






ಕೊನೆಯ ದಿನವೂ ಜನಸಾಗರ – ಕೃಷಿ, ಆಹಾರ, ಸಂಸ್ಕೃತಿಗೆ ಉತ್ತಮ ವೇದಿಕೆ


ಪುತ್ತೂರು: ಪುತ್ತೂರು ವಾರಿಯರ‍್ಸ್ ಮತ್ತು ಸುದ್ದಿ ಅರಿವು ಕೇಂದ್ರದ ಜಂಟಿ ಆಶ್ರಯದಲ್ಲಿ ಸ್ಪೂರ್ತಿ ಕ್ಯಾಟರಿಂಗ್ ಸರ್ವೀಸ್ ಮತ್ತು ಈವೆಂಟ್ ಆರ್ಗನೈಸರ್ಸ್ ಇವರ ಸಹಯೋಗದಲ್ಲಿ ಜು.2ರಂದು ಕಿಲ್ಲೆ ಮೈದಾನದಲ್ಲಿ ಆರಂಭಗೊಂಡ ಮಾವು, ಹಲಸು, ಸಸ್ಯಜಾತ್ರೆ ಹಾಗೂ ಫುಡ್ ಫೆಸ್ಟಿವಲ್ ‘ಪುತ್ತೂರ ಹಬ್ಬ’ ಜು. 5ರಂದು ಸಂಪನ್ನಗೊಂಡಿದೆ.




ಕೊನೆಯ ದಿನವಾದ ಜು.5ರಂದು ಬೆಳಗ್ಗಿನಿಂದ ರಾತ್ರಿಯ ತನಕವೂ ಕಿಲ್ಲೆ ಮೈದಾನ ತುಂಬಾ ಜನಸಾಗರವೇ ತುಂಬಿತ್ತು. ರಜಾ ದಿನವಾದ ಆದಿತ್ಯವಾರ ನಿರೀಕ್ಷೆಗೂ ಮೀರಿ ಜನ ಹಬ್ಬಕ್ಕೆ ಆಗಮಿಸಿದ್ದರು. ಪುತ್ತೂರಿನ ಜನತೆಗೆ ಕೃಷಿ, ಆಹಾರ, ಸಸ್ಯ ಸಂಸ್ಕೃತಿ ಹಾಗೂ ಕುಟುಂಬ ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಅನುಭವಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜನೆಗೊಂಡಿದ್ದ ಪುತ್ತೂರು ಹಬ್ಬದಲ್ಲಿ ಸ್ಥಳೀಯ ಕೃಷಿಕರು, ನರ್ಸರಿ ಮಾಲೀಕರು, ಸ್ವಸಹಾಯ ಸಂಘಗಳು, ಮಹಿಳಾ ಉದ್ಯಮಿಗಳು ಹಾಗೂ ವಿವಿಧ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಪುತ್ತೂರು ಹಬ್ಬವೂ ಉತ್ತಮ ವೇದಿಕೆಯಾಗಿತ್ತು.

ಇಂತಹ ಹಬ್ಬಗಳು ನಿರಂತರ ಮುಂದುವರಿಯಲಿ:
ಜು.5ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ, ಜನರಿಗೆ ಮನೋರಂಜನೆ, ಆಹಾರ ಮೇಳ, ಕೃಷಿ ವಿಚಾರಗಳು ಒಂದೇ ಸೂರಿನಡಿ ಸಿಗುವಂತೆ ಮಾಡಿದ ವ್ಯವಸ್ಥೆ ಪುತ್ತೂರು ಹಬ್ಬದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಇಂತಹ ಹಬ್ಬಗಳು ನಿರಂತರವಾಗಿ ಮುಂದುವರಿಯಬೇಕು. ಪುತೂರು ವಾರಿಯರ‍್ಸ್ ತಂಡದ ಜೊತೆ ಸುದ್ದಿ ಸಮೂಹ ಸಂಸ್ಥೆ ಸೇರಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿದೆ ಎಂದರು.

ಒಳ್ಳೆಯ ಮನಸ್ಸಿದ್ದರೆ ಕಾರ್ಯಕ್ರಮ ಯಶಸ್ವಿ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಕಾರ್ಯಕ್ರಮ ನಡೆಸುವವರಲ್ಲಿ ಒಳ್ಳೆಯ ಮನಸ್ಸಿರಬೇಕು. ಸರಳತೆ ಮತ್ತು ಜನರನ್ನು ಆಕರ್ಷಿಸುವಂತಿರಬೇಕು. ಅಂತಹ ಕಲೆ ಗಿರೀಶ್, ಪೂರ್ಣೇಶ್, ರಜಾಕ್‌ರಲ್ಲಿದೆ. ಇಲ್ಲಿ ವ್ಯಾಪಾರ ದೃಷ್ಟಿಕೋನಕ್ಕಿಂತ ಹಬ್ಬಕ್ಕೆ ಬಂದವರಿಗೆ, ಸ್ಟಾಲ್ ಹಾಕಿದವರ ಸಂತೋಷವೇ ದೊಡ್ಡ ವಿಚಾರವಾಗಿತ್ತು. ಹಣ, ನಷ್ಟ ವಿಚಾರ ಬೇರೆ. ಆದರೆ ಜನರ ಮನಸ್ಸಿನ ಭಾವನೆ ತಿಳಿಯುವುದು ಮುಖ್ಯ. ಅದು ಇವತ್ತಿಗೆ ಮಾತ್ರವಲ್ಲ ಸದಾ ಇರಬೇಕು. ಈ ನಿಟ್ಟಿನಲ್ಲಿ ಸುದ್ದಿ ನಿಮ್ಮೊಂದಿಗೆ ಸದಾ ಇರುತ್ತದೆ ಎಂದರು.

