







ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ನಡೆದ ವಿಪತ್ತು ನಿರ್ವಹಣಾ ಪರಿಶೀಲನಾ ಸಭೆ ಬಳಿಕ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿ ಶೀಟರ್, ಗಡಿಪಾರು ಮಾಡಿದ ವರದಿ ಕೇಳಿ ಮಾಜಿ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಶೂಟ್ ಮಾಡುತ್ತಿದ್ದರು ಎಂದು ಉಲ್ಲೇಖಿಸುವ ಮೂಲಕ ಎನ್ಕೌಂಟರ್ಗೆ ಉತ್ತೇಜನ ನೀಡುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ. ಈ ನಿಟ್ಟಿನಲ್ಲಿ ಸಚಿವರು ರಾಜೀನಾಮೆ ನೀಡುವಂತೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ಸಾದತ್ ಅವರು ಆಗ್ರಹಿಸಿದ್ದಾರೆ.


ಪುತ್ತೂರು ಪತ್ರಿಕಾ ಭವನದ ಬಳಿಕ ಅವರು ಮಾಧ್ಯಮದ ಮುಂದೆ ಮಾತನಾಡಿದರು. ಮುಖ್ಯಮಂತ್ರಿಗಳು ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಕ್ಕೆ ಸಭೆ ನಡೆಸಲು ಸಚಿವರನ್ನು ಮಂಗಳೂರಿಗೆ ಕಳುಹಿಸಿದ್ದರು. ಆದರೆ ಇಲ್ಲಿ ಬಂದು ಆ ಸಭೆ ನಡೆಸಿದ ಬಳಿಕ ಸ್ವಲ್ಪ ಓವರ್ ಸ್ಮಾರ್ಟ್ ಆಗಲು, ಹೀರೋ ತೋರಿಸಲು ಇಂತಹ ಪ್ರಶ್ನೆಗಳನ್ನು ಖಾದರ್ ಅವರು ಮಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಲಾ ಆಂಡ್ ಆರ್ಡರ್ ನಿರ್ವಹಿಸುವ ಕಮೀಷನರೇಟ್ ಅಧಿಕಾರಿಯಲ್ಲಿ ಶೂಟ್ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದಾದರೆ ಇವರಿಗೆ ಅಧಿಕಾರ ಕೊಟ್ಟವರು ಯಾರು. ಎನ್ಕೌಂಟರ್ ಮಾಡುವುದು ಸಂವಿಧಾನ ವಿರೋಧಿ ಕೃತ್ಯ. ಎಲ್ಲಿಯೂ ಶೂಟ್ ಮಾಡಲು ಹೇಳುತ್ತಿಲ್ಲ. ಯುಟಿ ಖಾದರ್ ಸ್ವತಃ ಕಾನೂನು ಪದವಿ ಮಾಡಿದವರು. ಅವರು ವಕೀಲರು. ಅವರು ಓದಿದ ಲಾ ದಲ್ಲಿ ಶೂಟ್ ಮಾಡಲು ಹೇಳಿದೆಯಾ? ಎಂದು ಪ್ರಶ್ನಸಿದ ಅವರು ಎಲ್ಲಿಯೂ ಶೂಟ್ ಮಾಡಲು ಯಾವ ಅಧಿಕಾರಿಗೂ ಅನುಮತಿ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಅದರದ್ದೇ ಆದ ಘನತೆ ಗೌರವ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದೆ. ಇಲ್ಲಿನ ಮಂಗಳೂರು, ಉಡುಪಿ ಕಮೀಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಸೇರಿ ಮೂವರು ಕಮ್ಯುನಿಕೇಷನ್ ಮಾಡಿಕೊಂಡು ಕ್ರಿಮಿನಲ್ ನಿಯಂತ್ರಣ ಮಾಡುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಬಂದೂಕು ಉಪಯೋಗಿಸಿಲ್ಲ. ಕಾನೂನು ಉಪಯೋಗಿಸಿ ಜಿಲ್ಲೆಯನ್ನು ನೆಮ್ಮದಿಯಲ್ಲಿಟ್ಟುಕೊಂಡಿದ್ದಾರೆ. ಆದರೆ ಸಚಿವರಾಗಿರುವ ಯೂ.ಟಿ ಖಾದರ್ ಅವರ ಚೇಲಗಳಿಗೆ ದಂಧೆ ಮಾಡಲು ಸಮಸ್ಯೆ ಆಗಿದೆ. ಈ ಅಧಿಕಾರಿಗಳಿದ್ದರೆ ನಮಗೆ ಸಮಸ್ಯೆ ಆಗುತ್ತದೆ. ಏನಾದರೂ ಮಾಡಿ ಕಾಂಟ್ರವರ್ಸಿ ಆಗಬೇಕೆನ್ನುವ ರೀತಿಯ ಕೆಲಸ ಮಾಡುತ್ತಿದ್ದಾರೆ. ಆಗ ಇವರನ್ನು ಕಳುಹಿಸಿ ತಮ್ಮ ಬೇಲೆ ಬೇಯಿಸಲು ಸುಲಭ ಆಗುತ್ತದೆ ಎಂದು ಎನಿಸಿಕೊಂಡಿದ್ದಾರೆ. ಹಿಂದೊಮ್ಮೆ ಪುತ್ತೂರು ಶಾಸಕರಾದ ಅಶೋಕ್ ರೈ ಕಾಲಿಗೆ ಶೂಟ್ ಮಾಡುವ ಬದಲು ತಲೆಗೆ ಶೂಟ್ ಮಾಡಲು ಹೇಳಿದ್ದರು. ಅದನ್ನು ಒಪ್ಪಲು ಸಾಧ್ಯವಿಲ್ಲ. ಅದೇ ಅರ್ಥದಲ್ಲಿ ಖಾದರ್ ಅವರು ಅವಿವೇಕತನದಲ್ಲಿ ತನ್ನ ನಡೆಯನ್ನು ಪ್ರದರ್ಶಿಸಿದ್ದಾರೆ. ಇದು ದೊಡ್ಡ ಸಂವಿಧಾನ ವಿರೋಧಿ ಕೆಲಸ. ಹಾಗಾಗಿ ಮುಖ್ಯಂತ್ರಿಗಳು ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರಿಗೆ ಯಾವುದೆ ಅಡೆತಡೆ ಇಲ್ಲದೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಎಸ್ಡಿಪಿಐ ಮುಖಂಡ ರಹೀಮ್ ಉಪಸ್ಥಿತರಿದ್ದರು.













