ಮುಂಡೂರು ಶಾಲೆಗೆ 2.5ಲಕ್ಷ ರೂ. ದೇಣಿಗೆ ನೀಡಿದ ಹಿರಿಯ ವಿದ್ಯಾರ್ಥಿ

0

ಪುತ್ತೂರು: ಶತಮಾನದ ಇತಿಹಾಸ ಹೊಂದಿರುವ ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಯೊಬ್ಬರು ಬೃಹತ್ ಮೊತ್ತದ ಧನಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.


ಶಾಲೆಯ ಸಂಸ್ಥಾಪಕರ ಕುಟುಂಬದ ಸದಸ್ಯ ಹಾಗೂ ಊರಿನ ಪ್ರಗತಿಪರ ಕೃಷಿಕರಾದ ಪಜಿಮಣ್ಣು ಎಂ.ಪಿ. ಬಾಲಕೃಷ್ಣ ಅವರು ತನಗೆ ಅಕ್ಷರ ಕಲಿಸಿದ ಶಾಲೆಗೆ 2,50,000 ರೂ. ದೇಣಿಗೆ ನೀಡಿ ಮಾದರಿಯಾಗಿದ್ದಾರೆ. ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದ ಎಂ.ಪಿ ಬಾಲಕೃಷ್ಣ ಅವರು, ಶಾಲೆಯ ಪ್ರಗತಿ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಅವಲೋಕಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗೆ ತುರ್ತಾಗಿ ಹೊಸ ತರಗತಿ ಕೊಠಡಿಯೊಂದರ ಅಗತ್ಯವಿರುವುದನ್ನು ಮನಗಂಡ ಅವರು, ತಕ್ಷಣವೇ ಶಾಲೆಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ನೀಡಿದ ಭರವಸೆಯಂತೆ ಶಾಲಾ ಮುಖ್ಯ ಶಿಕ್ಷಕಿ ವಿಜಯ ಪಿ ಅವರ ಕೈಯಲ್ಲಿ ರೂ.2.5 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಭಾನುಮತಿ ಉಪಸ್ಥಿತರಿದ್ದರು.

ಮಾತೃಶಾಲೆಯ ಋಣ ತೀರಿಸುವುದು ನನ್ನ ಕರ್ತವ್ಯ:
ದೇಣಿಗೆ ನೀಡಿ ಮಾತನಾಡಿದ ಎಂ.ಪಿ ಬಾಲಕೃಷ್ಣ ಅವರು, ನಾನು ಇದೇ ಶಾಲೆಯ ಅಂಗಳದಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿದವನು. ಇಂದು ನಾನು ಈ ಮಟ್ಟಕ್ಕೆ ಬರಲು ಅಡಿಪಾಯ ಹಾಕಿದ ನನ್ನ ಶಾಲೆಗೆ ನನ್ನಿಂದ ಕೈಲಾದ ಸೇವೆ ಸಲ್ಲಿಸುವುದು ನನ್ನ ಮೊದಲ ಕರ್ತವ್ಯ ಎಂದು ಭಾವಿಸುತ್ತೇನೆ. ಈ ಹಣವನ್ನು ಶಾಲಾ ಸ್ಥಾಪಕ ಕೆಯ್ಯೂರು ಕೃಷ್ಣಯ್ಯ ಹಾಗೂ ಗತ ಕುಟುಂಬದ ಸ್ಮರಣಾರ್ಥ ಶಾಲೆಗೆ ಸಮರ್ಪಿಸುತ್ತಿದ್ದೇನೆ ಎಂದು ಅವರು ಹೇಳಿದರು.

೨೦೨೭-೨೮ನೇ ಸಾಲಿನಲ್ಲಿ ಮುಂಡೂರು ಶಾಲೆಗೆ ಐತಿಹಾಸಿಕ 100 ವರ್ಷ ತುಂಬುತ್ತಿದ್ದು, ಶತಮಾನೋತ್ಸವ ಆಚರಣೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಂದಿರುವ ಈ ಕೊಡುಗೆಯು ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಆನೆಬಲ ತಂದಿದೆ. ಎಂ.ಪಿ ಬಾಲಕೃಷ್ಣ ಅವರ ಈ ಸಮಾಜಮುಖಿ ಸೇವೆಯನ್ನು ಶತಮಾನೋತ್ಸವದ ಸಂಭ್ರಮದ ವೇದಿಕೆಯಲ್ಲಿ ವಿಶೇಷವಾಗಿ ಸ್ಮರಿಸಲಾಗುವುದು ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ತಿಳಿಸಿದೆ. ಗ್ರಾಮೀಣ ಭಾಗದ ಸರಕಾರಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ದಾನಿ ಎಂ.ಪಿ ಬಾಲಕೃಷ್ಣ ಅವರಿಗೆ ಶಾಲಾ ಮುಖ್ಯಶಿಕ್ಷಕಿ ವಿಜಯಾ ಪಿ, ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here