ಕಾರ್ಯಕ್ರಮದ ಸಂಯೋಜಕರಾದ ರಜಾಕ್, ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಶಿಕ್ಷಣ ಉದ್ಯೋಗ ಮತ್ತು ಅರಿವು ಕೇಂದ್ರದ ನಮಿತಾ ದಿಲೀಪ್, ಪುತ್ತೂರು ವಾರಿಯರ್ಸ್ ತಂಡದ ಸದಸ್ಯೆ ಚೇತನಾ ಅತಿಥಿಗಳನ್ನು ಗೌರವಿಸಿದರು. ಶುಭಾ ರೈ ಕಾರ್ಯಕ್ರಮ ನಿರೂಪಿಸಿದರು.
ಮೆಹೆಂದಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:
ಪುತ್ತೂರ ಹಬ್ಬದಲ್ಲಿ ಜು.4ರಂದು ಅಪರಾಹ್ನ ಮಹಿಳೆಯರಿಗಾಗಿ ಮೆಹೆಂದಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 24 ಮಂದಿ ಸ್ಪರ್ಧಿಗಳ ಪೈಕಿ ವಿಜೇತರಿಗೆ ಜು.5ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ನಿಶಾ ಸವಣೂರು(ಪ್ರ), ಶ್ರೇಯಾ ಕೆ.ಎಸ್.(ದ್ವಿ), ಅಭಿದಾ ಯು.ಕೆ(ತೃ) ಸ್ಥಾನ ಪಡೆದರು. ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ಮೆಹೆಂದಿ ವಿಶೇಷ ಕಲಾವಿದರಾದ ಸಮೀಕ್ಷಾ ರೈ ಹಾಗೂ ಶಬ್ನಂ ಝಿವಾಸ್ ಹೆನ್ನಾ ತೀರ್ಪುಗಾರರಾಗಿದ್ದರು. ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಗಿರೀಶ್ ರೈ ಮೂಲೆ, ಪೂರ್ಣೇಶ್ ಭಂಡಾರಿ, ಅಬ್ದುಲ್ ರಜಾಕ್ ಬಿ.ಹೆಚ್., ಪ್ರಸಾದ್ ರೈ ಸಿ.ಎಚ್.ತಾರಿಗುಡ್ಡೆ, ಚೇತನಾ ಹೆಗ್ಡೆ ಉರ್ಲಾಂಡಿ, ಸಿರಿಲ್ ರೋಡ್ರಿಗಸ್ ಪುತ್ತೂರು, ಗಣೇಶ್ ಕೊಡಿಪ್ಪಾಡಿ, ಜ್ಞಾನೇಶ್ ಆಚಾರ್ಯ, ಗಿರೀಶ್ ನರಿಮೊಗರು, ಶ್ರವಣ್ ರೈ ಸೂರ್ಯ, ಪಿಡಬ್ಲ್ಯುಡಿ ಗುತ್ತಿಗೆದಾರ ವಸಂತ ಕಲ್ಲರ್ಪೆ, ಶರೀ- ಬಲ್ನಾಡು, ಶಿವಾನಂದ ಹೆಗ್ಡೆ, ಪ್ರತಾಪ್, ವಿಕ್ಟರ್ ಗೋನ್ಸಾಲಿಸ್, ಶರೂನ್ ಸ್ವಿಕೇರ, ಸತೀಶ್ ರೈ ನಿಡ್ಪಳ್ಳಿ, ಪ್ರೇಮಲತಾ ತೆಂಕಿಲ, ಕೇಶವ ಸುವರ್ಣ ಸಂಪ್ಯ ಸಹಿತ ಹಲವು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಎಂಎಲ್‌ಸಿ ಕಿಶೋರ್‌ಕುಮಾರ್ ಭೇಟಿ
ಪುತ್ತೂರು ಹಬ್ಬಕ್ಕೆ ರಾತ್ರಿ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಪುತ್ತೂರು ಹಬ್ಬದ ಆಯೋಜಕರು ಸ್ವಾಗತಿಸಿದರು. ಬಳಿಕ ಕಿಶೋರ್ ಕುಮಾರ್ ಅವರು ಮಾತನಾಡಿ, ಆರೋಗ್ಯಕರ ಆಹಾರ, ಹಣ್ಣುಗಳು ಜೀವನ ಶೈಲಿಗೆ ಉತ್ತಮ. ಹಬ್ಬಗಳ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣ ಆಗಲಿ ಎಂದರು. ಕಿಶೋರ್ ಕುಮಾರ್ ಅವರ ಜೊತೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ದಿಶಾ ಮಾಜಿ ಸದಸ್ಯ ರಾಮದಾಸ್ ಹಾರಾಡಿ ಜೊತೆಗಿದ್ದರು.










