


ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ಜೂ.28ರಂದು ನಡೆದ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಉಪ್ಪಿನಂಗಡಿ ವೃತ್ತ ವ್ಯಾಪ್ತಿಯ ಜೂನ್ ತಿಂಗಳ ಎಸ್.ಸಿ/ ಎಸ್.ಟಿ ಮಾಸಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.



ಎಸ್.ಸಿ/ ಎಸ್.ಟಿ ಸಮುದಾಯದ ಕೆಲವು ಕಾಲನಿಗಳು ಇನ್ನೂ ಅಭಿವೃದ್ಧಿಯನ್ನು ಸಾಽಸಿಲ್ಲ. ಒಂದು ಮನೆಯಲ್ಲಿ ಐವರು ದುಡಿದರೂ ನಯಾ ಪೈಸೆ ಉಳಿತಾಯದ ಮನೋಭಾವ ಕೆಲವರಲ್ಲಿಲ್ಲ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬುದ್ದಿವಂತರ ಜಿಲ್ಲೆಯೆನಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ರೀತಿ ಇರುವುದು ಖೇದಕರ. ಶಿಕ್ಷಣದ ಕೊರತೆ, ಮದ್ಯಪಾನದ ಚಟದೊಂದಿಗೆ ಇಂದಿನ ದುಡಿಮೆ ಇಂದಿಗೆ ಎನ್ನುವ ಮನೋಸ್ಥಿತಿ ಅವರನ್ನು ಆರ್ಥಿಕವಾಗಿ ಮುಂದೆ ಬರಲು ಬಿಟ್ಟಿಲ್ಲ. ಆದ್ದರಿಂದ ಸಮುದಾಯದ ಮುಖಂಡರು ನಿಮ್ಮ ಸುತ್ತಮುತ್ತಲಿನ ಕಾಲನಿಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಪರಿವರ್ತನೆ ಮಾಡುವ ಕೆಲಸ ಮಾಡಬೇಕಿದೆ. ಇಂತಹ ಸಮಸ್ಯೆಯಿಂದ ಮುಕ್ತವಾದಾಗ ಮಾತ್ರ ಸಮಾಜದಲ್ಲಿ ಅವರು ಮುಂದೆ ಬರಲು ಸಾಧ್ಯ ಎಂದರು.
ಇತರ ಸಮುದಾಯದವರು ನಮ್ಮವರನ್ನು ಬಳಸಿಕೊಂಡು ಮತ್ತೆ ಕೈಬಿಡುತ್ತಾರೆ:
ಸಮುದಾಯದ ಮುಖಂಡ ಸೇಸಪ್ಪ ನೆಕ್ಕಿಲು ಮಾತನಾಡಿ, ಇತರ ಸಮುದಾಯದವರು ಅವರೊಳಗಿನ ಜಾಗದ ವಿವಾದಕ್ಕೋ, ಇತರ ಸಮಸ್ಯೆಗಳಿಗೋ ಅಥವಾ ಇನ್ನೊಬ್ಬನ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪೊಲೀಸ್ ಕೇಸ್ ಕೊಡಿಸಲು ನಮ್ಮ ಸಮುದಾಯದವರನ್ನು ಬಳಸಿಕೊಂಡು ಮತ್ತೆ ಕೈ ಬಿಡುತ್ತಾರೆ. ಆಗ ಇಲ್ಲಿ ಕೇಸು ಕೊಟ್ಟವ ಹಾಗೂ ಕೇಸು ಹಾಕಿಸಿಕೊಂಡವ ಬಲಿಪಶುಗಳಾಗುತ್ತಾರೆ ಎಂದರು. ಇದಕ್ಕೆ ಉತ್ತರಿಸಿದ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಎಚ್.ಇ. , ಆ ರೀತಿ ಸಮುದಾಯದ ವ್ಯಕ್ತಿಯನ್ನು ಬಲಿಪಶು ಮಾಡಿರುವುದು ಗೊತ್ತಾದರೆ ನೀವು ಅದರ ವಿರುದ್ಧ ಧ್ವನಿಯೆತ್ತಿ. ಈ ರೀತಿ ಆಗದಂತೆ ಸಮುದಾಯದೊಳಗೆ ಜಾಗೃತಿ ಮೂಡಿಸಿ ಎಂದರು.
ಹುಲಿ ಬಂತು ಹುಲಿ ಕಥೆಯಾಗಬಹುದು:
ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾತನಾಡಿ, ದಲಿತ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗವನ್ನು ತಡೆಯಬೇಕು. ಸತ್ಯಾಂಶವಿದ್ದಾಗ ಮಾತ್ರ ಈ ಕಾಯ್ದೆಯಡಿ ಉಪಯೋಗ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇದು ಹುಲಿ ಬಂತು ಹುಲಿಯ ಕಥೆಯಾಗಬಹುದು. ಒಂಬತ್ತು ಸುಳ್ಳು ಪ್ರಕರಣ ದಾಖಲಿಸಿ ಕೊನೆಗೆ ಸತ್ಯಾಂಶವಿದ್ದರೂ ಅದನ್ನು ನಂಬದಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದರು.
