






ಪುತ್ತೂರು:ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಮಾಜಿ ಶಾಸಕ ಸಂಜೀವ ಮಠಂದೂರು ಸಲ್ಲಿಸಿದ್ದ ಖಾಸಗಿ ದೂರು(ಪಿ.ಸಿ.ಆರ್. ನಂ.11/2026)ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಪುತ್ತೂರು ನ್ಯಾಯಾಲಯ ಹಿಂತಿರುಗಿಸಿದ್ದು,ದೂರುದಾರರು ಕಾನೂನುಬದ್ಧ ಅಧಿಕಾರ ವ್ಯಾಪ್ತಿ ಹೊಂದಿರುವ ಸೂಕ್ತ ನ್ಯಾಯಾಲಯದ ಮುಂದೆ ಹೋಗುವಂತೆ ನಿರ್ದೇಶಿಸಿದೆ.


ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರಿಕಾ ಮಾಧ್ಯಮದವರ ಮುಂದೆ ‘ಪುತ್ತೂರಿನ ಇದೇ ಹಿಂದಿನ ಮಾಜಿ ಶಾಸಕರು ಅವರ ಸಮಯದಲ್ಲಿ ಹಕ್ಕು ಪತ್ರ ನೀಡಲು ಎಕ್ರೆಗೆ 2 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಿದ್ದರು.ನನ್ನಲ್ಲಿ 45 ಜನ ಸಾಕ್ಷಿಗಳು ಇದ್ದಾರೆ ಎಂದು ಆರೋಪ ಮಾಡಿದ್ದಾರೆ.ತನ್ನನ್ನೇ ಗುರಿಯಾಗಿ ಮಾನಹಾನಿ ಮಾಡಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.



ಆರಂಭದಲ್ಲಿ ಮಠಂದೂರು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಕುರಿತು ನ್ಯಾಯಾಲಯದ ಅನುಮತಿಗಾಗಿ ಪೊಲೀಸರು ಹಿಂಬರಹ ನೀಡಿದ್ದರು.ಅದರಂತೆ ಸಂಜೀವ ಮಠಂದೂರು ಅವರು ವಕೀಲ ಶಿವಾನಂದ ಎಂ.ವಕ್ಕೆತ್ತಿರಿ ವಿಟ್ಲ ಅವರ ಮೂಲಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜು.4ರಂದು ಪುತ್ತೂರಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಮಠಂದೂರು ಅವರು ಶಾಸಕ ಅಶೋಕ್ ರೈ ವಿರುದ್ಧ ದಾಖಲೆ ಸಹಿತ ಪ್ರಕರಣ ದಾಖಲಿಸಿದ್ದರು.
ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್)ಕಲಂ 224ರಡಿ ಪ್ರಕರಣವನ್ನು ಪರಿಶೀಲಿಸಿದ ಪುತ್ತೂರು ನ್ಯಾಯಾಲಯವು,ಈ ಪ್ರಕರಣದ ವಿಚಾರಣೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿಲ್ಲವಾದ್ದರಿಂದ ದೂರುದಾರರು ಕಾನೂನುಬದ್ಧವಾಗಿ ಅಧಿಕಾರ ವ್ಯಾಪ್ತಿ ಹೊಂದಿರುವ ಸೂಕ್ತ ನ್ಯಾಯಾಲಯದ ಮುಂದೆ ಖಾಸಗಿ ದೂರನ್ನು ಮಂಡಿಸಬಹುದೆಂದು ಸೂಚಿಸಿ ದೂರನ್ನು ಹಿಂತಿರುಗಿಸಿದೆ.ಪುತ್ತೂರು ನ್ಯಾಯಾಲಯದಲ್ಲಿ ಪ್ರಕರಣ ಬೆಂಗಳೂರು 42ನೇ ಸಿಟಿ ಸಿವಿಲ್ ನ್ಯಾಯಾಲಯ(ಜನಪ್ರತಿನಿಧಿಗಳ ವಿರುದ್ಧದ ಪ್ರಕರಣದ ವಿಚಾರಣೆಯ ವಿಶೇಷ ನ್ಯಾಯಾಲಯ)ಕ್ಕೆ ವರ್ಗಾವಣೆಗೊಂಡಿದೆ ಎಂದು ದೂರುದಾರ ಮಠಂದೂರು ಪರ ವಕೀಲ ಶಿವಾನಂದ ಅವರು ತಿಳಿಸಿದ್ದಾರೆ.










