






ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30ಸಾವಿರ ಮತ ಡಿಲೀಟ್ ಮಾಡುವ ಗುರಿ!
ರಾಮನ ಹುಂಡಿ ಕದ್ದವರು ಜನರ ಮತದ ಹಕ್ಕನ್ನು ಕದಿಯಲು ಹೊರಟಿದ್ದಾರೆ – ಹೆಚ್ ಮಹಮ್ಮದ್ ಆಲಿ ಆರೋಪ


ಪುತ್ತೂರು: ಕೇಂದ್ರ ಬಿಜೆಪಿ ಸರಕಾರ ಚುನಾವಣಾ ಆಯೋಗದ ಮೂಲಕ ರಾಜ್ಯದಲ್ಲಿ ನಡೆಸುತ್ತಿರುವ ಎಸ್.ಐ.ಆರ್ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಜನರು ತಮ್ಮ ಮತದ ಹಕ್ಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25 ರಿಂದ 30 ಸಾವಿರ ಮತವನ್ನು ಡಿಲೀಟ್ ಮಾಡುವ ಗುರಿ ಹೊಂದಿದ್ದಾರೆ. ರಾಮನ ಹುಂಡಿ ಕದ್ದವರು ಜನರ ಮತದ ಹಕ್ಕನ್ನು ಕದಿಯಲು ಹೊರಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.



