






ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಬೆಂಗಳೂರಿನ ಸಿಎಡಿ ಎಮ್ಎಸ್ ಟ್ರಸ್ಟ್ ಡಾ. ಶ್ರೀಧರ್ ಕೆ.ಸಿ. ಹಾಗೂ ತಂಡ, ಪುತ್ತೂರಿನ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರ ಮತ್ತು ಧನ್ವಂತರಿ ಲ್ಯಾಬೋರೇಟರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಉಚಿತ ನರ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಹಾಗೂ ರಕ್ತದ ಮಧುಮೇಹ ತಪಾಸಣಾ ಶಿಬಿರವು ಜು. ೪ರಂದು ಆನೆಕೆರೆಯಲ್ಲಿರುವ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರದಲ್ಲಿ ಬೆಳಿಗ್ಗೆ 10.೦೦ ಗಂಟೆಯಿಂದ ಮಧ್ಯಾಹ್ನ 1.೦೦ ಗಂಟೆಯವರೆಗೆ ಈ ಶಿಬಿರವು ನಡೆಯಲಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ ಸಮಾಜ ಸೇವಾ ನಿರ್ದೇಶಕರಾದ ಅಭೀಷ್ (ಮೊಬೈಲ್ ಸಂಖ್ಯೆ: 9964875468) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷೆ ವಚನ ಜಯರಾಮ್ ಮತ್ತು ರೋಟರಿ ಕಾರ್ಯದರ್ಶಿ ಅನೂಪ್ ಕೆ.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವೈದ್ಯಕೀಯ ವೃತ್ತಿಯೊಂದಿಗೆ ವಿಸ್ತಾರವಾದ ಸಮಾಜಸೇವೆ:
ಶಿಬಿರವನ್ನು ನಡೆಸಿಕೊಡಲಿರುವ ಪ್ರಸಿದ್ಧ ನರರೋಗ ಹಾಗೂ ಮಾನಸಿಕ ಆರೋಗ್ಯ ತಜ್ಞರಾದ ಡಾ| ಶ್ರೀಧರ್ ಕೆ.ಸಿ. (NIMHANS) ಅವರು ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜಸೇವೆಯಲ್ಲಿಯೂ ಅಭೂತಪೂರ್ವ ಕೊಡುಗೆ ನೀಡುತ್ತಿದ್ದಾರೆ. ಇವರು ನಡೆಸುತ್ತಿರುವ “ದೀಪಶ್ರೀ ವೃದ್ಧರ ಪುನರ್ವಸತಿ ಕೇಂದ್ರ”ವು ಕೇವಲ ಪುತ್ತೂರು ಮಾತ್ರವಲ್ಲದೆ, ಮೈಸೂರು ಹಾಗೂ ರಾಮನಗರದಲ್ಲೂ ವೃದ್ಧಾಶ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ತನ್ನ ಸೇವಾ ಚಟುವಟಿಕೆಗಳನ್ನು ವ್ಯಾಪಕವಾಗಿ ವಿಸ್ತರಿಸಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 1೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಕೂಡ ಇವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.



ವಿಶೇಷವಾಗಿ, ಕೇಂದ್ರ ಸರ್ಕಾರದ ’ಸ್ಮೈಲ್’ (SMILE) ಪ್ರಾಜೆಕ್ಟ್ ಅಡಿಯಲ್ಲಿ ಕರ್ನಾಟಕದ ಪ್ರಪ್ರಥಮ ತೃತೀಯಲಿಂಗಿಗಳ (Transgenders) ಉಚಿತ ವಸತಿ ನಿಲಯವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿರುವುದು ಡಾ. ಶ್ರೀಧರ್ ಅವರ ಕ್ರಾಂತಿಕಾರಿ ಹಾಗೂ ಮಾನವೀಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಅನಾಥರು, ನಿರ್ಗತಿಕರು ಹಾಗೂ ಆರೈಕೆಯ ಅಗತ್ಯವಿರುವ ವೃದ್ಧರಿಗೆ ಉಚಿತ ಆಶ್ರಯ, ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸುತ್ತಿರುವ ಈ ಸಂಸ್ಥೆಯು, ಪುತ್ತೂರಿನಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷವೂ ಇವರು ರೋಟರಿ ಕ್ಲಬ್ ಪುತ್ತೂರಿನ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದರು.










