






ಪುತ್ತೂರು: ಕಾರ್ಪೊರೇಟ್ ಕ್ಷೇತ್ರದ ಅನುಭವವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಯುವ ನಾಯಕಿ ವಚನ ಜಯರಾಮ್ ಅವರು ರೋಟರಿ ಕ್ಲಬ್ ಪುತ್ತೂರು ಯುವದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಜುಲೈ 5ರಂದು ನಡೆಯುವ ಸಮಾರಂಭದಲ್ಲಿ ಅವರು ಪದಗ್ರಹಣ ಮಾಡಲಿದ್ದಾರೆ.



ಪುತ್ತೂರು ಎಪಿಎಂಸಿ ಸ್ಥಾಪನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ದಿ. ಸಿ.ಪಿ. ಜಯರಾಮ್ ಗೌಡ ಮತ್ತು ಚಂದ್ರಕಲಾ ಜಯರಾಮ್ ದಂಪತಿಯ ಪುತ್ರಿಯಾಗಿರುವ ವಚನ ಜಯರಾಮ್ ಬಿ.ಇ, ಎಂ.ಬಿ.ಎ ಪದವೀಧರೆ. ಬೆಂಗಳೂರಿನಲ್ಲಿ 18 ವರ್ಷಗಳ ಕಾಲ ಐಟಿ ಹಾಗೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, 4,500 ಸಿಬ್ಬಂದಿಗಳ ತಂಡದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದಾರೆ.”ಮರಳಿ ಮಣ್ಣಿಗೆ” ಸಂಕಲ್ಪದೊಂದಿಗೆ ಸ್ವಗ್ರಾಮ ಚಾರ್ವಾಕಕ್ಕೆ ಮರಳಿ ಕೃಷಿಯಲ್ಲಿ ತೊಡಗಿರುವ ಅವರು, ಪ್ರಸ್ತುತ ಅದಿವಾ ಲೈಫ್ಸ್ಟೈಲ್ ಸಂಸ್ಥೆಯ ಆಡಳಿತ ನಿರ್ದೇಶಕಿಯಾಗಿ ಯಶಸ್ವಿ ಮಹಿಳಾ ಉದ್ಯಮಿಯಾಗಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು, ಹಲವು ಶಿಕ್ಷಣ ಸಂಸ್ಥೆಗಳ ಸಲಹಾ ಸಮಿತಿಗಳ ಸದಸ್ಯೆಯೂ ಆಗಿದ್ದಾರೆ. ವರ್ತನಾ ವಿಶ್ಲೇಷಣೆ, ಮನೋವೈಜ್ಞಾನಿಕ ಸಲಹೆ ಹಾಗೂ ಜೀವನ ಕೌಶಲ್ಯ ತರಬೇತಿಯಲ್ಲಿ ಪರಿಣತಿ ಹೊಂದಿರುವ ವಚನ ಅವರು ನೂರಾರು ಕಾರ್ಯಾಗಾರಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ನೀಡಿದ್ದಾರೆ.ಇವರ ಪತಿ ಪ್ರದೀಪ್ ರಾಮಕೃಷ್ಣ ಗೌಡ ಗೋಲ್ಡ್ಮನ್ ಸ್ಯಾಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದು, ಪುತ್ರ ಯುಧಿಷ್ಠಿರ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ವೃತ್ತಿಪರ ಅನುಭವ, ಸಾಮಾಜಿಕ ಬದ್ಧತೆ ಹಾಗೂ ಯುವ ನಾಯಕತ್ವವನ್ನು ಸಮನ್ವಯಗೊಳಿಸಿರುವ ವಚನ ಜಯರಾಮ್ ಅವರ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಇನ್ನಷ್ಟು ಜನಪರ, ಯುವಜನಕೇಂದ್ರಿತ ಕಾರ್ಯಕ್ರಮಗಳ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.