ಎಸ್.ಐ.ಆರ್.ಮೂಲಕ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಅದರಲ್ಲೂ ಕಾಂಗ್ರೆಸ್ ಬೆಂಬಲಿತ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಸಂಶಯಕ್ಕೆ ಚುನಾವಣಾ ಆಯೋಗ ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ನಡೆಸುತ್ತಿರುವ ಗೊಂದಲವು ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತಿದೆ. ಈಗಾಗಲೇ ಬಿಹಾರದಲ್ಲಿ 90ಲಕ್ಷ ಮತದಾರರನ್ನು ಕೈ ಬಿಡಲಾಗಿದೆ. ಹೀಗ ಒಟ್ಟು ಎಲ್ಲಾ ರಾಜ್ಯಗಳು ಸೇರಿ 6 ಕೋಟಿಯಷ್ಟು ಮತದಾರರನ್ನು ಕೈ ಬಿಡುವ ಕಾರ್ಯಕ್ರಮ ಎಸ್.ಐ.ಆರ್ ಮೂಲಕ ಆಗುತ್ತಿದೆ. ಆದರೆ ಎಸ್.ಐ.ಆರ್ ಪ್ರಕ್ರಿಯೆ ಮಾಡುವಾಗ ಜನರಿಗೆ ಅರಿವು ಮೂಡಸುವ ಕೆಲಸ ಮಾಡಬೇಕಾಗಿತ್ತು. ಅದನ್ನು ಮಾಡದೆ ಕಾಟಚಾರಕ್ಕೆ ರಾಜಕೀಯ ಪಕ್ಷದ ಮೀಟಿಂಗ್ ಕರೆದು ಸರಿಯಾದ ಮಾಹಿತಿಯನ್ನೂ ನೀಡಿಲ್ಲ. ಇವತ್ತು ಬಿಎಲ್ಒಗಳಿಂದ ಜೂ.30 ರಿಂದ ಜು.29ರ ಒಳಗೆ ಎಸ್.ಐ.ಆರ್ನ ಒಂದು ಹಂತದ ಕಾರ್ಯಕ್ರಮ ಮುಗಿಯುತ್ತದೆ. ಬಿ.ಎಲ್.ಒಳಗು ಪ್ರತಿ ಮನೆಗೆ ಹೋಗಿ ಗಣತಿ ನಮೂನೆಗಳನ್ನು ಕೊಡಬೇಕು. ಅದನ್ನು ಅವರು ಜು.29ರ ಒಳಗೆ ಚುನಾವಣಾ ಆಯೋಗಕ್ಕೆ ಒಪ್ಪಿಸಬೇಕು. ಆದರೆ ತರಾತೂರಿಯಲ್ಲಿ ಒಂದು ತಿಂಗಳ ಕಾಲವಕಾಶದಲ್ಲಿ ಇದನ್ನು ಮಾಡಿ ಮುಗಿಸಬೇಕು. ಆದರೆ ನನಗೆ ತಿಳಿದ ಪ್ರಕಾರ ಹೆಚ್ಚಿನ ಬಿಎಲ್ಒ ಗಳಿಗೆ ಗಣತಿ ನಮೂನೆಯ ಅರ್ಜಿಗಳನ್ನು ಭರ್ತಿ ಮಾಡುವುದು ಗೊತ್ತಿಲ್ಲ. ಯಾಕೆಂದರೆ ಇಲ್ಲಿ ಬಿಎಲ್ಒಗಳು ಹೆಚ್ಚಿನವರು ಅಂಗನವಾಡಿ ಟೀಚರ್ಗಳಾಗಿದ್ದಾರೆ. ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ 221 ಮತಗಟ್ಟೆಗೆ ಅದರಲ್ಲಿ 155 ಅಂಗನವಾಡಿ ಟೀಚರ್ ಉಳಿದವರು ಶಾಲಾ ಟೀಚರ್ಗಳನ್ನು ನೇಮಕ ಮಾಡಿದ್ದಾರೆ ಹೊರತು ಬೇರೆ ಯಾವ ಇಲಾಖೆಯವರು ಕೂಡಾ ಬಿಎಲ್ಒ ಅಗಿ ಇಲ್ಲ. ಎಲ್ಲರು ತಪ್ಪು ತಪ್ಪಾಗಿ ಗಣತಿ ನಮೂನೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಇದರಿಂದ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಈ ಕುರಿತು ಸರಿಯಾದ ಮಾಹಿತಿಯನ್ನು ಚುನಾವಣೆ ಆಯೋಗ ನೀಡುತ್ತಿಲ್ಲ ಎಂದ ಅವರು ಕಾಂಗ್ರೆಸ್ ರಾಜ್ಯಾದ್ಯಂತ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಚುನಾವಣಾ ಆಯೋಗ ಮತ್ತು ಬಿಜೆಪಿ ಎಸ್.ಐ.ಆರ್ ಬಗ್ಗೆ ಅರಿವು ಮೂಡಿಸದೇ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರದಲ್ಲಿದೆ. ಬಿಜೆಪಿ ಯಾಕೆ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಒಟ್ಟಿನಲ್ಲಿ ಬಿಜೆಪಿ ನಕಲಿ ಮತಗಳ ಬಗ್ಗೆ ಬೊಬ್ಬೆ ಹೊಡೆಯುತ್ತಾ ಅಸಲಿ ಮತದಾರರ ರಕ್ಷಣೆಗೆ ಬರುತ್ತಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು.
ಹಲವು ದೋಷಗಳು:
2002ರ ಪಟ್ಟಿಯಲ್ಲಿ ಕೆಲವರ ಹೆಸರೇ ಕಾಣಿಸುತ್ತಿಲ್ಲ ಎಂಬ ದೂರುಗಳಿವೆ. ಆದರೆ ಈ ಕುರಿತು ಚುನಾವಣಾ ಆಯೋಗ ಸರಿಯಾದ ಮಾಹಿತಿ ನೀಡುತ್ತಿಲ್ಲ, ಬಿಎಲ್ಒಗಳಿಗೆ ಎನ್ಯುಮರೇಷನ್ ಫಾರಂ ಭರ್ತಿ ಮಾಡಲು ಗೊತ್ತಿಲ್ಲ. ಚುನಾವಣಾ ಆಯೋಗದ ವೆಬ್ ಸೈಟ್ನಲ್ಲಿ 2002ರ ಮತ ಪಟ್ಟಿಯಲ್ಲಿ ಹಲವು ಪುಟಗಳೇ ಕಾಣೆ. ನಮೂನೆ ಭರ್ತಿ ಮಾಡುವ ವೇಳೆಯಲ್ಲಿ ಮನೆಯ ಸೊಸೆ ಯಾರೊಂದಿಗೆ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎನ್ನುವುದು ಗೊಂದಲ. ವೋಟರ್ ಐಡಿ ಮತ್ತು ಮತದಾರರ ದಾಖಲೆಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರುವವರ ಪರಿಸ್ಥಿತಿ ಏನು. ಹಗಲು ವೇಳೆ ಉದ್ಯೋಗಕ್ಕಾಗಿ ಜನರು ಹೊರಗೆ ಹೋಗುತ್ತಾರೆ. ಬಿ.ಎಲ್.ಒಗಳು ಬಂದಾಗ ಅವರು ಸಿಗದೇ ಗೈರು ಎಂದು ಗುರುತಿಸಲ್ಪಡುವ ಭಯವಿದೆ. ಹಲವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ. ವಿ.ವಿ.ಐ.ಪಿ, ವಿಐಪಿ ಗಳಿಗೆ ವಿಶೇಷ ರಿಯಾಯಿತಿ ಯಾಕೆ ? ಫಾರಂ ಭರ್ತಿ ಮಾಡಲು ಸ್ವಯಂಸೇವಾ ಸಂಸ್ಥೆ ಸಹಾಯವಾಣಿ ತೆರದರೆ ಅದನ್ನು ಅಧಿಕಾರಿಗಳು ಮುಚ್ಚಲು ತಿಳಿಸುತ್ತಿರುವುದು ಯಾಕೆ ಎಂದು ಮಹಮ್ಮದ್ ಆಲಿ ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಪ್ರವೀಣ್ ಮುಂಡೋಡಿ, ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ನಿಯೋಜಿತ ಪದಾಧಿಕಾರಿಗಳಾದ ಮೌರೀಸ್ ಮಸ್ಕರೇನಸ್, ಪ್ರಹ್ಲಾದ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.










