






ಪುತ್ತೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ‘ಮೈಸೂರು ಕಂಬಳ’ ಆಯೋಜನೆ ಕುರಿತು ಸರ್ಕಾರ ಮರುಚಿಂತನೆ ಮಾಡುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.


ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ.ಕಂಬಳವು ಕರಾವಳಿ ಕರ್ನಾಟಕದ ಮಣ್ಣು, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿದ್ದು, ಶತಮಾನಗಳ ಇತಿಹಾಸ, ಪವಿತ್ರ ಪರಂಪರೆಯೂ ಆಗಿದೆ.ಇದು ತನ್ನದೇ ಆದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಮೌಲ್ಯವನ್ನು ಹೊಂದಿದ್ದು, ಇದನ್ನು ಕೇವಲ ವಾಣಿಜ್ಯೀಕರಣ ಅಥವಾ ಮನ ರಂಜನೆಯ ದೃಷ್ಟಿಕೋನದಿಂದ ನೋಡಿ ಅದರ ಘನತೆಯನ್ನು ಕುಂದಿಸಬಾರದು.ನಿರ್ದಿಷ್ಟ ಪರಿಸರ ಮತ್ತು ಪ್ರಾದೇಶಿಕ ನಂಬಿಕೆಗೆ ಸೀಮಿತವಾಗಿರುವ ಇಂತಹ
ವಿಶಿಷ್ಟ ಆಚರಣೆಯನ್ನು ಅದರ ಮೂಲ ನೆಲದಿಂದ ಬೇರ್ಪಡಿಸುವುದು ಅದರ ಆಂತರಿಕ ಪಾವಿತ್ರ್ಯತೆಗೆ ಧಕ್ಕೆ ತರುವ ಅಪಾಯ ಎನಿಸಿದೆ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.



ನಮ್ಮೆಲ್ಲರ ಗಮನ ಮೈಸೂರು ದಸರಾ ಮಹೋತ್ಸವದ ಮೂಲ ಸ್ವರೂಪವನ್ನು ಮತ್ತಷ್ಟು ಬಲಪಡಿಸುವುದರ ಕಡೆಗೆ ಇರಬೇಕಾಗಿದೆ.ಪ್ರಸ್ತುತ ದಸರಾ ಮಹೋತ್ಸವದ ಆಯೋಜನೆಯಲ್ಲಿ ಹಲವು ಆಡಳಿತಾತ್ಮಕ ಲೋಪದೋಷ, ಮೂಲ ಸೌಕರ್ಯಗಳ ಕೊರತೆ ಹಾಗೂ ವ್ಯವಸ್ಥಿತ ಸವಾಲುಗಳು ಎದುರಾಗುತ್ತಿವೆ.ಸರ್ಕಾರ ಮತ್ತು ದಸರಾ ಉನ್ನತ ಮಟ್ಟದ ಸಮಿತಿಯು ಮೊದಲು ಈ ಆಂತರಿಕ ಸವಾಲುಗಳನ್ನು ಬಗೆಹರಿಸಲು ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಯದುವೀರ್ ಒಡೆಯರ್ ಸಲಹೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ‘ಮೈಸೂರು ಕಂಬಳ’ ನಡೆಸಲು ಉದ್ದೇಶಿಸಲಾಗಿದ್ದು,ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ಮೈಸೂರು ಕಂಬಳಕ್ಕಾಗಿ ಪುತ್ತೂರು ಶಾಸಕ, ಕಂಬಳದ ರೂವಾರಿಯೂ ಆಗಿರುವ ಅಶೋಕ್ ಕುಮಾರ್ ರೈಯವರು ಸ್ಥಳ ಪರಿಶೀಲನೆ ನಡೆಸಿದ್ದರು.ಮೈಸೂರಿನ ಸಾತಗಳ್ಳಿ ಬಳಿ, ವಿಟಿಯು ಸಮೀಪದ 23 ಎಕರೆ ಭೂಮಿಯಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆರವು ಮಾಡಿ, ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ.ಈ ನಡುವೆ ಪರಿಸರ ವಾದಿಗಳು ಮೈಸೂರು ಕಂಬಳ ವಿರೋಧಿಸಿ, ಅಲ್ಲಿನ ಗಿಡ-ಮರಗಳನ್ನು ತೆರವುಗೊಳಿಸದಂತೆ ಮನವಿ ಮಾಡಿದ್ದರು.ಇದೀಗ ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಕಂಬಳ ಕುರಿತು ಮರು ಚಿಂತನೆ ಮಾಡುವಂತೆ ತಮ್ಮ ‘ಯದುವೀರ್ ಒಡೆಯರ್’ ಎಕ್ಸ್ ಖಾತೆಯಲ್ಲಿ ಆಗ್ರಹಿಸಿದ್ದಾರೆ.










