






ಪುತ್ತೂರು: ಬೆಂಗಳೂರಿನ ಯಲಹಂಕದ ಶಾಸಕ ಎಸ್.ಆರ್ ವಿಶ್ವನಾಥ ಅವರು ಮಂಗಳೂರು ಕಡೆಯ ಎಲ್ಲಾ ಗೌಡರು ಒಕ್ಕಲಿಗರೇ ಅಲ್ಲ ಎಂಬ ಹೇಳಿಕೆಗೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಎಸ್.ಆರ್ ವಿಶ್ವನಾಥ್ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಜಿಲ್ಲಾ ಮಟ್ಟದ ಸಂಘಟನೆಯಿಂದ ಒಟ್ಟಾಗಿ ಕಾನೂನು ಮೂಲಕ ಅಥವಾ ಬೇರೆ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಎಚ್ಚರಿಕೆ ನೀಡಿದ್ದಾರೆ.


ಎಸ್.ಆರ್.ವಿಶ್ವನಾಥ್ ಅವರು ಡಿ.ವಿ.ಸದಾನಂದ ಗೌಡರ ಕುರಿತು ಮಾತನಾಡುವ ವೇಳೆ ಸಾಮಾನ್ಯವಾಗಿ ಹಳೇ ಮೈಸೂರು ಭಾಗದವರನ್ನು ಮಾತ್ರ ಒಕ್ಕಲಿಗರು ಎನ್ನಲಾಗುತ್ತದೆ. ಮಂಗಳೂರು ಕಡೆಯ ಗೌಡರು ಒಕ್ಕಲಿಗರಲ್ಲ ಎಂದು ಲೇವಡಿ ಮಾಡಿರುವ ವಿಚಾರದಲ್ಲಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ರಾಜಕೀಯ ವಿಚಾರ ಬದಿಗಿಟ್ಟು ಸಮುದಾಯ ಮಂಗಳೂರು ಭಾಗದ ಒಕ್ಕಲಿಗ ಸಮಾಜಕ್ಕೆ ಅಪಮಾನ ಮಾಡಿರುವ ವಿಚಾರವಾಗಿ ಸಮಾಜದ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.



ಹೇಳಿಕೆ ಹಿಂಪಡೆದು ಸಾರ್ವಜನಿಕಲ್ಲಿ ಕ್ಷಮೆ ಯಾಚಿಸುವಂತೆ ಆಗ್ರಹ:
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರು ಮಾತನಾಡಿ ಓರ್ವ ಜವಾಬ್ದಾರಿ ಶಾಸಕನಾಗಿರುವ ಎಸ್.ಆರ್ ವಿಶ್ವನಾಥ್ ಅವರು ಕರಾವಳಿ ಭಾಗದ ಗೌಡ ಸಮುದಾಯವನ್ನು ಒಕ್ಕಲಿಗರಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಇದೊಂದು ಬಾಲಿಷ ಹೇಳಿಕೆ. ಅವರು ಸಮಾಜವನ್ನು ಒಡೆಯುವ ಹೇಳಿಕೆ ನೀಡಿದ್ದಾರೆ ಈ ಹೇಳಿಕೆಯನ್ನು ತಕ್ಷಣ ಹಿಂಪಡೆದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತೇವೆ. ಒಕ್ಕಲಿಗ ಸಮಾಜವನ್ನು ದಕ್ಷಿಣ ಕನ್ನಡದಲ್ಲಿ ಆದಿಚುಂಚನಗಿರಿ ಶ್ರೀಗಳು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತಿಹಾಸದ ಪುಟ ನೋಡಿದರೆ ಸಮಾಜದ ದಕ್ಷಿಣ ಕನ್ನಡದ ಒಕ್ಕಲಿಗರ ಕೊಡುಗೆ ತಿಳಿಯುತ್ತದೆ ಎಂದ ಅವರು ಹೇಳಿಕೆ ಹಿಂಪಡೆಯದಿದ್ದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಶಾಸಕ ವಿಶ್ವನಾಥ್ ಅವರ ಹೇಳಿಕೆ ನಮಗೆ ಬೇಸರ ತಂದಿದೆ. ಇತಿಹಾಸನವನ್ನು ಒಮ್ಮೆ ಕೆದಕಿದಾಗ 1837ರಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮುಂಚೂಣಿಯಲ್ಲಿದ್ದರು ಅದು ಕೂಡಾ ದಕ್ಷಿಣ ಕನ್ನಡಲ್ಲಿ ಆರಂಭದ ಹೋರಾಟವಾಗಿತ್ತು. ಈ ಕುರಿತು ನಾವು ದಾಖಲೆ ಸಹಿತ ಸವಾಲು ಹಾಕುತ್ತೇವೆ. ಇಂತಹ ಹಲವು ಇತಿಹಾಸ ಇರುವ ಕರಾವಳಿ ಭಾಗದ ಒಕ್ಕಲಿಕರಿಗೆ ಶಾಸಕರ ಹೇಳಿಕೆ ನೋವು ತಂದಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಒಟ್ಟಾಗಿ ಪ್ರತಿಭಟನೆ ನಡೆಸಲು ಚಿಂತಿಸುತ್ತಿದೆ. ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕಾನೂನು ಮೂಲಕ ಅಥವಾ ಪ್ರತಿಭಟನೆ ಮೂಲಕ ಹೋರಾಟ ಮಾಡಲಿದ್ದೇವೆ ಎಂದವರು ಹೇಳಿದರು. ಈ ಸಂದರ್ಭ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಪಾಣತ್ತಿಲ, ಮಾಜಿ ಅಧ್ಯಕ್ಷ ರವಿ ಮುಂಗ್ಲಿಮನೆ, ವಿಶ್ವನಾಥ ಗೌಡ ಕೆಯ್ಯೂರು, ಶ್ರೀಧರ್ ಗೌಡ ಕಣಜಾಲು ಉಪಸ್ಥಿತರಿದ್ದರು.










