






ಪುತ್ತೂರು: ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಕಂಚಮಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮುಂಭಡ್ತಿ ಪಡೆದು, ವರ್ಗಾವಣೆಗೊಂಡಿರುವ ಡಿ.ಸುರೇಶ್ ಅವರು ಜು.8ರಂದು ಅಧಿಕಾರ ಸ್ವೀಕರಿಸಿದರು.


ಯಶವಂತಪುರ ನಿವಾಸಿಯಾಗಿರುವ ಡಿ.ಸುರೇಶ್ ಅವರು, 1999ರಲ್ಲಿ ಮುಖ್ಯ ಶಿಕ್ಷಕರಾಗಿ ರಾಯಚೂರಿನಲ್ಲಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಶಿಕ್ಷಣ ಇಲಾಖೆಗೆ ನೇಮಕಗೊಂಡಿದ್ದರು. 2002-05ರ ತನಕ ಬಂಟ್ವಾಳ ತಾಲೂಕಿನ ನಾವೂರು ಸರಕಾರಿ ಪ್ರೌಢಶಾಲೆ, 2005-2010ರ ತನಕ ರಲ್ಲಿ ಮೈಸೂರಿನ ಎಚ್.ಡಿ ಕೋಟೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರಾಗಿ, 2010-2026ರ ತನಕ ಮೈಸೂರು ಎಚ್ಡಿ ಕೋಟೆಯ ಕಂಚಿಮಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವಚ್ಯ ನಿರ್ವಹಿಸಿ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಪಡೆದು ವರ್ಗಾವಣೆಗೊಂಡಿರುತ್ತಾರೆ.



ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮೋನಪ್ಪ ಅವರು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಅವರನ್ನು ಸ್ವಾಗತಿಸಿ, ಅಧಿಕಾರ ಹಸ್ತಾಂತರಿಸಿದರು. ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

10 ತಿಂಗಳ ಬಳಿಕ ಪೂರ್ಣಕಾಲಿಕ ಬಿಇಓ:
ಪುತ್ತೂರಿನಲ್ಲಿ ಪೂರ್ಣಕಾಲಿಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಲೋಕೇಶ್ ಎಸ್.ಆರ್ ಅವರು 2025ರ ಸೆಪ್ಟಂಬರ್ನಲ್ಲಿ ವರ್ಗಾವಣೆಗೊಂಡ ಬಳಿಕ ಶಾಂತಿನಗರ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಷ್ಣುಪ್ರಸಾದ್ ಪ್ರಭಾರವಾಗಿ ಕರ್ತವ್ಯ ನಿರ್ವಹಿಸಿ ಮೇ.30ಕ್ಕೆ ಅವರೂ ನಿವೃತ್ತಿಗೊಂಡಿದ್ದರು. ಅವರ ಬಳಿಕ ಪಾಪೆಮಜಲು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಅವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಹತ್ತು ತಿಂಗಳ ಬಳಿಕ ಪೂರ್ಣಕಾಲಿಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಿ.ಸುರೇಶ್ ಅಧಿಕಾರ ಸ್ವೀಕರಿಸಿದ್ದಾರೆ.