ಎಸ್ಐಆರ್ ಕುರಿತು ಕಾಲನಿಗಳಲ್ಲಿ ಜಾಗೃತಿ ಮೂಡಿಸಬೇಕು:
ಸಮುದಾಯದ ಮುಖಂಡ ಗೋಪಿನಾಥ್ ಮಾತನಾಡಿ, ಎಸ್ಐಆರ್ ಬಗ್ಗೆ ಜನರಿಗೆ ಅರಿವಿಲ್ಲ. ಆದ್ದರಿಂದ ಪೊಲೀಸರು ಎಸ್.ಸಿ./ ಎಸ್.ಟಿ ಕಾಲನಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು. ಇದಕ್ಕುತ್ತರಿಸಿದ ವೃತ್ತ ನಿರೀಕ್ಷಕ ರವಿ ಬಿ.ಎಸ್., ಬೀಟ್ ಪೊಲೀಸರ ಮೂಲಕ ಪ್ರತಿ ಕಾಲನಿಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಆದರೆ ಮನೆಮನೆಗೆ ಮ್ಯಾಪಿಂಗ್ ಮಾಡಲು ಬರುವವರು ಬಿಎಲ್ಒಗಳು. ಅವರು ಬಂದಾಗ ಮನೆಯವರು ಸರಿಯಾದ ಮಾಹಿತಿಯನ್ನು ನೀಡಬೇಕು ಎಂದರು.
ಎಡಮಂಗಲ ಕಡಬ ಠಾಣಾ ವ್ಯಾಪ್ತಿಗೆ ಸೇರಲಿ:
ಎಡಮಂಗಲ ಪೊಲೀಸ್ ಠಾಣೆಯು ಈಗ ದೂರದ ಸುಳ್ಯ ಠಾಣಾ ವ್ಯಾಪ್ತಿಯಲ್ಲಿದೆ. ಅದನ್ನು ಐದು ಕಿ.ಮೀ. ದೂರವಿರುವ ಕಡಬ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎಂದು ಗೋಪಿನಾಥ್ ಆಗ್ರಹಿಸಿದಾಗ, ಉತ್ತರಿಸಿದ ವೃತ್ತ ನಿರೀಕ್ಷಕ ನಾಗರಾಜ್ ಎಚ್.ಇ., ಈ ಬಗ್ಗೆ ಕಳೆದ ಸಭೆಯಲ್ಲಿಯೇ ಪ್ರಸ್ತಾಪವಾಗಿದೆ. ಈ ಪ್ರಸ್ತಾಪವನ್ನು ನಾವು ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ನಿಮ್ಮ ಸಮುದಾಯದಿಂದಲೂ ಈ ಬಗ್ಗೆ ಮನವಿ ನೀಡಿ ಎಂದರು.
ಇತರ ಇಲಾಖೆಗಳೂ ಸಮುದಾಯದ ಸಭೆ ಕರೆದು ಅಹವಾಲು ಸ್ವೀಕರಿಸಲಿ:
ಸೇಸಪ್ಪ ನೆಕ್ಕಿಲು ಮಾತನಾಡಿ, ಇಲ್ಲಿ ಪ್ರಸ್ತಾಪವಾಗುವ ಇತರ ಇಲಾಖೆಗಳ ನಮ್ಮ ಸಮಸ್ಯೆಗಳನ್ನು ಆ ಇಲಾಖೆಗಳೊಂದಿಗೆ ಸಂವಹನ ಸಾಽಸಿ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಆಗ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾತನಾಡಿ, ನಾನು ಇಲ್ಲಿ ಪ್ರಸ್ತಾಪವಾಗುವ ಇತರ ಇಲಾಖೆಗಳಿಗೆ ಅನ್ವಯಿಸುವ ನಿಮ್ಮ ಸಮುದಾಯದ ಸಮಸ್ಯೆಗಳನ್ನು ಅವರಿಗೂ ಕಳುಹಿಸಿಕೊಡುತ್ತೇವೆ. ಆದರೆ ಅದನ್ನು ಪರಿಹಾರ ಮಾಡಬೇಕಾದವರು ಅವರು. ಅದನ್ನು ನಮ್ಮಿಂದ ಬಗೆಹರಿಸಲು ಸಾಧ್ಯವಿಲ್ಲ. ನಾವು ಹೇಳಬಹುದಷ್ಟೇ. ಪೊಲೀಸ್ ಇಲಾಖೆ ಹೇಗೆ ತಿಂಗಳಿಗೊಮ್ಮೆ ಎಸ್.ಸಿ/ ಎಸ್.ಟಿ ಸಮುದಾಯದ ಸಭೆ ಕರೆದು ಅಹವಾಲುಗಳನ್ನು ಕೇಳುತ್ತೋ ಹಾಗೆಯೇ ಇತರೆ ಇಲಾಖೆಗಳು ಹಾಗೆ ಮಾಡಿದರೆ ಸಮಸ್ಯೆಗಳಿಗೆ ಬೇಗ ಪರಿಹಾರ ಒದಗಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಭವ್ಯ ಸಿ.ಎಚ್., ಮಂಗಳೂರು ಪೊಲೀಸ್ ಠಾಣೆಯ ಡಿಸಿಆರ್ಇ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ದಯಾನಂದ, ಕೇಶವ, ಜಗ್ಗ, ಬಾಬು, ರವಿ, ಮೋನಪ್ಪ, ಸುಮಿತ್ರ, ರಕ್ಷಿತಾ, ದೀಕ್ಷಿತ್, ಲೊಕೇಶ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಸ್ವಾಗತಿಸಿದರು. ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ವಂದಿಸಿದರು.










