







ಮಲಯಾಳಂ ಮೂಲದ ಹೊಸ ತಲೆಮಾರಿನ ಬಹುನಿರೀಕ್ಷಿತ ಚಿತ್ರ ‘ಅಚ್ಯುತ ಅವತಾರಂ’ ಇದೇ ಜುಲೈ 17 ರಂದು (ನಾಳೆ )ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಪುನೀತ್ ಅವರ ಚೊಚ್ಚಲ ನಿರ್ದೇಶನ ಹಾಗೂ ನಿರ್ಮಾಣದ ‘ರಾಯರಾ ವೆಂಚರ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರವು ಈಗಾಗಲೇ ತನ್ನ ವಿಭಿನ್ನ ಟ್ರೇಲರ್ ಮತ್ತು ಪೋಸ್ಟರ್ಗಳ ಮೂಲಕ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.


ಚಿತ್ರದ ಕಥೆ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯೊಂದನ್ನು ಆಧರಿಸಿದೆ. ಒಂದು ಮಧ್ಯಮ ವರ್ಗದ ಸಾಧಾರಣ ಕುಟುಂಬವು ಭೀಕರ ಸೈಬರ್ ಹಗರಣಕ್ಕೆ ಸಿಲುಕಿ ಜರ್ಜರಿತವಾಗುತ್ತದೆ. ತನ್ನ ಇಡೀ ಕುಟುಂಬದ ನೆಮ್ಮದಿ ಹಾಗೂ ಅಸ್ತಿತ್ವವೇ ಅಪಾಯದಲ್ಲಿರುವಾಗ, ಆ ಕುಟುಂಬದ ಧೀಮಂತ ಮಹಿಳೆಯೊಬ್ಬಳು, ಈ ಡಿಜಿಟಲ್ ಕರಾಳ ಲೋಕದ ವಿರುದ್ಧ ಹೇಗೆ ಧರ್ಮಯುದ್ಧ ಸಾರುತ್ತಾಳೆ ಎಂಬುದೇ ಚಿತ್ರದ ಮುಖ್ಯ ಕಥಾಹಂದರ.



ಅವತಾರ ಅಂದರೆ ಕೇವಲ ಸೂಪರ್ ಹೀರೋ ಬರುವುದಲ್ಲ, ಸಾಮಾನ್ಯ ಮನುಷ್ಯನಲ್ಲಿ ಧೈರ್ಯ ಜಾಗೃತವಾಗುವುದು.” ಎಂಬ ಪ್ರಭಾವಶಾಲಿ ಸಾಲನ್ನೇ ಚಿತ್ರತಂಡ ತನ್ನ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ.ಸೈಬರ್ ಅಪರಾಧದ ಕಥೆಗೆ ಕರಾವಳಿಯ ಆಚರಣೆ ಅಥವಾ ಆಧ್ಯಾತ್ಮಿಕ ಆಯಾಮವನ್ನು ಬೆರೆಸಿರುವುದು ಹೊಸ ಅನುಭವ ನೀಡುವ ಮುನ್ಸೂಚನೆ ನೀಡಿದೆ.ಮಾಳವಿಕಾ ನಂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಎಲ್ಲರ ಗಮನ ಸೆಳೆಯಲಿದೆ. ಇದರೊಂದಿಗೆ ಹಿರಿಯ ನಟ ಅವಿನಾಶ್ ಹಾಗೂ ಸೀಮಾ ಜಿ. ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ಮೀನಾಕ್ಷಿ ಅವರ ಛಾಯಾಗ್ರಹಣ ಹಾಗೂ ಪ್ರಸನ್ನ ಎಂ.ಎಸ್. ಅವರ ಸಂಗೀತ ಪ್ರಶಂಸೆ ಗಳಿಸಲಿದೆ.
‘ಅಚ್ಯುತ ಅವತಾರಂ’ ಕೇವಲ ಕಮರ್ಷಿಯಲ್ ಸಿನಿಮಾ ಆಗಿರದೆ, ಪ್ರಸ್ತುತ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವಾದ ಸೈಬರ್ ಕ್ರೈಂ ಜಾಗೃತಿಯನ್ನು ಕೌಟುಂಬಿಕ ಭಾವನೆಗಳೊಂದಿಗೆ ತೆರೆದಿಡುವ ಪ್ರಯತ್ನವಾಗಿದೆ. ಕರಾವಳಿಯ ಜನರಿಗೆ ಹತ್ತಿರವಾಗುವಂತಹ ಸಂಸ್ಕೃತಿಯ ಎಳೆಯೂ ಚಿತ್ರದಲ್ಲಿದೆ.ಜುಲೈ 17 ರಂದು ಚಿತ್ರ ಬಿಡುಗಡೆಯಾದ ಬಳಿಕ, ಈ ‘ಅವತಾರ’ ಪ್ರೇಕ್ಷಕರ ಮನಸ್ಸನ್ನು ಹೇಗೆ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ!










