ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಉಳ್ಳಾಲದಲ್ಲಿ ಜು.15ಕ್ಕೆ ಉದ್ಘಾಟನೆ

0

ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 21 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆಯು ಜು.15ರಂದು ನೆಲ ಮಹಡಿ, ನಿಕ್ಸೋನ್ಸ್‌ ಫ್ಲಾಝ, ಉಳ್ಳಾಲದಲ್ಲಿ ಶುಭಾರಂಭಗೊಳ್ಳಲಿದೆ.

ನೂತನ ಶಾಖೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಯು ಟಿ ಖಾದರ್‌ ಫರೀದ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂತ ಸೆಬಾಸ್ಟಿಯನ್‌ ಚರ್ಚ್‌, ಪೆರ್ಮನ್ನೂರು, ತೊಕ್ಕೊಟ್ಟು ಧರ್ಮಗುರುಗಳಾದ ಫಾದರ್‌ ಆಂಡ್ರ್ಯೂ ಲಿಯೊ ಡಿಸೋಜ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ಗೋಕುಲದಾಸ್‌ ನಾಯಕ್, ಉಳ್ಳಾಲ ನಗರಸಭಾ ಪೌರಾಯುಕ್ತರಾದ ಸಂತೋಷ್ ಎಸ್‌ ಡಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ನಿರ್ದೇಶಕಿ ಭಾರತಿ ಜಿ ಭಟ್, ನಿಕ್ಸೋನ್ಸ್‌ ಫ್ಲಾಝ ಉಳ್ಳಾಲ ಮಾಲಕಿ ಜೋಶ್ನಾ ಕೆ ಭಾಗವಹಿಸಲಿದ್ದಾರೆ.

2001ರಲ್ಲಿ ಕಾರ್ಯಾರಂಭಗೊಂಡ ಸಹಕಾರಿಯು ಪ್ರಸಕ್ತ ರಜತ ಮಹೋತ್ಸವ ವರ್ಷಾಚರಣೆ ಮಾಡುತ್ತಿದೆ. ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆ, ಪಾನ್ ಕಾರ್ಡ್, ಸೇಫ್‌ಲಾಕರ್‌ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ದಿನಾಂಕ 30-06-2026 ರಂತೆ ಸಹಕಾರಿಯು 53034 ಸದಸ್ಯರನ್ನು ಹೊಂದಿದ್ದು ರೂ. 426 ಕೋಟಿ ಠೇವಣಾತಿ ಸಂಗ್ರಹಿಸಿ ರೂ. 402 ಕೋಟಿ ಸಾಲ ವಿತರಿಸಿ ರೂ 828 ಕೋಟಿ ವ್ಯವಹಾರ ದಾಖಲಿಸಿದೆ. 2026 ಮಾರ್ಚ್‌ ವರ್ಷಾಂತ್ಯಕ್ಕೆ ರೂ.7.27 ಕೋಟಿ ನಿವ್ವಳ ಲಾಭ ಗಳಿಸಿದ್ದು, 2025-26ನೇ ಸಾಲಿನಲ್ಲಿ ಶೇ 13% ಡಿವಿಡೆಂಡ್ ವಿತರಿಸಲಾಗಿದೆ.

ಪ್ರಸ್ತುತ 119 ಜನ ಸಿಬ್ಬಂದಿಗಳು ಸೇವೆಯಲ್ಲಿ ನಿರತರಾಗಿದ್ದಾರೆ.ಆರ್ಥಿಕ ಸೇವೆಯೊಂದಿಗೆ ಸಾಮಾಜಿಕ ಕಾರ್ಯದಲ್ಲೂ ಸಹಕಾರಿ ಸಕ್ರಿಯವಾಗಿದೆ. 2015ರಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿ ಆಶಕ್ತರಿಗೆ ಆರ್ಥಿಕ ನೆರವು, ಪುಸ್ತಕ ಬಿಡುಗಡೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಾಲಾ-ಕಾಲೇಜುಗಳಿಗೆ ಕೊಡುಗೆ ಸೇರಿದಂತೆ ಇದುವರೆಗೆ ಸುಮಾರು 2 ಕೋಟಿಗೂ ಮಿಕ್ಕಿ ವೆಚ್ಚದ ಸೇವಾ ಕಾರ್ಯಗಳನ್ನು ನಡೆಸಲಾಗಿದೆ. ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಸಹಕಾರಿಯ ಮತ್ತೊಂದು ಶಾಖೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ.ಸದಸ್ಯರು ನೂತನ ಶಾಖೆಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸಿ ಸಹಕಾರಿಯ ಪ್ರಗತಿಗೆ ಕೈಜೋಡಿಸುವಂತೆ ಸಹಕಾರಿಯ ಅಧ್ಯಕ್ಷರಾದ ಎಸ್‌ ಆರ್‌ ಸತೀಶ್ಚಂದ್ರ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here